ಯಕ್ಷಗಾನ ಕಲೆ: ನೆಲೆ-ಬೆಲೆ
ಯಕ್ಷಗಾನ ಕಲೆಯ ಜೊತೆಗಿನ ನನ್ನ ನಂಟು ಆರು ದಶಕಗಳದು. ಅದೂ ಹಲವು ಬಗೆಯದು. ಈ ನಂಟನ್ನು ಮೂರು ಬಗೆಗಳಲ್ಲಿ ವಿಂಗಡಿಸಬಹುದು. 1) ಯಕ್ಷಗಾನ ಆಟ ನೋಡುವದು. 2) ಯಕ್ಷಗಾನ ಮೇಳ ಮತ್ತು ಕಲಾವಿದರೊಂದಿಗಿನ ಒಡನಾಟ 3) ಈ ಕಲೆಯ ಕುರಿತಾದ ಓದು, ಚಿಂತನೆ ಮತ್ತು ಪುಸ್ತಕ ರಚನೆ. ಈ ಮೂರೂ ವಿಧವಾದ ಸಂಬಂಧ ನನಗಿರುವ ಹಿನ್ನೆಲೆಯಲ್ಲಿ ನಾನು ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾಲೋಕವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಬರೆಯುತ್ತಿದ್ದೇನೆ. ಯಕ್ಷಗಾನ ಕಲೆಯ ಹಿಂದಿನ ಸ್ವರೂಪ ಹೇಗಿತ್ತು, ಇಂದಿನ ಸ್ವರೂಪ ಹೇಗಿದೆ ಮತ್ತು ಅದು ಹೇಗಿರಬೇಕು ಎನ್ನುವ ಕುರಿತು ನನ್ನ ಕೆಲ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ತೀರಾ ಚಿಕ್ಕವನಿರುವಾಗಿನಿಂದಲೇ ನಾನು ಯಕ್ಷಗಾನ ಆಟಗಳನ್ನು ನೋಡುತ್ತ ಬಮದವನು. ಈ ಕಲಾರಂಗದ ಮಹಾನ್ ನಟ ಕೆರೆಮನೆ ಶಿವರಾಮ ಹೆಗಡೆಯವರು ನನ್ನ ತಾಯಿಯ ಒಡಹುಟ್ಟಿದ ಹಿರಿಯ ಸಹೋದರರಾಗಿದ್ದರಿಂದ ಈ ಕಲೆ ನಮ್ಮ ಮನೆತನಕ್ಕೇ ಹತ್ತಿರವಾದದ್ದೆನ್ನಬಹುದು. ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆಯವರೊಡನೆಯೂ ಬಾಂಧವ್ಯದ ಸಲಿಗೆ. ಚಿಕ್ಕವನಿದ್ದಾಗ ಸ್ವತಃ ಶಿವರಾಮ ಹೆಗಡೆಯವರೇ ನನ್ನನ್ನು ತಮ್ಮೊಂದಿಗೆ ಆಟಕ್ಕೆ ಕರೆದೊಯ್ಯುತ್ತಿದ್ದರು. ಆಗ ಅವರದೇ ಮೇಳವಿತ್ತು. ಆ ಮೇಳದಲ್ಲಿದ್ದ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಎಲ್ಲ ಕಲಾವಿದರೂ ನಮ್ಮ ಮನೆಗೆ ಆಗಾಗ ಬರುತ್ತಿದ್ದರು. ಇದರಿಂದಾಗಿ ಆ ಎಲ್ಲ ಕಲಾವಿದರನ್ನು ಅರಿತುಕೊಳ್ಳಲು ಅವಕಾಶವಾಯಿತು.
ನಾನು ಯಕ್ಷಗಾನದ ಮೂರು ಪೀಳಿಗೆಗಳ ನಡುವೆ ನಿಂತು ನೋಡಿದವನು. ನನಗಿಂತ ಹಿಂದಿನ ಪೀಳಿಗೆಯ ಕೆಲ ಹಿರಿಯ ಕಲಾವಿದರ ಪಾತ್ರಗಳನ್ನೂ ನೋಡಿದ್ದುಂಟು. (ಬಡಗು ತೆಂಕು ಎರಡೂ). ನನ್ನ ಸಮಕಾಲೀನ ಕಲಾವಿದರ ಮತ್ತು ಇಂದಿನ ಹೊಸ ಪೀಳಿಗೆಯ ಕಲಾವಿದರ ರಂಗ ಪ್ರದರ್ಶನವನ್ನೂ ಕಂಡವನು. ಇದರಿಂದಾಗಿ ತುಲನಾತ್ಮಕವಾಗಿ ನೋಡುವದಕ್ಕೆ ಅವಕಾಶವಾಗಿದೆ. ಯಕ್ಷಗಾನ ತನ್ನದೇ ಆದ ಸಂಪ್ರದಾಯ ಮತ್ತು ಸ್ವತಂತ್ರ ಶೈಲಿ ಹೊಂದಿದ ಒಂದು ಪರಿಪೂರ್ಣ ಕಲೆ. ಇತರ ಹಲವು ಕಲೆಗಳಲ್ಲಿ ಬಿಡಿಬಿಡಿಯಾಗಿ ಕಂಡುಬರುವ ಅಂಶಗಳೆಲ್ಲವೂ ಈ ಕಲೆಯಲ್ಲಿ ಸೇರಿಕೊಂಡಿದ್ದರೂ ಅವೆಲ್ಲ "ಯಕ್ಷಗಾನೀಯ ಶೈಲಿಯೇ" ಆಗಿ ಇತರ ಕಲೆಗಳಿಂದ ಬೇರ್ಪಟ್ಟಿದೆ. ನೃತ್ತ, ನೃತ್ಯ, ಹಾಡುಗಾರಿಕೆ, ವಾದನ, ವೇಷಭೂಷಣ, ಸಾಹಿತ್ಯ (ಪ್ರಸಂಗ), ಸಂಭಾಷಣೆ ಎಲ್ಲವುಗಳ ಒಂದು ಕೂಡು ಕುಟುಂಬ ಈ ಯಕ್ಷಗಾನ ಕಲೆ. ಬೇರೆ ಯಾವ ಕಲೆಯಿಂದಲೂ ಏನನ್ನೂ ಎರವಲು ಪಡೆದುಕೊಳ್ಳಬೇಕಾದ ಅಗತ್ಯ ಈ ಕಲೆಗೆ ಇಲ್ಲ. ತನ್ನಷ್ಟಕ್ಕೆ ತಾನೇ ಇದು ಪರಿಪೂರ್ಣ ಕಲೆ.
ಹೀಗೆ ಯಕ್ಷಗಾನ ಪ್ರತ್ಯೇಕವಾಗಿಯೇ ಗುರುತಿಸಲ್ಪಡಬಹುದಾದ ಕಲೆಯಾಗಿರುವದರಿಂದ ಮತ್ತು ಶಾಸ್ತ್ರೀಯ ಕಲೆಗೆ ಇರಬೇಕಾದ ಎಲ್ಲ ಗುಣಲಕ್ಷಣಗಳನ್ನೂ ಹೊಂದಿರುವದರಿಂದ ಇದೊಂದು ಶಾಸ್ತ್ರಬದ್ಧ / ಶಾಸ್ತ್ರಶುದ್ಧ ಕಲೆ. ಈಚಿನ ಕೆಲ ವರ್ಷಗಳಲ್ಲಿ "ಕಾಲಕ್ಕೆ ತಕ್ಕ ಬದಲಾವಣೆ" ಅಥವಾ "ಆಧುನೀಕರಣ"ದ ಹೆಸರಲ್ಲಿ ಕೆಲವರು ಯಕ್ಷಗಾನವನ್ನು ಕಲಬೆರಕೆ ಮಾಡಿ ಕುಲಗೆಡಿಸಲು ಹೊರಟಿರುವದು ಒಂದು ವಿಷಾದಕರ ಬೆಳವಣಿಗೆ. ಸುಧಾರಣೆ ಬೇರೆ, ಬದಲಾವಣೆ ಬೇರೆ. ಆ ವ್ಯತ್ಯಾಸವನ್ನು ಅರಿಯದವರು ಯಕ್ಷಗಾನದ ಮೂಲ ಪರಂಪರೆಗೆ ಧಕ್ಕೆಯನ್ನುಂಟುಮಾಡುತ್ತಿದ್ದಾರೆ. ಯಕ್ಷಗಾನ ಕಲೆಯ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಯಿಂದ ಕಲೆಯ ಕುರಿತು ಕಾಳಜಿಯಿದ್ದವರು ಗಂಭೀರವಾಗಿ ಚಿಂತನೆ ನಡೆಸಿ ಈ ಬಗೆಯ ಅಹಿತಕರ ಬೆಳವಣಿಗೆಯನ್ನು ತಡೆಗಟ್ಟಬೇಕಾಗಿದೆ. ಹಿಂದಿನ ನಮ್ಮ ಹಿರಿಯ ಕಲಾವಿದರಲ್ಲಿ ಕಲೆಯ ಕುರಿತು ಇದ್ದ ಶ್ರದ್ಧೆ, ಭಕ್ತಿ ಇಂದಿನವರಲ್ಲಿ ಕಂಡುಬರುತ್ತಿಲ್ಲ. ಹತ್ತಾರು ವರ್ಷ ರಂಗದಲ್ಲಿ ಹಿರಿಯ ಕಲಾವಿದರ ಮಾರ್ಗದರ್ಶನ ಪಡೆದು ಮುಖ್ಯ ಪಾತ್ರಗಳನ್ನು ನಿರ್ವಹಿಸಲು ಮುಂದಾಗುತ್ತಿದ್ದರು. ಕೆರೆಮನೆ ಶಿವರಾಮ ಹೆಗಡೆಯವರು "ತಾವು ಯಾವುದೇ ಪಾತ್ರ ಮಾಡುವ ಮೊದಲು ಮೂಡ್ಕಣಿ ನಾರಾಯಣ ಹೆಗಡೆಯವರ ಪಾತ್ರಗಳನ್ನು ಹತ್ತಾರು ಸಲ ನೋಡಿದ ಮೇಲೆಯೇ ಆ ಪಾತ್ರ ಹಾಕು ಧೈರ್ಯ ಮಾಡುತ್ತಿದ್ದೆ" ಎಂದು ಹೇಳಿರುವದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.
ಈ ಕಲಾರಂಗಕ್ಕೆ ಕಾಲಿಡುವವರಲ್ಲಿ ಕಲೆಯ ಕುರಿತು ಪ್ರೀತಿ, ಶ್ರದ್ಧೆ ಇರಬೇಕು. ಹಾಗೆಯೇ ಅಭ್ಯಾಸವೂ ಬೇಕು. ಪ್ರತಿಭಾವಂತ ಕಲಾವಿದರು ರಂಗಪರಂಪರೆಯನ್ನು ಮೀರದೆ, ಯಕ್ಷಗಾನದ ಸಕಲ ಅಂಗೋಪಾಂಗಗಳಲ್ಲಿ ಪರಿಣತಿ ಪಡೆದುಕೊಂಡು, ಯಾವ ಕಸರತ್ತೂ ಮಾಡದೆ, ಯಾವ ವಿಕೃತ ಚೇಷ್ಟೆಗೂ ಅವಕಾಶವಿಲ್ಲದಂತೆ ಪಾತ್ರ ನಿರ್ವಹಿಸುವತ್ತ ಗಮನ ಹರಿಸಬೇಕು. ನೃತ್ಯದಲ್ಲಿ ಆಕಾರ ಬದ್ಧತೆಯನ್ನು ಕಾದುಕೊಳ್ಳಬೇಕು. ತಾವು ನಿರ್ವಹಿಸುವ ಪಾತ್ರಗಳ ಬಗ್ಗೆ ಅರಿಯಲು ಪುಸ್ತಕಗಳನ್ನು ಓದಬೇಕು. ವಿಶೇಷವಾಗಿ ರಾಮಾಯಣ, ಮಹಾಭಾರತ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮೊದಲಾದವುಗಳನ್ನು ಓದಬೇಕು. ಅದರಿಂದ ಪಾತ್ರಗಳ ಖಚಿತ ಸ್ವರೂಪ, ಔಚಿತ್ಯ ಪ್ರಜ್ಞೆ, ಶಬ್ದಸಂಗ್ರಹ, ಮಾತುಗಾರಿಕೆಯ ಕಲೆ ಕರಗತವಾಗುತ್ತದೆ. ಕೇವಲ ಕೆಲ ಅಪ್ರಬುದ್ಧ ಅಭಿಮಾನಿಗಳ ಚಪ್ಪಾಳೆಯೇ ಕಲಾವಿದನ ಸಾಮಥ್ರ್ಯದ ಮಾನದಂಡವಲ್ಲ. ಹಿಂದೆ ಯಕ್ಷಗಾನವನ್ನು ನೋಡುವ ಹೆಚ್ಚಿನ ಪ್ರೇಕ್ಷಕರೂ ಕಲಾಪ್ರದರ್ಶನವನ್ನು ವಿಮಶರ್ಿಸಬಲ್ಲ ಜ್ಞಾನ ಹೊಂದಿರುತ್ತಿದ್ದರು. ಕಲಾವಿದ ತಪ್ಪಿದರೆ ಅವರನ್ನು ತಿದ್ದುವಂತಹ ಉಪಯುಕ್ತ ಸಲಹೆ ನೀಡುತ್ತಿದ್ದರು.ಅದನ್ನೇ ಪ್ರೇಕ್ಷಕ ಪ್ರಜ್ಞೆ ಎನ್ನುವದು. ಇಂದು ಅಂತಹ ಪ್ರಜ್ಞಾವಂತ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬೇಕಾದ ಅಗತ್ಯವೂ ಇದೆ.
ಯಕ್ಷಗಾನದಲ್ಲಿ ಶುದ್ಧ ಪರಂಪರೆಯನ್ನು ಕಾದುಕೊಂಡು ಬಂದ ಕೆಲವು ಮೇಳಗಳಿವೆ. ಹಲವು ಕಲಾವಿದರೂ ಇದ್ದಾರೆ. ಈ ಕಲೆಯ ಶುದ್ಧ ಶೈಲಿಯನ್ನು ಕಾದುಕೊಂಡೇ ಒಂದೊಂದು ಪಾತ್ರವನ್ನು ನೂರಾರು ಸಲ ಅಭಿನಯಿಸಿಯೂ ಪ್ರೇಕ್ಷಕರನ್ನು ಮೆಚ್ಚಿಸಿದವರು, ರಂಜಿಸಿದವರು ಇದ್ದಾರೆ. ಕೆರೆಮನೆ ಶಿವರಾಮ ಹೆಗಡೆಯವರ ಗದಾಯುದ್ಧದ ಕೌರವ, ಮಾಗಧ, ಮಹಾಬಲ ಹೆಗಡೆಯವರ ಅಶ್ವತ್ಥಾಮ, ಭೀಷ್ಮ, ಸುಧನ್ವ, ಕೃಷ್ಣ, ಶಂಭು ಹೆಗಡೆಯವರ ಸಾಲ್ವ, ಕೀಚಕ, ಕರ್ಣ, ಮೂರೂರು ದೇವರು ಹೆಗಡೆಯವರ ಭೀಮ, ಕಂಸ, ಚಿಟ್ಟಾಣಿಯವರ ಭಸ್ಮಾಸುರ ಮೊದಲಾದ ಪಾತ್ರಗಳನ್ನು ಎಷ್ಟು ಸಲ ನೋಡಿದರೂ ಪ್ರೇಕ್ಷಕ ಬೇಸರ ಪಟ್ಟುಕೊಂಡಿದ್ದಿಲ್ಲ. ಅದು ಕಲಾವಿದನ ಸಾಮಥ್ರ್ಯಕ್ಕೆ ಸಾಕ್ಷಿ. ಯಕ್ಷಗಾನ ಕಲೆಗೂ ಆ ಸಾಮಥ್ರ್ಯ ಇದೆ. ಅದಕ್ಕೆ ಇತರ ಯಾವ ಕಲೆಗಳ ಅನುಗ್ರಹವೂ ಬೇಕಿಲ್ಲ. ಯಕ್ಷಗಾನ ಯಕ್ಷಗಾನವಾಗಿಯೇ ಇರಬೇಕಾದ್ದು ಮುಖ್ಯ. ಮಹಾಬಲ ಹೆಗಡೆಯವರು ಹೇಳುವಂತೆ "ಸು- ಧೋರಣೆಯ ಸುಧಾರಣೆ"ಗೆ ಸ್ವಾಗತ. ಬದಲಾವಣೆ ಅನಗತ್ಯ.
ಕಾಲಕ್ಕೆ ತಕ್ಕಂತೆ ಕಲಾವಿದರ "ಬೆಲೆ" ಏರಿದೆ. ಆದರೆ ತಮ್ಮ ಬೆಲೆ ಹೆಚ್ಚಿಸಿಕೊಳ್ಳುವದರ ಜೊತೆಗೆ ಕಲಾವಿದರು ಕಲೆಯ ಬೆಲೆಯನ್ನೂ ಹೆಚ್ಚಿಸುವ ಕಡೆಗೆ ಗಮನವಿಡಬೇಕು. ಪರಂಪರೆಯ ಚೌಕಟ್ಟಿನಲ್ಲಿಯೇ ಕಲಾಪ್ರದರ್ಶನದ ಸೊಗಸನ್ನು ಹೆಚ್ಚಿಸುವದಕ್ಕೆ ಪ್ರಯತ್ನಿಸಬೇಕು. ತಮ್ಮ ಕಲೆಗೆ ಸಂಬಂಧ ಪಟ್ಟ ಪ್ರತಿಯೊಂದು ಚಟುವಟಿಕೆಯಲ್ಲೂ ಕಲಾವಿದರು ಆಸಕ್ತಿ ವಹಿಸಬೇಕು. ಪಾಲ್ಗೊಳ್ಳಬೇಕು. ಉದಾಹರಣೆಗೆ ಯಕ್ಷಗಾನಕ್ಕೆ ಸಂಬಂಧಿಸಿದ ವಿಚಾರಗೋಷ್ಠಿ, ಚಿಂತನೆ, ಸಮಾಲೋಚನೆಗಳಿಂದ ದೂರ ಉಳಿಯಬಾರದು. ಅದು ತಮಗೆ ಸಂಬಂಧಿಸಿದ್ದಲ್ಲ ಎಂಬ ಭಾವನೆ ಹೋಗಬೇಕು. ಹಿರಿಯ ಕಲಾವಿದರ ಮಾರ್ಗದರ್ಶನ ಪಡೆಯಬೇಕು. ತಮ್ಮ ಪಾತ್ರಗಳಿಗೆ ಸಂಬಂಧಿಸಿ ಸದಾಕಾಲ ಹೊಸ ಹೊಸ ಚಿಂತನೆಯಲ್ಲಿ ಮನಸ್ಸು ತೊಡಗಿಸಿಕೊಂಡಿರಬೇಕು.
ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾ ಪರಂಪರೆ ಸಮೃದ್ಧವಾದದ್ದು. ಸಶಕ್ತವಾದದ್ದೂ ಹೌದು.ಕಳೆದ ಒಂದೂವರೆ ಎರಡು ಶತಮಾನದ ಅವಧಿಯಲ್ಲಿ ಆಗಿಹೋದ ಮತ್ತು ಈಗ ಇರುವ ಕಲಾವಿದರ ಹೆಸರು ಮತ್ತು ಅವರ ಸಾಧನೆಗಳನ್ನು ಗಮನಿಸಿದರೆ ನಾವು ಹೆಮ್ಮೆ ಪಡುವದಕ್ಕೆ ಅರ್ಥ ಇದೆ. ನಾನು ಇಲ್ಲಿ ಕೇವಲ ಉತ್ತರ ಕನ್ನಡ ಜಿಲ್ಲೆಯ ನನಗೆ ಒಡನಾಟವಿದ್ದ ಕೆಲವು ಕಲಾವಿದರ ಕುರಿತು ಮಾತ್ರ ಬರೆದಿದ್ದೇನೆ. ಇತರ ಕಲಾವಿದರ ಕುರಿತಾಗಿಯೂ ಅವರನ್ನು ಸರಿಯಾಗಿ ತಿಳಿದುಕೊಂಡವರು ಬರೆಯಬೇಕು. ಯಕ್ಷಗಾನ ಕಲೆ ದೇಶ ವಿದೇಶ ವ್ಯಾಪ್ತಿಯಲ್ಲಿ ಪ್ರಚಾರ ಪ್ರಸಿದ್ಧಿ ಪಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ಈ ಕಲೆಯನ್ನು ಸುಸ್ಥಿತಿಯಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿಯೂ ಕಲೆಯ ಹಿತಚಿಂತಕರಿಗಿದೆ ಎನ್ನುವುದನ್ನು ಮರೆಯಬಾರದು.
- ಎಲ್. ಎಸ್. ಶಾಸ್ತ್ರಿ
ಹಿರಿಯ ಪತ್ರಕರ್ತರು, ಬೆಳಗಾವಿ