ಲೇಖನಗಳು

ಕೊನೆಯ ಮೊಗಲ್ (ಗಜಲ್) ಸಾಮ್ರಾಟನ ಅಂತಿಮ ದಿನಗಳು

ಕೊನೆಯ ಮೊಗಲ್ (ಗಜಲ್) ಸಾಮ್ರಾಟನ ಅಂತಿಮ ದಿನಗಳು

ನನಗೆ ಸಿಕ್ಕಿದ್ದು ನಾಲ್ಕು ದಿವಸಗಳಲ್ಲಿ  

ಎರಡು ದಿನಗಳು ಬಯಕೆಯಲ್ಲಿ  

ಇನ್ನೆರಡು ದಿನಗಳು ಸಾಯುವುದರಲ್ಲಿ  

(ಗಡಿ ಪಾರಾದ ಮೇಲೆ ರಂಗೂನಿನ ಸೆರೆಮನೆಯಲ್ಲಿ ದೊರೆ ಝಫರ ಬರೆದ ಅಪೂರ್ಣ ಗಜಲ್ ಇದು)  

ಭಾರತದ ಇತಿಹಾಸದಲ್ಲಿ ಮೊಗಲ ಸಾಮ್ರಾಟರ ಬಗ್ಗೆ ಎಲ್ಲರಿಗೂ ತಿಳಿದಿರುವಂತಹದೇ, ಆದರೆ ಬ್ರಿಟಿಷರು ಭಾರತಕ್ಕೆ ಬಂದು ತಮ್ಮ ವಸಾಹತು ಸ್ಥಾಪಿಸಿಕೊಂಡು ಇಲ್ಲಿಯ ಆಳರಸರ ಒಂದೊಂದು ಸಾಮ್ರಾಜ್ಯ ಕಿತ್ತುಕೊಂಡು ಅವರನ್ನು ನೆಪಕ್ಕೆ ಅಧಿಕಾರದಲ್ಲಿ ಕೂಡಿಸಿ ಅವರಿಗೆ ಪಿಂಚಣಿ ರೂಪದಲ್ಲಿ ಮಾಶಾಸನ ನೀಡತೊಡಗಿದ್ದು ಸಹ ಅನೇಕ ರಾಜವಂಶದ ಚರಿತ್ರೆ ಬಲ್ಲವರಿಗೆ ಗೊತ್ತು ಇರುವಂತಹದೇ, ಅಂತಹದೇ ಒಬ್ಬ ಮೊಗಲ ಸಾಮ್ರಾಟ  ಕೊನೆಯ ಬಾದಷಹ ಬಹದ್ದೂರ ಜಫರನ (ಜಾಫರ್) ಕೊನೆಯ ದಿನಗಳ ಸುತ್ತ ಹೆಣೆದ ಕಥೆ ಇದು.ಈತ ಒಬ್ಬ ಕವಿಯಾಗಿದ್ದ,ಸೂಫಿಯಾಗಿದ್ದ, ಸ್ವತಹ ಒಬ್ಬ ಗಜಲ್ ಕಾರನಾಗಿದ್ದ ಹಾಗೂ ಆತನ ಕಾಲದಲ್ಲಿ ದೆಹಲಿಯ ಲಾಲಕೀಲಾದಲ್ಲಿ ಬೆಳಬೆಳತನಕ ಗಜಲ್ ಮುಷಾಯಿರಾಗಳು ನಡಿತಾ ಇದ್ದವು.  

ಗಜಲ್  

ಸ್ವರ್ಗದ ಸುತ್ತುತ್ತಿರುವ ಅಕ್ಷವು ನೀರಿನ ತುಟಿಯ ಅಂಚಿನಲ್ಲಿಲ್ಲ  

ಕಾಮನಬಿಲ್ಲಿನ ಕಮಾನಿನ ಬೆರಳ ಉಗುರುಗಳು ವಾದ್ಯದ   ತಂತಿಯನು ಹೋಲುವುದಿಲ್ಲ  

-ಅಬ್ದ ಉರ ರಹಮಾನ್‌.  

ಹೀಗೆ ಮಿರ್ಜಾ ಗಾಲೀಬ್‌ನ ಗಜಲ್‌ಗಳ ಕುರಿತು ಮೇಲಿನಂತೆ ವಿಡಂಬಿಸುತ್ತಾನೆ. ಇನ್ನೊಬ್ಬ ಕವಿ ಇದನ್ನು ಒಪ್ಪಿ ನಾವು  ಮೀರನ ಕಾವ್ಯವನ್ನು, ಮಿರ್ಜಾನ ಭಾಷೆಯನ್ನು  ಅರ್ಥಮಾಡಿಕೋತೇವೆ. ಆದರೆ ಗಾಲಿಬ್‌ನ ಕಾವ್ಯ ಅರ್ಥಮಾಡಿಕೋದು ದೇವರಿಗೆ ಮಾತ್ರ ಸಾಧ್ಯ ಅಂತ ಝಕ ಹೇಳುತ್ತಾನೆ.(ಕಾದಂಬರಿ ಪುಟ ಸಂಖ್ಯೆ 18). ಹೀಗೆ ಮುಷಾಯಿರಾ ಇಟ್ಟುಕೊಂಡು ಒಂದೊಂದು ದಿನ ಬೆಳಗಾನ ಚರ್ಚೆ ನಡೆದ ಉಲ್ಲೇಖಗಳು ಈ ಕಾದಂಬರಿ ಹೇಳುತ್ತದೆ. ಇನ್ನೊಂದು ಗಾಲಿಬ್ ಹೇಳಿದ ಮಾತು ಸಹ ಇಲ್ಲಿ ಬಹು ಮುಖ್ಯವಾಗಿದೆ ಹಾಗೂ ತಮಾಷೆದಾಯಕವಾಗಿದೆ ಮತ್ತು ಗಾಲಿಬ್ ನನ್ನು ಪರಿಚಯಿಸುತ್ತದೆ.  

ಅರಮನೆಯಲ್ಲಿ ನಡೆವ ಮದುವೆಯ ಐದು ದಿನಗಳ ಮೊದಲಷ್ಟೆ ಜೂಜಾಡಿದ್ದಕ್ಕೆ ಗಾಲಿಬ್ ನನ್ನು ಬಂಧಿಸಿದ್ದರು.ಇದನ್ನು ಪ್ರತಿಷ್ಠೆಯಾಗಿ ಗಾಲಿಬ್ ಸ್ವೀಕರಿಸಿದ್ದನಂತೆ. ಯಾರೋ ಒಬ್ಬರು ಗಾಲಿಬ್ ನ ಎದುರು ಚರ್ಚೆಯಲ್ಲಿ ಶೈಖ್ ಸಹ್ಬೈನ ಕಾವ್ಯವನ್ನು ಹೊಗಳಿದಾಗ ಸಿಡಿದೆದ್ದ ಗಾಲಿಬ್ ಹೇಳಿದ್ದು ಹೀಗೆ.. ಸಹ್ಬೈ ಕವಿಯಾಗಲೂ ಹೇಗೆ ಸಾಧ್ಯ? ಅವನು ವೈನಿನ  ರುಚಿ ನೋಡಲಿಲ್ಲ.ಅವನೆಂದೂ ಜುಜಾಡಲಿಲ್ಲ. ಅವನು ಪ್ರಿಯತಮೆಯರಿಂದ ಚಪ್ಪಲಿ ಏಟುಗಳನ್ನು ತಿನ್ನಲಿಲ್ಲ. ಒಮ್ಮೆಯೂ ಜೈಲಿನೊಳಗೆ ಹೋಗಲಿಲ್ಲ (ಕಾದಂಬರಿ ಪುಟ-19) ಅಂತಹವನು ಅದೇಗೆ ಕವಿಯಾಗುತ್ತಾನೆ. ಎಂದು ಜಗಳಕ್ಕೆ ಬಿದ್ದಿದ್ದನಂತೆ ಗಾಲಿಬ್‌. ತನ್ನ ಹಾಗೇ ಯಾರು ದ್ವಿಪದಿ ರಚಿಸಲಾರರು. ಅದನ್ನು ಕವಿ ಝಾಕ, ಆತನ ಶಿಷ್ಯ ಆಝಾದ ಹಾಗೂ ಸ್ವತಹ ಅರಸು ಸುಲ್ತಾನ್ ಝಫರಗೂ ಸಹ ಸೇರಿಸಿ ಹೇಳಿದ್ದನಂತೆ... ಇಂತಹ ಹಲವು ಸಂವಾದಗಳು ಅರಮನೆಯಲ್ಲಿ ಕವಿ, ಸೂಫಿ,ಗಜಲ್ ಲೇಖಕ ಕೊನೆಯ ಅರಸು ಆದ ಜಫರ ಸಮ್ಮುಖದಲ್ಲಿ ನಡೀತಾ ಇದ್ದದ್ದು ನೋಡಿದರೆ ಈ ಅರಸು ಎಷ್ಟು ಕಾವ್ಯಪ್ರೇಮಿ ಆಗಿದ್ದನೆಂದು ಅರ್ಥವಾಗುತ್ತದೆ.ಈ ಗಜಲ್ ಕವಿಗಳ ಜಗಳ ಹಾಗೂ ಅವರ ಗಜಲ್ ಗಳು ಮರುದಿನ ದೆಹಲಿಯ ಪತ್ರಿಕೆಗಳಲ್ಲಿ ಅರಮನೆಯ ಸ್ವಾರಸ್ಯಕರ ಪ್ರಸಂಗಗಳಾಗಿ ಪ್ರಕಟ ಆಗುತ್ತಿದ್ದವಂತೆ.(ಗಾಲಿಬ್ ಆಗಬೇಕೆನ್ನುವವರು ಎಂತಹ ಗುಣ ಲಕ್ಷಣಗಳನ್ನು ಹೊಂದಿರಬೇಕು ಅಂತ ಸ್ವತಹ ಗಾಲಿಬ್ ಹೇಳಿಕೊಂಡಿದಾನೆ. ಕೆಲವು ಅಧುನಿಕ ಗಾಲಿಬ್ ರು,ಇದನ್ನು ಗಮನಿಸಲಿ)  

ಈತನ ಆಸ್ಥಾನದಲ್ಲಿ ಖ್ಯಾತನಾದ ಮಿರ್ಜಾ ಗಾಲಿಬ್ ನಿಂದ ಹಿಡಿದು ಆತನ ತಲೆಮಾರಿನ ಅನೇಕ ಕವಿಗಳು. ಸಂಗೀತಗಾರರು, ನರ್ತಕಿಯರು, ದಿನ ನಿತ್ಯ ಹಾಡಿ ಕುಣಿದ ಒಂದು ವೈಭೋಗ ನೆನಪಿಸುವದರ ಜೊತೆ ಜೊತೆಗೆ ಆತನ ಅಂತಿಮ ದಿನಗಳು ಹೇಗೆ ದಿಕ್ಕುಗೆಡಿಸಿ ಒಂದು ಉತ್ತುಂಗದ ಜೀವ ಹೇಗೆ ಕಾಲನ ಹೊಡೆತಕ್ಕೆ ಸಿಕ್ಕು ಮಮ್ಮಲ ಮರುಗುವಂತಾಯಿತು ಎಂಬುದು ಈ ಕಾದಂಬರಿ ದಟ್ಟವಾಗಿ ಕಟ್ಟಿಕೊಟ್ಟಿದೆ. ಈ ಅರಸನಿಗೆ ಅಧಿಕೃತವಾಗಿ 32 ಜನ ರಾಣಿಯರು, 103 ಜನ ಆತ ಅಧಿಕೃತವಾಗಿ ಇಟ್ಟುಕೊಂಡ ದೊರೆಸಾನಿಗಳು ಆತನ ಜನಾನಾದಲ್ಲಿ ವಾಸ ಇರುತ್ತಾರೆ.ಅವರೆಲ್ಲರೂ ಕಾಲು ಜಾರದಂತೆ ಕಾಯಲು ಸದಾ ಮಂಗಳಮುಖಿ ಸೈನಿಕರು ಪಹರೆ ಮಾಡುತ್ತಿರುತ್ತಾರೆ.  

ತನ್ನ 65ನೇ ವಯಸ್ಸಿನಲ್ಲಿ ಕೊನೆಯದಾಗಿ 19 ವರ್ಷದ ಜೀನತ ಮಹಲ್ ಎಂಬ ಒಂದು ಕನ್ಯೆಯನ್ನು ಈತ ಜಫರ ಮದುವೆಯಾಗಿ ಮಹಾರಾಣಿ ಆಗಿಸುತ್ತಾನೆ. ಅಲ್ಲದೆ ಮುಂದೆ ಆಕೆಯ 11 ವರ್ಷ ವಯಸ್ಸಿನ ಮಗ ಮಿರ್ಜಾ ಜವಾನ ಭಕ್ತ ನನ್ನು ತನ್ನ ಉತ್ತರಾಧಿಕಾರಿ ಅರಸು ಮಾಡಲು ದೆಹಲಿಯ ಆಗಿನ ಶ್ರೀಮಂತರಲ್ಲಿ ಅಪಾರ ಸಾಲಸೋಲ ಮಾಡಿ ಆತನಿಗೆ ಮದುವೆ ಮಾಡಿ ಹೈರಾಣಾಗುತ್ತಾನೆ. ಈತನಿಗೆ ಕಿರಿಯ ಹೆಂಡತಿಯೇ ತುಂಬಾ ಕಾಳಜಿಯಿಂದ ಗಮನಿಸುತ್ತಾ ಇರುತ್ತಾಳೆ. ಆಕೆಯೇ ಈತನ ಸಲಹೆಗಾರ್ತಿ, ಸಖಿ, ಪತ್ನಿ, ಮಹಾರಾಣಿ ಹೀಗೆ ಎಲ್ಲಾ ಆಗಿರುತ್ತಾಳೆ. ಈತ ಕವಿ, ಸೂಫಿ, ಗಜಲ್ ಕಾರ. ಮೊಗಲ ಸಾಮ್ರಾಜ್ಯದ ಕೊನೆಯ ಅರಸು ಆದ ಝಫರ ಬಹದ್ದೂರ್ ಶಹಾ...ಆತ ಅನುಭವಿಸುವ ನೋವುಗಳು, ಕಂಡ ಕನಸುಗಳು, ಕಣ್ಣೆದುರಿನಲ್ಲಿ ಆದ ದೆಹಲಿಯ ಮಾರಣಹೋಮವನ್ನು ಕಾದಂಬರಿ ಚಿತ್ರಿಸುತ್ತದೆ. ವಿವ್ಹಲನಾಗುತ್ತಾನೆ.  

ಬ್ರಿಟಿಷ ಸರ್ಕಾರ ನಿಗದಿ ಮಾಡಿದ ತಿಂಗಳಿಗೆ ಒಂದು ಲಕ್ಷ ರೂಪಾಯಿ ಪಿಂಚಣಿ ಈತನಿಗೆ ತನ್ನ ವೈಭೋಗಗಳನ್ನು, ಅರಮನೆಯನ್ನು, ಸೈನ್ಯವನ್ನು, ತನ್ನ ಪರಿವಾರವನ್ನು ಸಾಕಲು ಸಾಲುತ್ತಿರಲಿಲ್ಲ. ಆಗ ಈ ಅರಸು ಮಿರ್ಜಾ ಗಾಲಿಬ್ ನಂತಹ ಆಸ್ಥಾನ ಕವಿಗೆ ತಿಂಗಳಿಗೆ ಹತ್ತು ರೂಪಾಯಿ ಕೊಡುತ್ತಿರುವ ಉಲ್ಲೇಖ ಒಂದು ಬರುತ್ತದೆ. ಈ ದೊರೆ ಪತನಗೊಂಡರೆ ತನಗೆ ಆ ಹತ್ತು ರೂಪಾಯಿ ಗೌರವಧನ ಯಾರು ಕೊಡುತ್ತಾರೆ, ತನ್ನ ಮುಂದಿನ ಬದುಕಿಗೇನು ಮಾಡಬೇಕು ಅಂತ ಗಾಲಿಬ್ ಚಿಂತಿಸುವಂತಾಗಿತ್ತು ಅಂತ ಒಂದು ಮಾತು ನೋಡಿದಾಗ ಆಗಿನ ವಿಷಮ ಪರಸ್ಥಿಯ ಚಿತ್ರಣ ಕಣ್ಣ ಮುಂದೆ ಕಟ್ಟಿಕೊಳ್ಳುತ್ತದೆ. ಗಾಲಿಬ್‌ನ ಗಜಲ್ ಕಾವ್ಯ ಬಹಳ ಕ್ಲಿಷ್ಟಕರವಾದದ್ದು ಅಂತ ಆ ಗಜಲ್ ಕವಿಗಳ ಮಧ್ಯೆ ಚರ್ಚೆ ನಡೆಯುತ್ತಿರುತ್ತದೆ. ಬೆಳತನಕ ಶಾಯಿರಿ, ಮುಷಾಹಿರಾ, ನೃತ್ಯ ದಿನಾಲು ನಡೆಯುವುದು ಮುಂದೆ ದೊರೆಯ ಕಷ್ಟಕರ ಕಾಲದಲ್ಲಿ ನಿಂತೇ ಹೋಗುತ್ತವೆ.  

ಇನ್ನೊಬ್ಬಳು ಅರಸಿ ತನ್ನ ಮಗನಿಗೆ ಪಟ್ಟ ಕಟ್ಟಲೂ ನಿರಾಕರಿಸಿದ ಇಂಗ್ಲಿಷ್ ಅಧಿಕಾರಿಗೆ ನಿಧಾನದ ವಿಷ ಪ್ರಾಸನ ಮಾಡಿಸುವುದು.. ಹೀಗೆ ಅರಸೊತ್ತಿಗೆಯ ಸುತ್ತ ಇರುವ ಸಂಚು, ಕೊಲೆ, ದಂಗೆ ಏಳುವುದು ಇವುಗಳ ಮಧ್ಯೆ ಕ್ರೈಸ್ತ ಮಿಷನರಿಗಳು ಹಿಂದುಗಳನ್ನು, ಮುಸ್ಲಿಂರನ್ನು ಮತಾಂತರ ಮಾಡುತ್ತಿವೆ ಎಂಬ ಆರೋಪಗಳು, ತಮ್ಮ ತಮ್ಮ ಧರ್ಮದ ರಕ್ಷಣೆಗಾಗಿ ದಂಗೆ ಏಳುವ ಧರ್ಮಾಭಿಮಾನಿಗಳು, ಆದರೆ ಈತ ಮುಸ್ಲಿಂ ಅರಸನಾದರು ಸಹ ಈತನ ತಾಯಿ ರಜಪೂತಳು ಇದ್ದ ಕಾರಣ ಈ ಕೊನೆಯ ಅರಸು ಜಫರ ಸರ್ವಧರ್ಮ ಪ್ರೀತಿಸುವವನಾಗಿರುತ್ತಾನೆ. ಹಿಂದು ಮುಸ್ಲೀಂ ಮಧ್ಯೆ ಬಂದ ಅನೇಕ ಕೆಟ್ಟ ಪ್ರಸಂಗಗಳಲ್ಲಿ ಈತ ಸಮನ್ವಯತೆ ಸಾಧಿಸುವಂತಹದು ಮೆಚ್ಚುಗೆ ಆಗುತ್ತದೆ.  

1857ರಲ್ಲಿ ನಡೆದ ಸಿಪಾಯಿದಂಗೆ ಇಡೀ ದೆಹಲಿಯನ್ನು, ಲಾಲ್ ಕಿಲಾ ಅರಮನೆಯನ್ನು ಸರ್ವನಾಶಗೊಳಿಸಿ ಈ ಬಾದಷಹ ಜಫರನ ಬದುಕಿನಲ್ಲಿ ಬಹುದೊಡ್ಡ ಆಟ ಆಡಿ ಈತನನ್ನು ಮೊಗಲ ಸಾಮ್ರಾಜ್ಯದ ಕೊನೆಯ ದೊರೆಯಾಗಿಸುತ್ತದೆ.ಸಿಪಾಯಿ ದಂಗೆ ಬಾರತದ ಇತಿಹಾಸದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಂತ ಬಿಂಬಿತ ಆಗಿದೆ. ಆದರೆ ಆ ದಂಗೆ ಇಡೀ ದೆಹಲಿಯನ್ನು, ಅಲ್ಲಿಯ ಎಲ್ಲಾ ಜನರನ್ನು ಹೇಗೆ ದರೋಡೆ ಮಾಡಿತು, ಅತ್ಯಾಚಾರ ಮಾಡಿತು, ಲೂಟಿ ಮಾಡಿತು ಎಂದು ತಿಳಿಯಲು ಈ ಕಾದಂಬರಿ ನೆರವಾಗುತ್ತದೆ. ನಮ್ಮ ಹೈಕದಲ್ಲಿ ನಡೆದ ರಜಾಕಾರ ಹಾವಳಿಗೂ ಈ ದಂಗೆಗೂ ಯಾವ ವ್ಯತ್ಯಾಸವೂ ಇಲ್ಲ ಆಂತ ಕಾದಂಬರಿ ಓದುವಾಗ ದು:ಖ ಆವರಿಸುತ್ತದೆ. ದಂಗೆಕೋರರು ಎಲ್ಲಾ ಧರ್ಮಿಯ ದಂಗೆಕೋರರೆ, ಅವರಲ್ಲಿ ಅಪರಾಧಿಗಳು, ದುಷ್ಕರ್ಮಿಗಳು, ಸಮಾಜ ಕಂಟಕರು, ಅಮಾನವೀಯರು, ಅತ್ಯಾಚಾರಿಗಳು, ದರೋಡೆಕೋರರೇ ಸೇರುತ್ತಾರೆ. ಅದರಲ್ಲಿ ಹಿಂದು ಮುಸ್ಲಿಂ ಅಂತ ಇಲ್ಲ. ಎಲ್ಲಾ ಧರ್ಮದ ಇಂತಹ ಜನ ಅದರಲ್ಲಿ ತಮ್ಮ ಬೆಳೆ ಬೇಯಿಸಿಕೋತಾರೆ. ಅಕ್ಷರಶ ದೆಹಲಿ ಎಲ್ಲಾ ರೀತಿಯಲ್ಲೂ ಲೂಟಿಗೆ ಒಳಗಾಯಿತು. ಲಕ್ಷಾಂತರ ಜನ ತಮ್ಮದೆಲ್ಲ ಕಳಕೊಂಡು ಸಾವು ನೋವು ಅನುಭವಿಸಿ ದೇಶಾಂತರ ಓಡಿ ಹೋದರು. ರಜಾಕಾರರ ಸಂದರ್ಭದಲ್ಲಿ ನಮ್ಮಲ್ಲಿ ಆದದ್ದು ಸಹ ಅದೇನೆ. ದಗಾಕೋರರಿಗೆ ಧರ್ಮವಿರುವುದಿಲ್ಲ.ಇರಲಿಲ್ಲ. ಅವರು ಮುಸ್ಲಿಂರನ್ನು, ಹಿಂದುಗಳನ್ನು, ಕ್ರೈಸ್ತರನ್ನು ಒಳಗೊಂಡಂತೆ ಎಲ್ಲರನ್ನೂ ಕೊಂದರು, ಲೂಟಿ ಗೈದರು, ಅತ್ಯಾಚಾರ ಎಸಗಿದರು. ಅವರಿಗೆ ಭಯದಿಂದ ಶರಣಾಗತಿಯಾಗಿದ್ದ ರಾಜ ಜಫರ ತೀರಾ ಅಸಹಾಯಕನಾಗಿದ್ದ....  

ಈತನ ಹೆಸರಿನ ಮೇಲೆ ಸಮಾಜದ್ರೋಹಿಗಳು ಇಡೀ ದೆಹಲಿ ಸುಟ್ಟು ಹಾಕಿ ಬ್ರಿಟಿಷರನ್ನು, ಕೆಲವು ಕ್ರೈಸ್ತ ರನ್ನು ಸಹ ಕೊಂದರು. ಆ ಕಾರಣ ಅದು ಬ್ರಿಟಿಷರ ವಿರುದ್ಧ ನಡೆದ ಮೊದಲ ಹೋರಾಟ ಅಂತ ದಾಖಲಾಗಿದೆ. ಅದಕೆ ಕಾರಣ ಆಗಿನ ಸೈನಿಕರಲ್ಲಿ ಹಿಂದು ಮುಸ್ಲಿಂರು ಇದ್ದು ಅವರು ಹಸು ಹಾಗೂ ಹಂದಿಯ ಮಾಂಸ ಮೆತ್ತಿದ ಕಾಡತೂಸು ಬಾಯಿಯಿಂದ ಕಚ್ಚಲಾರೆವು. ನಮ್ಮ ಧರ್ಮ ಕೆಡುತ್ತದೆ ಅಂತ ಹೋರಾಟ ಮಾಡಿ ಕೆಲವು ಕಡೆ ದಂಗೆ ಏಳುತ್ತಾರೆ.ಆ ಸೈನಿಕರ ದಂಗೆ ಸಮಾಜ ವಿರೋಧಿಗಳ ಪ್ರವೇಶದಿಂದ ಬೇರೆ ಸ್ವರೂಪ ಪಡೆದು ಕೊನೆ ಕೊನೆಗೆ ಈ ಅರಸು ತುಂಬಾ ಕಷ್ಟಕ್ಕೆ ಸಿಲುಕಿ ಗಜಲ್ ಬರೆದು ತನ್ನ ದು:ಖ ಮರೆಯಬೇಕೆಂದರೆ ಪೆನ್ನು ಕಾಗದ ಸಹ ನೀಡಲಾರರು ಬ್ರಿಟಿಷ್ ಸೈನಿಕರು. ಆತ ಇದ್ದಲಿಯಿಂದ ಗೋಡೆಯ ಮೇಲೆ ತನ್ನ ಹತಾಶೆ, ದು:ಖ ನೋವು, ತನ್ನ ಸಾಮ್ರಾಜ್ಯದ ಪತನ, ಹಾಗೂ ತನ್ನ ಜನತೆಯನ್ನು ನೆನೆದು ಗಜಲ್ ಬರೆದು ಗಡಿಪಾರು ಆದಲ್ಲೇ ನೋವಿನಿಂದ ನರಳಿ ನರಳಿ ತನ್ನ 82 ನೇ ವಯಸ್ಸಿನಲ್ಲಿ ಜೀವ ಬಿಡುತ್ತಾನೆ..ಯಾವುದೇ ಕವಿ, ಕಲಾವಿದ, ನಟ, ನಾಟಕಕಾರ, ಹೀಗೆ ಬಣ್ಣದ ಬದುಕಿನಲ್ಲಿ ಇರುವ ಜನಗಳಲ್ಲಿ ಬಹುತೇಕರು ಸದಾ ಕಷ್ಟದಲ್ಲಿ ಇರೋದನ್ನ ಕಂಡಿದೇವೆ. ಕೇಳಿದೇವೆ. ನೋಡಿದೇವೆ. ಈತ ಕವಿ ಕಲಾವಿದ ಅರಸು ಆದ ಕಾರಣಕ್ಕೇನೇ ಇಂತಹ ಅಪಾರ ನೋವು ಅನುಭವಿಸಿದನೇನೋ ಅನಿಸಿತು ಕಾದಂಬರಿ ಓದಿ ಮುಗಿಸಿದಾಗ.  

ತನ್ನ 82ನೇ ವಯಸ್ಸಿನಲ್ಲಿ ಇಡೀ ಭಾರತದ ಮೊಗಲ ಸಾಮ್ರಾಜ್ಯದ ಈ ಅರಸು ಗಡಿ ಪಾರಿನ ಶಿಕ್ಷೆ ಅನುಭವಿಸಿ ತನ್ನದಲ್ಲದ ಪರಕೀಯ ನೆಲದಲ್ಲಿ ಪ್ರಾಣ ಬಿಟ್ಟದ್ದು ಜೀವ ಮರುಗಿಸಿತು. ಈತ ಒಬ್ಬ ಗಜಲ್ ಲೇಖಕ ಆಗಿದ್ದ ಎಂಬ ಕಾರಣಕ್ಕೆ ಬಹಳ ಆಸಕ್ತಿಯಿಂದ ಓದಿ ಹಂಚಿಕೊಂಡಿರುವೆ. ಆದರೆ ಈ ಕೃತಿಯಲ್ಲಿ ಲೇಖಕರು ಇಂಗ್ಲಿಷ್‌ನಿಂದ ಅನುವಾದ ಮಾಡಿದ ಝಫರನ ಹಾಗೂ ಗಾಲಿಬ್‌ನ ಅನೇಕ ಗಜಲ್ ಸಾಲುಗಳು ಗಜಲ್ ಅನಿಸದೇ ಕವಿತೆ ಅನಿಸುತ್ತವೆ. ಗಜಲ್ ನಿಯಮಗಳ ಪ್ರಕಾರ ಅನುವಾದಗೊಂಡಿಲ್ಲ. ಈ ಮಾತು ಲೇಖಕರಾದ ಉದಯಕುಮಾರ್ ಹಬ್ಬು ಅವರಿಗೆ ಹೇಳಿದೆ.ಮುಂದಿನ ಮುದ್ರಣ ಬಂದಾಗ ಅವರ ಕವಿತೆಗಳನು ಗಜಲ್ ಮಾಡಿಕೊಡುವೆ. ನೀವು ಅವನ್ನೇ ಬಳಸಬೇಕು ಅಂತ ಹೇಳಿದಾಗ ಖುಷಿಯಿಂದ ಒಪ್ಪಿಕೊಂಡರು. ಶ್ರೀ ಹಬ್ಬು ಸರ್, ನಾಡಿನ ಮುಖ್ಯ ಲೇಖಕರಲ್ಲಿ ಒಬ್ಬರು, ನನಗೆ ಆತ್ಮೀಯರು ಎಂಬ ಹೆಮ್ಮೆ. ಅವರು ನನಗೆ ಈ ಕಾದಂಬರಿ ಕಳಿಸಿ ಬಹಳ ದಿನಗಳೇ ಆದವು. ಇದು ಇಂದು ಓದಿದ ಮೇಲೆ ಬೇಗ ಓದಬೇಕಿತ್ತು ಅನಿಸಿತು. ಗಜಲ್ ಪ್ರಿಯರು, ಸೌಹಾರ್ದತೆಯ ಬದುಕು, ಹಿಂದು ಮುಸ್ಲಿಂ ಭೇದಭಾವ ಬಯಸದ ಜನ ಈ ಕಾದಂಬರಿ ಒಮ್ಮೆ ಓದಬೇಕು. ಬ್ರಿಟಿಷರು ಇಡೀ ದೇಶವನ್ನು ಹೇಗೆ ಒಂದೊಂದಾಗಿ ಕಬಳಿಸಿ ಇಡೀ ದೇಶವನ್ನು ಹೇಗೆ ನಿರ್ವಿರ್ಯಗೊಳಿಸಿದರು ಎಂಬುದು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಈ ಹಿರಿಯ ಲೇಖಕ ಶ್ರೀ ಉದಯಕುಮಾರ್ ಹಬ್ಬು ಸರ್ ಅವರಿಗೆ ಅಭಿನಂದಿಸಿ ಮುಗಿಸುವೆ. ನಮಸ್ಕಾರ.  

- ಸಿದ್ಧರಾಮ ಹೊನ್ಕಲ್  

ಕಾವ್ಯಾಲಯ, ಶಹಾಪುರ.  

9945922151  


ಸುದ್ದಿ ಓದಿ