ಮತದಾನ ಜಾಗೃತಿ ಅಭಿಯಾನಕ್ಕೆ ತಹಶೀಲ್ದಾರ ಶಂಕರ ಗೌಡಿ ಚಾಲನೆ
ಲೋಕದರ್ಶನ ವರದಿ
ಮುಂಡಗೋಡ:ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಅಂಗವಾಗಿ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ನಡೆಸುತ್ತಿರುವ 81-ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರಗಳ ಮತದಾನ ಜಾಗೃತಿ ಅಭಿಯಾನದ ಮತದಾನ ಪ್ರಾತ್ಯಕ್ಷಿಕೆ ವಾಹನಕ್ಕೆ ಇಲ್ಲಿನ ಮಿನಿ ವಿಧಾನಸೌಧದ ಆವರಣದಲ್ಲಿ ತಹಶೀಲ್ದಾರ ಶಂಕರ ಗೌಡಿ ಮಂಗಳವಾರ ಚಾಲನೆ ನೀಡಿದರು.
ಈ ವೇಳೆ ಮಾಹಿತಿ ನೀಡಿದ ಅವರು ತಾಲೂಕಿನಲ್ಲಿ ಒಟ್ಟು 88 ಮತಗಟ್ಟೆಗಳು ಇದ್ದು, 7ಸೆಕ್ಟರ್ಗಳನ್ನು ಮಾಡಲಾಗಿದೆ. ಪ್ರತಿ ಸೆಕ್ಟರ್ಗೆ ಒಬ್ಬ ಸೆಕ್ಟರ್ ಅಧಿಕಾರಿಯನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ. ಇಂದು ಆರಂಭವಾಗಿರುವ ಮತಯಂತ್ರ ಪ್ರಾತ್ಯಕ್ಷಿಕೆ ವಾಹನದ ಮೂಲಕ ಈ ಅಧಿಕಾರಿಗಳು ಎಲ್ಲ ಮತಗಟ್ಟೆ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮತದಾನದ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ತಮ್ಮ-ತಮ್ಮ ಮತಗಟ್ಟೆಗಳಲ್ಲಿ 2-3 ದಿನಗಳ ಕಾಲಾವಕಾಶ ಪಡೆದು ವಾಹನ ತೆಗೆದುಕೊಂಡು ಹೋಗಿ ಮತದಾರರಿಗೆ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತ ಹಾಕುವ ಬಗ್ಗೆ ಮಾಹಿತಿ ನೀಡಿ ಮತಗಟ್ಟೆಗಳ ವ್ಯವಸ್ಥೆ ಕುರಿತು ಪರೀಶೀಲನೆ ನಡೆಸಿ ಮತದಾನದ ಕುರಿತು ಜಾಗೃತಿ ಮೂಡಿಸಲಿದ್ದಾರೆ ಎಂದರು. ಈ ವೇಳೆ ಪಿಡಬ್ಲ್ಯುಡಿ ಎಇಇ ಮಹದೇವಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ರಾಜೇಶ್ವರಿ ಕದಂ, ಸಿಬ್ಬಂದಿ ರಾಘವೇಂದ್ರ ಗಿರಡ್ಡಿ, ಶ್ರೀಕಾಂತ ಹೊಸಮನಿ, ರಾಘವೇಂದ್ರ ಕರೂರ, ನವೀನ ಕುಲಕರ್ಣಿ ಮತ್ತು ಸಾರ್ವಜನಿಕರು ಇದ್ದರು.
ಬಾಕ್ಸ್ ಸುದ್ದಿ
ತಹಶೀಲ್ದಾರ ಕಚೇರಿಯಲ್ಲಿ ಮತದಾನ ಪ್ರಾತ್ಯಕ್ಷಿಕೆ ಕೇಂದ್ರ: ತಹಶೀಲ್ದಾರ ಕಚೇರಿಯಲ್ಲಿ ಮತದಾನ ಪ್ರಾತ್ಯಕ್ಷಿಕೆ ಕೇಂದ್ರವನ್ನು ತೆರೆಯಲಾಗಿದ್ದು ವಿದ್ಯುನ್ಮಾನ ಮತಯಂತ್ರಗಳ ಮೂಲಕ ಸಾರ್ವಜನಿಕರಿಗೆ ಮತ ಚಲಾಯಿಸುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.