ಬಳ್ಳಾರಿ

ಭಾರತ ಸಂವಿಧಾನ ಅತ್ಯಂತ ಪವಿತ್ರ ಗ್ರಂಥ: ಉಪನಿರ್ದೇಶಕ ಡಾ.ಜಿ.ಡಿ.ಹಳ್ಳಿಕೇರಿ

ಭಾರತ ಸಂವಿಧಾನ ಅತ್ಯಂತ ಪವಿತ್ರ ಗ್ರಂಥ: ಉಪನಿರ್ದೇಶಕ ಡಾ.ಜಿ.ಡಿ.ಹಳ್ಳಿಕೇರಿ

ಬಳ್ಳಾರಿ(ವಿಜಯನಗರ) 30: ಭಾರತದ ಸಂವಿಧಾನವು ಅತ್ಯಂತ ಪವಿತ್ರ ಗ್ರಂಥವಾಗಿದ್ದು ಗಣರಾಜ್ಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳನ್ನು ಹೊಂದಿದೆ. ಇಂತ ಪವಿತ್ರಗ್ರಂಥದ ಕುರಿತು ಹೊಸಪೀಳಿಗೆ ಸಮರ​‍್ಕವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಕ್ಷೇತ್ರ ಜನಸಂಪರ್ಕ ಕಾರ್ಯಲಯದ ಉಪನಿರ್ದೇಶಕ ಡಾ.ಜಿ.ಡಿ.ಹಳ್ಳಿಕೇರಿ ಅವರು ಹೇಳಿದರು. 

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಕೌದಿ ಮಹಾಂತೇಶ್ವರ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿಯ ಕೌದಿ ಮಹಾಂತೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನದ ದಿನಾಚರಣೆ ಮಕ್ಕಳ ಹಕ್ಕು ಮತ್ತು ಕಲ್ಪನೆ, ಪೌಷ್ಟಿಕಾಂಶ, ಆಜಾದಿ ಕಾ ಅಮೃತ್ ಮಹೋತ್ಸವ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಸೇರಿದಂತೆ ಅನೇಕ ಪ್ರಮುಖ ಅಂಶಗಳನ್ನು ಒಳಗೊಂಡಿರುವ ಸಂವಿಧಾನ ನಮ್ಮದು. ದೇಶಕ್ಕೆ ಸೂಕ್ತವಾದ ಸಂವಿಧಾನ ನೀಡಲು ಡಾ.ಬಿ.ಆರ್‌.ಅಂಬೇಡ್ಕರ ರವರು 60ಕ್ಕೂ ಹೆಚ್ಚು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿದ್ದರು ಎಂದು ವಿವರಿಸಿದರು. 

ಹೊಸ ಪೀಳಿಗೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು ಮತ್ತು ಸಂವಿಧಾನವನ್ನು ಉತ್ತಮ ರೀತಿಯಲ್ಲಿ ಅರ್ಥ ಮಾಡಿಸುವುದು ಸಂವಿಧಾನ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೌದಿ ಮಹಾಂತೇಶ್ವರ ಪ್ರೌಢಶಾಲೆಯ ಮುಖ್ಯೋಪಾದ್ಯಯರಾದ ಲಿಂಗರಾಜ ದಾವಣಗೇರಿ ಅವರು ಮಾತನಾಡಿ ಸಂವಿಧಾನವು ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಮೂಲ ತತ್ವಗಳ ಒಂದು ಅಂಗವಾಗಿದೆ. ನಾಗರಿಕರ ಹಕ್ಕುಗಳನ್ನು ಮತ್ತು ಘನತೆಯನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿಶೇಷ ಉಪನ್ಯಾಸ ನೀಡಿದ ಬಿ.ಜಿ.ಹಳ್ಳಿ ಜೂನಿಯರ್ ಕಾಲೇಜಿನ ಉಪನ್ಯಾಸಕ ಐಮದ್ ಅಲಿ ಅವರು ಸಂವಿಧಾನದ ಮೂಲಭೂತ ಹಕ್ಕುಗಳು, ಕಾರ್ಯಾಂಗ, ಶಾಸಕಾಂಗ, ಮತ್ತು ನ್ಯಾಯಾಂಗಗಳ ಕಾರ್ಯವಿಧಾನ,ಭಾರತೀಯ ಸಂಸದೀಯ ವ್ಯವಸ್ಥೆ, ಸಂವಿಧಾನದ ರಚನೆ ವಿಷಯಗಳ ಕುರಿತು ಮಾಹಿತಿ ನೀಡಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಲಲಿತಮ್ಮ  ಮತ್ತು ಶ್ಯಾಮಲಾ ಅವರು ಮಕ್ಕಳ ಹಕ್ಕುಗಳು ಹಾಗೂ ಪೌಷ್ಠಿಕತೆ ಕುರಿತು ಮಾಹಿತಿ ನೀಡಿದರು. 

ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಂದ ಜಾಗೃತಿ ಜಾಥಾ, ಚಿತ್ರಕಲೆ, ರಂಗೋಲಿ ಮತ್ತು ಭಾಷಣ ಸ್ಪರ್ದೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಶಾಲಾಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ ಹೆಗಡೆ ಕರಿಬಸಯ್ಯ, ಕಲ್ಮನಿ ವಿರುಪಾಕ್ಷಪ್ಪ, ಮೇಘರಾಜ, ಹೊಸ್ಕೇರಿ ವಿರುಪಾಕ್ಷಪ್ಪ, ಭಾವಿಹಳ್ಳಿ ಕೊಟ್ರೇಶ, ಕೌದಿ ಮಹಾಂತೇಶ್ವರ ಪ್ರೌಢಶಾಲೆಯ ಶಿಕ್ಷಕರಾದ ವಿ.ಎನ್‌.ಹಾಲಗಿ, ವಿ.ಪ್ರಕಾಶ, ಶರಣಮ್ಮ ಮತ್ತು ಶಾಲಾ ಸಿಬ್ಬಂದಿ ಇದ್ದರು. 


ಸುದ್ದಿ ಓದಿ