ರಾಜ್ಯೋತ್ಸವ ಸಂದೇಶ ನೀಡಿದ ತಹಶೀಲ್ದಾರ ಶಂಕರ ಗೌಡಿ
ಲೋಕದರ್ಶನ ವರದಿ
ಮುಂಡಗೋಡ:67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಪಟ್ಟಣ ಪಂಚಾಯತ ಇವರ ಆಶ್ರಯದಲ್ಲಿ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಹಶೀಲ್ದಾರ ಶಂಕರ ಗೌಡಿ ಮಂಗಳವಾರ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು.
ಜಿ.ಪಂ.ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ ಕನ್ನಡ ಮಾತೆಯ ಆರಾಧನೆ ಮಾಡುವ ಸುಸಂದರ್ಭ. ಕನ್ನಡ ಭಾಷೆಗೆ ರಾಷ್ಟ್ರೀಯ ಸ್ಥಾನ-ಮಾನ ದೊರೆತಿದೆ. ಕನ್ನಡ ಆಡಳಿತ ಭಾಷೆಯಾಗಬೇಕು. ಕನ್ನಡ ಭಾಷೆ, ಧ್ವಜಕ್ಕೆ ಗೌರವಿಸಬೇಕು ಎಂದರು. ಪ.ಪಂ.ಅಧ್ಯಕ್ಷೆ ಜಯಸುಧಾ ಭೋವಿವಡ್ಡರ ಮಾತನಾಡಿದರು. ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ 17 ವರ್ಷದ ವಯೋಮಿತಿಯೊಳಗಿನ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇಂದೂರಿನ ಸಾಹಿತಿ ಚಿದಾನಂದ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಜಾನಪದ ಕಲೆಯಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಹದೇವಪ್ಪ ನಡಿಗೇರ ಮತ್ತು ಪತ್ರಿಕೋದ್ಯಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪಿ.ಎಸ್.ಸದಾನಂದ ಅವರಿಗೆ ಶುಭ ಕೋರಲಾಯಿತು.
ಇದಕ್ಕೂ ಮುನ್ನ ಪಟ್ಟಣದ ಪರೀವೀಕ್ಷಣಾ ಮಂದಿರದಿಂದ ಹೊರಟ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಗೆ ತಹಶೀಲ್ದಾರ ಶಂಕರ ಗೌಡಿ, ಪ.ಪಂ.ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಚಾಲನೆ ನೀಡಿದರು. ನಂತರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ತಾಲೂಕು ಕ್ರೀಡಾಂಗಣ ಸೇರಿತು.
ಈ ವೇಳೆ ಪ.ಪಂ.ಉಪಾಧ್ಯಕ್ಷ ಶ್ರೀಕಾಂತ ಸಾನು, ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಲಾ ನಾಯಕ, ಗ್ರೇಡ್-ತಹಶೀಲ್ದಾರ ಜಿ.ಬಿ.ಭಟ್ಟ, ಸಿಪಿಐ ಎಸ್.ಎಸ್.ಸಿಮಾನಿ, ಪ.ಪಂ.ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ವಿವಿಧ ಸಂಘಟನೆಗಳ ಮುಖ್ಯಸ್ಥರು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕರು ನಾಡಗೀತೆ ಹಾಡಿದರು. ಬಿಇಒ ವೆಂಕಟೇಶ ಪಟಗಾರ ಸ್ವಾಗತಿಸಿದರು. ಶಿಕ್ಷಕ ಕೆ.ಕೆ.ಕರುವಿನಕೊಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪಟ್ಟಣ ಪಂಚಾಯತ ಮತ್ತು ಶಿಶು ಅಭಿವೃದ್ಧಿ ಇಲಾಖೆಗಳ ಸ್ತಬ್ಧ ಚಿತ್ರಗಳು ಗಮನ ಸೆಳೆದವು.