ಸಹನೆ ಬೆಟ್ಟದಷ್ಟು ಕಷ್ಟವನ್ನು ದೂರ ಮಾಡಬಲ್ಲದು: ರಂಭಾಪುರಿ ಶ್ರೀ
ರಂಭಾಪುರಿ ಪೀಠ (ಬಾಳೆಹೊನ್ನೂರು) 05: ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆ ದೈವ ಶಕ್ತಿ ಇರುತ್ತದೆ. ಒಂದು ಕ್ಷಣದ ಸಹನೆ ಬೆಟ್ಟದಷ್ಟು ಕಷ್ಟವನ್ನು ದೂರ ಮಾಡಬಲ್ಲದು. ಒಂದು ಕ್ಷಣದ ದುಡುಕಿನಿಂದ ಇಡೀ ಜೀವನ ನಾಶವಾಗಬಹುದೆಂಬ ಎಚ್ಚರಿಕೆಯನ್ನಿಟ್ಟುಕೊಂಡು ಮನುಷ್ಯ ಮುನ್ನಡೆಯಬೇಕೆಂದು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರ ದರ್ಶನ ಮತ್ತು ಪೂಜಾ ಕಾರ್ಯಗಳಿಗೆ ಚಾಲನೆಯಿತ್ತು ಆಶೀರ್ವಚನ ನೀಡಿದರು.
ಕರೋನಾ ಸೋಂಕು ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಸಾರ್ವಜನಿಕರು ಕ್ಷೇತ್ರಕ್ಕೆ ಬರುವುದಕ್ಕೆ ಪೂಜೆ ಸಲ್ಲಿಸಲು ಅವಕಾಶ ಇದ್ದಿಲ್ಲ. ಲಾಕ್ ಡೌನ ತೆರವುಗೊಳಿಸಿ ಸರ್ಕಾರ ಘೋಷಿಸಿದ ಸಂದರ್ಭದಲ್ಲಿ ಶ್ರೀ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ವೀರಭದ್ರಸ್ವಾಮಿ, ಸೋಮೇಶ್ವರ ದೇವಾಲಯ ಮೊದಲ್ಗೊಂಡು ಎಲ್ಲ ಕುಲ ದೈವಗಳಿಗೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ದರ್ಶನ ಮತ್ತು ಪೂಜೆಗೆ ಅವಕಾಶವನ್ನು ಕಲ್ಪಿಸಿಕೊಡಲಾಯಿತು. ಒಳ್ಳೆಯದು ಕೆಟ್ಟದ್ದು ಎರಡೂ ಮನುಷ್ಯನಲ್ಲಿ ಇವೆ. ಯಾವುದನ್ನು ಹೆಚ್ಚು ಬೆಳೆಸುತ್ತೇವೊ ಅದು ಬೆಳೆಯುತ್ತ ಹೋಗುತ್ತದೆ. ಅತಿಯಾದ ಆಲೋಚನೆಗಳು ಸಮಸ್ಯೆಗಳನ್ನು ಬಗೆಹರಿಸುವ ಬದಲು ಹೊಸ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತವೆ. ಕನಸು ಭಗ್ನಗೊಂಡರೆ ಮತ್ತೊಂದು ಕನಸು ಕಾಣಬಹುದು. ಆದರೆ ಮನಸ್ಸು ಮುರಿದರೆ ಮತ್ತೊಂದು ಮನಸ್ಸು ತರುವುದಕ್ಕೆ ಆಗುವುದಿಲ್ಲ. ಸತ್ಯ ಧರ್ಮದ ತಳಹದಿಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಕರೆಯಿತ್ತರು. ಇದೇ ಸಂದರ್ಭದಲ್ಲಿ ಜುಲೈ ರಂಭಾಪುರಿ ಬೆಳಗು ಮಾಸಪತ್ರಿಕೆಯನ್ನು ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಸೆಂಟ್ರಲ್ ಸುಪರಿಂಟೆಂಡೆಂಟ್ ಇಂಜನಿಯರ್ ಕೆ. ದುರಗಪ್ಪನವರು ಬಿಡುಗಡೆ ಮಾಡಿ ಮಾತನಾಡಿದರು.