ತಮಿಳು ಹಿರಿಯ ನಟ ಶ್ರೀಕಾಂತ್ ನಿಧನ
ಚೆನ್ನೈ, ಅ 13 : ತಮಿಳು ಸಿನಿಮಾ ರಂಗದ ಹಿರಿಯ ನಟ ಶ್ರೀಕಾಂತ್ ಮಂಗಳವಾರ ಸಂಜೆ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. 1965 ರಲ್ಲಿ ಶ್ರೀಧರ್ ನಿರ್ದೇಶನದ 'ವೆನ್ನಿರಾಡೈʼ ಚಿತ್ರದ ಮೂಲಕ ಶ್ರೀಕಾಂತ್ ತಮಿಳು ಚಿತ್ರರಂಗಕ್ಕೆ ಪರಿಚಯವಾಗಿದ್ದರು. ನಂತರ ಅವರು ಶಿವಾಜಿ ಗಣೇಶನ್, ಜಯಶಂಕರ್, ಮುತ್ತುರಾಮನ್, ರಜನಿಕಾಂತ್ ರಂತಹ ನಾಯಕ ನಟರ ಜೊತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಇನ್ನೂರಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ಅವರು ನಟಿಸಿದ್ದರು.
ಶ್ರೀಕಾಂತ್ 'ರಾಜನಾಗಂ' ( ಕನ್ನಡದಲ್ಲಿ ವಿಷ್ಣುವರ್ಧನ್ ಅಭಿನಯದ ನಾಗರ ಹಾವು) ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಯುವ ಪ್ರೇಕ್ಷಕರನ್ನು ಆಕರ್ಷಿಸಿದ್ದರು. ಶಿವಾಜಿ ಗಣೇಶನ್ ಅಭಿನಯದ 'ತಂಗಪದಕಂ' ಚಿತ್ರದಲ್ಲಿ ಅವರ ಮಗನಾಗಿ ನಟಿಸುವ ಮೂಲಕ ತಮಿಳು ಪ್ರೇಕ್ಷಕರನ್ನು ರಂಜಿಸಿದ್ದರು. ಭೀಮ್ ಸಿಂಗ್ ನಿರ್ದೇಶನದ 'ಸಿಲನೇರಂಗಿಲ್ ಸಿಲಾಮಣಿದರಗಳ್ ' ಚಿತ್ರದಲ್ಲಿ ಲಕ್ಷ್ಮಿ ಜೊತೆ ನಟಿಸಿದ್ದರು. ತಮಿಳಿನ ಸೂಪರ್ ಸ್ಟಾರ್ ಆಗಿ ಪರಿಚಯವಾಗಿದ್ದ ಶ್ರೀಕಾಂತ್ 'ಭೈರವಿ' ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದರು.