ಅಧಿಕಾರಿಗಳ ಬೆವರಿಳಿಸಿದ ತಾ.ಪಂ ಸದಸ್ಯರು
ತಾಲೂಕ ಪಂಚಾಯತ ಸಾಮಾನ್ಯ ಸಭೆ: ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮಕ್ಕೆ ಒತ್ತಾಯ
ಹುನಗುಂದ 21: ತಾಲೂಕಿನ್ಯಾದಂತ ಹಾಡಹಗಲೇ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ದಂದೆ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣಿದ್ದೂ ಕುರುಡಾಗಿದ್ದಾರೆ. ನಾಮಕಾವಸ್ತೆ ಪ್ರಕರಣ ದಾಖಲಿಸಿದ್ದಕ್ಕೆ ತಾಪಂ ಸದಸ್ಯರು ಗರಂ ಆಗಿ ಅಬಕಾರಿ ಸಹಾಯಕ ನಿರೀಕ್ಷಕಿ ಗೌರಿ ಪಾಟೀಲ ಅವರನ್ನು ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು. ನಗರದ ತಾಲೂಕ ಪಂಚಾಯತ ಸಭಾಭವನದಲ್ಲಿ ತಾ.ಪಂ ಅಧ್ಯಕ್ಷ ಅನ್ನದಾನೇಶ್ವರ ನಾಡಗೌಡ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಪಟ್ಟಣದ ಮದ್ಯ ಮಾರಾಟ ಮಳಿಗೆಗಳಲ್ಲಿ ಸಮಯ ಪರಿಪಾಲನೆಯಿಲ್ಲದೆ ಅಬಕಾರಿ ಇಲಾಖೆ ನೀತಿ ನಿಯಮ ಉಲ್ಲಂಘಿಸಿ ರಾತ್ರಿ 11 ಗಂಟೆಯವರೆಗೂ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಪಟ್ಟಣದ ಪ್ರಮುಖ ಡಾಭಾ ಮತ್ತು ಹೊಟೇಲ್ಗಳಲ್ಲಿ ರಾಜಾರೋಷವಾಗಿ ಮದ್ಯ ಸರಬರಾಜು ಆಗುತ್ತಿದ್ದರೂ ಕೇಳುತ್ತಿಲ್ಲ, ಇದ್ದಕ್ಕೇನು ಕ್ರಮ ತಗೆದುಕೊಂಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಅಬಕಾರಿ ಇಲಾಖೆಯ ಅಧಿಕಾರಿ ನಾವು ಹೋದಾಗ ಇರೋದಿಲ್ಲ ಅಂತಾ ಪ್ರತಿಕ್ರಿಯೆ ನೀಡಿದಾಗ ತಾ.ಪಂ ಸದಸ್ಯ ಚಂದಪ್ಪ ಮಾದರ ಅವರು ಸಂಗಮ ಕ್ರಾಸ್ನಲ್ಲಿ ರಾಜರೋಷವಾಗಿ ಮಾರಾಟ ಮಾಡುತ್ತಿದ್ದಾರೆ ಬನ್ನಿ ತೋರಸ್ತೀನಿ ಎಂದಾಗ ಅದಕ್ಕೆ ಶೀಘ್ರದಲ್ಲಿಯೇ ಕ್ರಮ ತಗೆದುಕೊಳ್ಳುತ್ತೇನೆ ಎಂದರು.
ಕಳೆದ ಸಾಮಾನ್ಯ ಸಭೆಯಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು. ಕೊಳಚೆ ಪ್ರದೇಶ ಮತ್ತು ಗ್ರಾಮದ ಪ್ರಮುಖ ಚರಂಡಿಗಳನ್ನು ಶುಚಿಗೊಳಿಸಿ ಮೀಲಾತಿ ಪೌಡರ್ನ್ನು ಸಿಂಪಡಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳ್ಳಬೇಕೆಂದು ಹೇಳಿದ್ದರೂ ಸಹ ಇಲ್ಲಿವರಗೆ ಯಾವದೇ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಅದರ ಬಗ್ಗೆ ಗಮನ ಹರಿಸಿರುವದಿಲ್ಲ. ಪ್ರವಾಹ ಬಂದು ಹೋದ ಗ್ರಾಮಗಳಲ್ಲಿ ಸೊಳ್ಳೆಯ ಕಾಟ ಮಿತಿ ಮೀರಿದ್ದು ಅಲ್ಲೀ ಯಾವ ಕ್ರಮ ತಗೆದುಕೊಂಡಿದ್ದೀರಿ ಎಂದು ಡಾ.ಪ್ರಶಾಂತ ತುಂಬಗಿ ಅವರನ್ನು ಸಭೆಯಲ್ಲಿ ತರಾಟೆಗೆ ತಗೆದುಕೊಂಡಾಗ ಬರೀ ಕೊರೊನಾದ ಕಥೆಯನ್ನು ಹೇಳಿ ತಾ.ಪಂ ಸದಸ್ಯರನ್ನು ಮನ ಒಲಿಸುವ ಕಾರ್ಯ ಮಾಡಿದ್ದೀರಿ. ಅದೆಲ್ಲಾ ಇರಲಿ ಮೊದಲು ಪ್ರತಿ ಗ್ರಾಮಗಳಿಗೆ ಭೇಟಿ ಕೊಟ್ಟು ಚಿಕುನ್ ಗುನ್ಯಾ ಮತ್ತು ಡೆಂಗ್ಯೋ ಬರದಂತೆ ಮೊದಲು ಕ್ರಮ ಕೈಕೊಳ್ಳಿ ಎಂದರು.
ಶಿಕ್ಷಣ ಇಲಾಖೆ ಅಧಿಕಾರಿ ಆಯ್.ಎಚ್.ಅಂಗಡಿಯವರು ಸಭೆಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಶಾಲೆಯಲ್ಲಿ ಶೌಚಾಲಯ ಮತ್ತು ಶಾಲಾ ಕಟ್ಟಡ ಶಿಥಿಲಗೊಂಡಿರುವ ಸಂಖ್ಯೆ ಹೆಚ್ಚಿರುವುದನ್ನು ಕೇಳಿದ ತಾ.ಪಂ ಸದಸ್ಯ ಅಮೀನಪ್ಪ ಸಂಧಿಗವಾಡ ಮರಳಿ ಶಾಲೆ ಆರಂಭಗೊಳ್ಳುವ ಮುನ್ನವೇ ಶಾಲಾ ಕಟ್ಟಡಗಳನ್ನು ದುರಸ್ತಿಗೊಳಿಸಿ. ಯಾವ ಶಾಲಾ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆಯೋ ಅವುಗಳ ಮರು ನಿರ್ಮಾಣಕ್ಕೆ ಆದ್ಯತೆ ನೀಡಿ ಎಂದರು.
ಕೃಷಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ವರದಿ ನೀಡಿದರು. ತಾಪಂ ಇಒ ಎಂ.ಎಂ.ತುಂಬರಮಟ್ಟಿ, ಉಪಾಧ್ಯಕ್ಷೆ ಉಮಾದೇವಿ ಗೌಡರ, ಸದಸ್ಯರಾದ ಶೋಭಾ ಭದ್ರಣ್ಣವರ, ಸಹನಾ ಗದ್ದಿ, ಲತಾ ಕಾಶಪ್ಪನವರ, ರಾಚಮ್ಮ ಬಡ್ಡಿ, ಯಲ್ಲಕ್ಕ ಯರಝೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಸಭೆಗೆ ಗೈರಾದ ಅಧಿಕಾರಿಗಳ ಮೇಲೆ ಕ್ರಮ-ಬುಧವಾರ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಕೆಇಬಿ, ಲೋಕೋಪಯೋಗಿ, ಪಶು ಸಂಗೋಪನ ಇಲಾಖೆ ಗೈರಾಗಿದ್ದು ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಲಾಯಿತು.