ಹಾಲುಮತ ಧರ್ಮ ಶ್ರೇಷ್ಠ: ಶಿವಸಿದ್ದೇಶ್ವರ ಶ್ರೀ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 23: ಹಾಲುಮತ ಧರ್ಮ ಶ್ರೇಷ್ಠವಾದ ಧರ್ಮ. ಈ ಧರ್ಮದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆಯಬೇಕು. ಹಾಲಿನಂತಹ ಮನಸ್ಸಿನೊಂದಿಗೆ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬದುಕುವುದರ ಜೊತೆಗೆ ಅನ್ಯ ಸಮಾಜದವರನ್ನು ಧರ್ಮದ ಹಾದಿಗೆ ಕರೆತರುವುದೇ ನಿಜ ಹಾಲುಮತ ಧರ್ಮದ ಕಾಯಕ ಎಂದು ಕನಕ ಗುರು ಪೀಠದ ಶಾಖಾಮಠ ಹಾಲವರ್ತಿಯ ಶಿವಸಿದ್ದೇಶ್ವರ ಮಹಾಸ್ವಾಮೀಜಿಗಳು ಹೇಳಿದರು.
ತಾಲೂಕಿನ ಹರೇಗೊಂಡನಹಳ್ಳಿ ಮತ್ತು ಉಪನಾಯಕನಹಳ್ಳಿ ಗ್ರಾಮಗಳಲ್ಲಿ ಶ್ರಾವಣ ಮಾಸದ ಹಾಲುಮತ ಧರ್ಮ ಪ್ರಚಾರ ಯಾತ್ರೆ ಸಭೆಯಲ್ಲಿ ಹಾಲುಮತ ಧರ್ಮ ಕುರಿತು ಶ್ರೀ ರೇವಣಸಿದ್ದೇಶ್ವರರು ಹಾಕಿಕೊಟ್ಟ ಅಡಿಪಾಯದಲ್ಲಿ ಭಕ್ತ ಕನಕದಾಸ, ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ, ಇಟ್ಟಿಗಿ ಭೀಮಾಂಬಿಕೆ, ಅಹಲ್ಯಾಬಾಯಿ ಹೋಳ್ಕರ್, ಹಕ್ಕ-ಬುಕ್ಕರು ಸಮಾಜಕ್ಕೆ ಕೊಟ್ಟ ಕೊಡುಗೆಯೊಂದಿಗೆ ನಾವುಗಳು ನಮ್ಮ ಕುಲದ ಸಂಕೇತವಾದ ಕಂಬಳಿ, ಡೊಳ್ಳು, ಭಂಡಾರ ಮೂರನ್ನು ಗೌರವಿಸಿ ಸಮಾಜವನ್ನು ಮುನ್ನಡೆಸುವಲ್ಲಿ ನಮ್ಮದೇ ಆದಂತಹ ಕೊಡುಗೆಯನ್ನು ಕೊಟ್ಟಾಗ ಮಾತ್ರ ಹಾಲುಮತ ಸಮಾಜದಲ್ಲಿ ಜನಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ ಶ್ರಾವಣ ಮಾಸದಲ್ಲಿ ಎರಡೂ ಗ್ರಾಮಗಳಿಗೆ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸಿ ಶ್ರಾವಣ ಮಾಸದ ಪವಿತ್ರ ದಿನದಲ್ಲಿ ಆಶೀರ್ವಚನ ನೀಡುವುದರೊಂದಿಗೆ ಸ್ವಾಸ್ತ್ಯ ಸಮಾಜವನ್ನು ನಿರ್ಮಾಣ ಮಾಡಲು ಕನಕಗುರು ಪೀಠ ತಿಂತಿಣಿ ಬ್ರಿಡ್ಜ್ನ ಮಹಾಸ್ವಾಮಿಗಳು ಅಡಿಪಾಯ ಹಾಕಿರುವುದು ಹಾಲುಮತ ಸಮಾಜಕ್ಕೆ ದೊಡ್ಡ ಗೌರವ ಎಂದರು.
ಕುರುಬರ ಸಂಘದ ರಾಜ್ಯ ನಿರ್ದೇಶಕ ಮರಿ ರಾಮಪ್ಪ, ಒಡೆಯರ್ ಕೊಟ್ರಯ್ಯ, ಧರ್ಮದರ್ಶಿ ಬಿ.ಗೋಣೆಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಕುರಿಗಾಯಿ ಹನುಮಂತಪ್ಪ ಇವರು ಶ್ರೀಗಳಿಗೆ ಕುರಿ ಮರಿಯನ್ನು ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಸದ್ಯೋಜಾತಪ್ಪ, ಸೊನ್ನದ ಶಿವರಾಜ್, ಕನ್ನಿಹಳ್ಳಿ ಕೊಟ್ರೇಶ್, ಮೋರನಾಳ್ ಗುರುಸಿದ್ದಪ್ಪ, ಅಶೋಕ, ಸೊಬಟಿ ನಾಗರಾಜ, ಮೆಟ್ರಿ ರೇಣುಕಮ್ಮ, ಹುಡೇದ ಹುಲುಗಪ್ಪ, ಡಿ.ಪರಶುರಾಮ, ಉಮಾಶಂಕರ್, ಭೀಮಪ್ಪ, ಕೆಂಚಪ್ಪ, ನಾಗಪ್ಪ, ಬಸವರಾಜ, ತಳವಾರ ಹನಮಂತಪ್ಪ, ಹೆಚ್.ದುರುಗಪ್ಪ, ಹ್ಯಾಳ್ಯದ ಚನ್ನಬಸಪ್ಪ, ಕರಿಬಸಪ್ಪ, ಇತರರು ಇದ್ದರು.