ಕಿರುತೆರೆ ಖ್ಯಾತಿಯ ನಟ ಸಿದ್ದಾರ್ಥ್ ಶುಕ್ಲಾ ನಿಧನ
ಮುಂಬೈ, ಸೆ. 02: ಹಿಂದಿ ಬಿಗ್ ಬಾಸ್ ನ ಹದಿಮೂರನೇ ಸರಣಿಯ ವಿನ್ನರ್, ಹಾಗೂ ಕಿರುತೆರೆಯ ಜನಪ್ರಿಯ ನಟ ಸಿದ್ದಾರ್ಥ್ ಶುಕ್ಲಾ ನಿಧನರಾಗಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.
ಇಂದು ಬೆಳಗ್ಗೆ 9 ಗಂಟೆಯ ಸಮಾರಿಗೆ ಹೃದಯಾಘಾತದಿಂದಾಗಿ ಅವರು ಅಕಾಲಿಕ ಮರಣಕ್ಕೆ ಈಡಾಗಿದ್ದಾರೆ ಎನ್ನಲಾಗಿದೆ.
ಮುಂಜಾನೆಯೇ ತೀವ್ರ ಹೃದಯಾಘಾತದಿಂದ ಬಳಲಿದ ಅವರನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಮುಂಬೈನ ಕೂಪರ್ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಹಲವಾರು ಚಿತ್ರಗಳಲ್ಲಿಯೂ ನಟಿಸಿದ್ದ ಸಿದ್ದಾರ್ಥ್ ಶುಕ್ಲಾ, ಇತ್ತೀಚೆಗೆ ಡ್ಯಾನ್ಸ್ ದಿವಾನೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.
ತಾಯಿ, ಇಬ್ಬರು ಸಹೋದರಿಯರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅವರು ಅಗಲಿದ್ದಾರೆ.
ಸಿದ್ದಾರ್ಥ್ ಅಗಲಿಕೆಗೆ ನಟ ಮನೋಜ್ ಬಾಜೇಪೇಯಿ ಸೇರಿದಂತೆ ಹಲವರು ತೀವ್ರ ಆಘಾತ ಹಾಗೂ ಶೋಕ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
ಸಿದ್ದಾರ್ಥ್ ಅಕಾಲಿಕ ಮರಣಕ್ಕೆ ಖಚಿತ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.