ಕಾಂಗ್ರೆಸ್ ಪಕ್ಷ ರೈತರ ಹಿತ ಕಾಪಾಡಲು ಬದ್ಧವಾಗಿದೆ: ಸಚಿವ ಅಜಯಸಿಂಗ್
ತಾಳಿಕೋಟಿ 16: ರಾಜ್ಯದಲ್ಲಿ ಈ ಬಾರಿ ಎಂದೂ ಕಾಣದಂತಹ ಭೀಕರ ಬರಗಾಲ ಆವರಿಸಿದೆ, ಇಲ್ಲಿಯವರೆಗೆ ಕೇಂದ್ರ ರಾಜ್ಯಕ್ಕೆ ನೀಡಬೇಕಾದ ಪರಿಹಾರ ಹಣವನ್ನು ನೀಡಿಲ್ಲ ಇದರ ಮಧ್ಯೆಯೂ ನಮ್ಮ ಸರ್ಕಾರವು ರೈತರಿಗೆ ಎರಡು ಹಂತದಲ್ಲಿ ಪರಿಹಾರವನ್ನು ಘೋಷಿಸಿದೆ ಈಗಾಗಲೇ ಮೊದಲ ಹಂತದಲ್ಲಿ 1250 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ. ನಮ್ಮ ಪಕ್ಷ ರೈತರ ಹಿತವನ್ನು ಕಾಪಾಡಲು ಸದಾ ಬದ್ಧವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯಸಿಂಗ್ ಹೇಳಿದರು.
ಭಾನುವಾರ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಬರಗಾಲದ ಈ ಪರಿಸ್ಥಿತಿಯಲ್ಲಿ ಸಣ್ಣ ನೀರಾವರಿ ಇಲಾಖೆಯು ನಮ್ಮ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೆಲಸ ಮಾಡುತ್ತಿದೆ. ಈ ಬಾರಿ ಮಳೆ ಕೊರತೆಯಿಂದ ಅಂತರ್ಜಲ ಕುಸಿದಿರುವುದರಿಂದ ನನ್ನ ಇಲಾಖೆಯಿಂದ "ಅಂತರ್ಜಲ ಅಭಿವೃದ್ಧಿ ಯೋಜನೆ" ಕಾರ್ಯಕ್ರಮವನ್ನು ಜಾರಿಗೆ ತರಲಾಗಿದ್ದು ರಾಜ್ಯದಲ್ಲಿ ಸುಮಾರು 5000 ಕೊಳವೆ ಬಾವಿಗಳನ್ನು ಹಾಕುವ ಯೋಜನೆ ಇಡಲಾಗಿದೆ.
ಈ ಯೋಜನೆಯ ಅನ್ವಯ ಪ್ರತಿ ಮತಕ್ಷೇತ್ರಕ್ಕೆ 25 ರಿಂದ 30 ಬೋರ್ ವೆಲ್ ಗಳನ್ನು ಹಾಕಿ ಕೊಡಲಾಗುವುದು. ವಿಜಯಪುರ ಜಿಲ್ಲೆಯಲ್ಲಿ ನನ್ನ ಇಲಾಖೆಯಿಂದ 2025-26 ನೇ ಸಾಲಿನಲ್ಲಿ ಸುಮಾರು 650 ಕೆಲಸಗಳನ್ನು ಹಾಕಿಕೊಳ್ಳಲಾಗಿದೆ ಇದರಲ್ಲಿ 435 ಕೆಲಸಗಳು ಪೂರ್ಣಗೊಂಡಿವೆ. 264 ಕೋಟಿ ಅನುದಾನ ವೆಚ್ಚವಾಗಿದೆ. ನಮ್ಮ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲು ಇಲಾಖೆಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ನಾನು ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡಿದ್ದೇನೆ ಎಂದರು.
ಇಂದು ರಾಜ್ಯದ ಮೇಲೆ ಆರ್ಥಿಕ ಹೊರೆ ಬೀಳಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಅನುದಾನ ಬಾರದಿರುವುದು ಮತ್ತು ಹಣಕಾಸಿನ ಪಾಲು ಸಮರ್ಕವಾಗಿ ನೀಡದಿರುವುದು ಒಂದು ಪ್ರಮುಖ ಕಾರಣವಾಗಿದೆ, ಒಂದು ವೇಳೆ ಕೇಂದ್ರ ರಾಜ್ಯಕ್ಕೆ ನೀಡಬೇಕಾದ ಹಣವನ್ನು ನೀಡಿದ್ದರೆ ರಾಜ್ಯದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿರಲಿಲ್ಲ ಎಂದರು. ವಿಧಾನ ಪರಿಷತ್ತಿನ 4 ಸ್ಥಾನಗಳ ಚುನಾವಣೆಯ ಫಲಿತಾಂಶ ಯಾವ ಕಾರಣಕ್ಕೂ ದಿಕ್ಸೂಚಿ ಅಲ್ಲ ಎಂದ ಅವರು ಮುಂಬರಲಿರುವ ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ನಮ್ಮ ಪಕ್ಷವೂ ಒಳ್ಳೆಯ ಸಾಧನೆ ಮಾಡಲಿದೆ.
ರಾಜ್ಯದಲ್ಲಿ ಪಕ್ಷವು ಸಂಘಟಿತವಾಗಿದ್ದು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ವಿರೋಧ ಪಕ್ಷದವರು ಹಗಲು ಕನಸು ಕಾಣುವುದನ್ನು ಬಿಡಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ,ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಸಿ.ಎಸ್.ನಾಡಗೌಡ (ಅಪ್ಪಾಜಿ), ಮುಖಂಡ ರಾಜಶೇಖರ ಪಾಟೀಲ(ವಜ್ಜಲ್), ಸಣ್ಣ ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಶ್ರೀನಿವಾಸ ಇದ್ದರು.