ವಿಮ್ಸ್ನಲ್ಲಿ ಗಮನಸೆಳೆದ ಕನ್ನಡ ರಾಜ್ಯೋತ್ಸವ ಸಂಭ್ರಮ
ಬಳ್ಳಾರಿ 02: ವೈದ್ಯಕೀಯ ಮಹಾವಿದ್ಯಾಲಯವೆಂದರೆ ಬರೀ ಓದು, ರೋಗಿಗಳು ಹಾಗೂ ವೈದ್ಯರ ಜಂಜಾಟವಷ್ಟೇ ನೆನಪು ಬರುವುದು ಸಹಜ. ಆದರೆ ಸೋಮವಾರ ರಾತ್ರಿ ವಿಮ್ಸ್ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತ್ರ ವಿಮ್ಸ್ನ ವೈದ್ಯರು ಹಾಗೂ ವಿದ್ಯಾರ್ಥಿಗಳು ಕನ್ನಡದ ಕಟ್ಟಾಳುಗಳಾಗಿ ಭಾಷೆಯ ಸೌಂದರ್ಯವನ್ನು ಹಾಗೂ ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದು, ವೈದ್ಯರು ರೋಗಿಗಳ ಚಿಕಿತ್ಸೆಗೂ ಸೈ ಕನ್ನಡಕ್ಕೆ ಟೊಂಕ ಕಟ್ಟಿ ನಿಲ್ಲಲೂ ಸೈ ಎನ್ನುವಂತಿತ್ತು.
ವಿಮ್ಸ್ನ ನಿರ್ದೇಶಕರಾದ ಡಾ. ಟಿ.ಗಂಗಾಧರ ಗೌಡ ಅವರು ವಿಮ್ಸ್ ಆಸ್ಪತ್ರೆಯಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿಯ ಪೂಜೆಯನ್ನು ನೆರವೇರಿಸುವುದರ ಮೂಲಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಗೋಕಾಕ್ ಚಳುವಳಿಯಿಂದ ಹಿಡಿದು ಇಲ್ಲಿಯವರೆಗಿನ ಕನ್ನಡಕ್ಕಾಗಿ ಶ್ರಮಿಸಿದ ಹಿರಿಯರನ್ನು ನೆನೆಪಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲೇಖಕ ವಸುಧೇಂದ್ರ ಅವರು ಮಾತನಾಡಿ ಬಳ್ಳಾರಿಯೊಂದಿಗೆ ತಮ್ಮ ಬಾಂಧವ್ಯವನ್ನು ಹಾಗೂ ಕನ್ನಡದ ಉಳಿವಿಗಾಗಿ ನಾವು ಮಾಡಬೇಕಾಗಿರುವ ಕರ್ತವ್ಯಗಳನ್ನ ಅತ್ಯಂತ ಆತ್ಮೀಯವಾಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಮ್ಸ್ನ 2ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಾದ "ಅಗಸ್ತ್ಯ" ತಂಡದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಆಕರ್ಷಕವಾಗಿತ್ತು.
ನಂತರ ನಡೆದ ವೈದ್ಯಕೀಯ, ಶುಶ್ರೂಷಕ, ದಂತ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಸ್ತ್ರೀಯ ನೃತ್ಯದಿಂದಿಡಿದು, ಭಾವಗೀತೆಗಳ ಗಾಯನ, ಚಲನಚಿತ್ರಗಳ ನೃತ್ಯ, ಜನಪದ ನೃತ್ಯ, ರಾಜ್ಯದ ಎಲ್ಲಾ ಜಿಲ್ಲೆಗಳ ಪೋಷಾಕು ತೊಟ್ಟು ಮಾಡಿದ ನೃತ್ಯವಂತೂ ಎಲ್ಲರ ಮನಸೂರೆಗೊಂಡಿತ್ತು. ವಿನೂತನ ಪ್ರಯೋಗವಾದ ಕುಬ್ಜರ ನೃತ್ಯವಂತೂ ವಿದ್ಯಾರ್ಥಿಗಳ ಸೃಜನಶೀಲತೆಯ ಇನ್ನೊಂದು ಆಯಾಮವನ್ನೇ ತೆರೆದಿಟ್ಟಿತು. ಜನಪದ ಕಲೆಗಳಾದ ಡೊಳ್ಳು ಕುಣಿತ ಹಾಗೂ ಕಂಸಾಳೆ ನೃತ್ಯಗಳಂತೂ ವೃತ್ತಿಪರರನ್ನೇ ನಾಚಿಸುವಂತಿತ್ತು.
ಬಣ್ಣ ಬಣ್ಣಗಳ ಪೋಷಾಕು ತೊಟ್ಟು ಕನ್ನಡ ಹಬ್ಬಕ್ಕೆ ವಿದ್ಯಾರ್ಥಿಗಳು ಹಾಗೂ ವಿಮ್ಸ್ ಸಿಬ್ಬಂದಿಗಳು ಹಾಜರಾಗಿದ್ದರು.
ಈ ಸಂದರ್ಭದಲ್ಲಿ ವಿಮ್ಸ್ನ ಮುಖ್ಯ ಆಡಳಿತಾಧಿಕಾರಿಗಳಾದ ಡಾ.ಚೆನ್ನಪ್ಪ, ಪ್ರಾಂಶುಪಾಲ ಡಾ.ಕೃಷ್ಣಸ್ವಾಮಿ, ಶುಶ್ರೂಷಕ ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ, ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ.ಅರುಣ್ ಕುಮಾರ್, ಟಿ.ಬಿ.ವೆಲ್ಲೆಸ್ಲಿ ಆಸ್ಪತ್ರೆಯ ಅಧೀಕ್ಷಕರಾದ ಡಾ.ವೈ.ವಿಶ್ವನಾಥ್, ಶುಶ್ರೂಷಕ ಅಧೀಕ್ಷಕರಾದ ಸಂಪತ್ಕುಮಾರ್, ವಿಮ್ಸ್ ಕನ್ನಡ ಸಂಘದ ಪದಾಧಿಕಾರಿಗಳಾದ ಡಾ.ದಿವ್ಯ ಕೆ.ಎನ್, ಡಾ.ಸುಮಾ ಗುಡಿ, ಡಾ.ಪೂರ್ಣಿಮಾ, ಮಹ್ಮದ್ ರಫೀಕ್, ವಿಮ್ಸ್ ಕನ್ನಡ ಸಂಘದ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಪ್ರಸಾದ್ ಕನ್ನಯ್ಯ, ರಂಜಿತಾ ಸಾಹು ಹಾಗೂ ಹಲವು ವೈದ್ಯರು, ವಿದ್ಯಾರ್ಥಿಗಳು, ಶುಶ್ರೂಷಕರು ಹಾಗೂ ಸಿಬ್ಬಂದಿ ಇದ್ದರು.
ಮೊನ್ನೆ ತಾನೆ ನಮ್ಮನ್ನಗಲಿದ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ 2 ನಿಮಿಷಗಳ ಕಾಲ ಮೌನ ಆಚರಿಸುವ ಮೂಲಕ ಗೌರವವನ್ನು ಸೂಚಿಸಲಾಯಿತು.