ಸೌಂದತ್ತಿ

ತಾಲೂಕಾ ಪಂಚಾಯತಿ ಸಾಮಾನ್ಯ ಸಭೆ

ತಾಲೂಕಾ ಪಂಚಾಯತಿ ಸಾಮಾನ್ಯ ಸಭೆ

ಸವದತ್ತಿ 26: ಇಲ್ಲಿನ ತಾಲೂಕಾ ಪಂಚಾಯತಿ ಸಭಾಭವನದಲ್ಲಿ ಸೋಮವಾರ ತಾಲೂಕಾ ಆಡಳಿತಾಧಿಕಾರಿ ಗೀತಾ ಕೌಲಗಿ ಅವರ ನೇತೃತ್ವದಲ್ಲಿ ತಾಲೂಕಾ ಪಂಚಾಯತಿ ಸಾಮಾನ್ಯ ಸಭೆ ಜರುಗಿತು. 

ಅಧಿಕಾರಿ ಗೀತಾ ಕೌಲಗಿ ಮಾತನಾಡಿ, ಸಾಂಕ್ರಾಮಿಕ ರೋಗ ಹರಡದಂತೆ ಕಾರ್ಯಕ್ರಮಗಳಿದ್ದರೂ ಪ್ರಗತಿ ಕುಂಠಿತವೇಕೆ ? ಇದಕ್ಕೆ ಉತ್ತರ ನೀಡಿದ ಟಿಎಚ್‌ಓ ಶ್ರೀಪಾದ ಸಬನೀಸ್, ಸಿಬ್ಬಂದಿಗಳ ಕೊರತೆಯಿಂದ ಗುರಿ ತಲುಪಲು ಸಾಧ್ಯವಾಗಿಲ್ಲ. ಈಚೆಗೆ ಪಟ್ಟಣ ಸೇರಿ ಕೆಲ ಗ್ರಾಮೀಣದಲ್ಲಿ ಉಲ್ಬಣಿಸಿದ ವಾಂತಿ-ಬೇಧಿ ಪ್ರಕರಣ ಕುರಿತು ಇಲಾಖೆ ಹೆಚ್ಚಿನ ಒತ್ತಡ ಎದುರಿಸುವಂತಾಯಿತು. 275 ಪ್ರಕರಣ ವರದಿಯಾಗಿವೆ. ಶಾಲಾ ಮಕ್ಕಳ ಕುರಿತು ಇಲಾಖೆ ಎಚ್ಚರವಹಿಸಿದ್ದು, ಕೆಂಪು, ಹಳದಿ ಮತ್ತು ಹಸಿರು ವಲಯಗಳಾಗಿ ವಿಂಗಡಿಸಲಾಗಿದೆ. ಕೆಂಪು ವಲಯದಲ್ಲಿ 45 ಮಕ್ಕಳನ್ನು ಗುರಿತಿಸಿ, ಅದರಲ್ಲಿ 10 ಜನ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು. 

ಪಂಚಾಯತ್ ರಾಜ್ಯ ಇಲಾಖೆಯಲ್ಲಿ ನಿರ್ವಹಿಸಿದ ಕಾಮಗಾರಿಗಳನ್ನು ಅವಧಿ ಮುಗಿದರೂ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಕಾಲಮಿತಿ ಗ್ರಹಿಸಿ ಕಪ್ಪು ಪಟ್ಟಿಗೆ ಸೇರಿಸಿರಿ ಎಂದು ಜಿ.ಪಂ ಎಇಇ ಎಚ್‌.ಕೆ. ಕದ್ರಾಪೂರಕರ ಅವರಿಗೆ ಸೂಚಿಸಿದರು. ತಾಲೂಕಿನ ಬಹುತೇಕ ಆರ್‌.ಓ ಪ್ಲಾಂಟ್‌ಗಳು ಕಾರ್ಯ ಮುಕ್ತವಾಗಿವೆ. ಕೆಲವುಗಳಲ್ಲಿನ ಯಂತ್ರವನ್ನೇ ಕದ್ದೊಯ್ಯಲಾಗಿದೆ. ಈ ಕುರಿತು ಕ್ರಮವೇನು ? ಪ್ರಕರಣ ದಾಖಲಿಸಲಾಗಿದೆಯೇ ? ಎಂದು ಆರ್‌ಡಬ್ಲ್ಯುಎಸ್ ಎಇಇ ಬಸವರಾಜ ಅಯ್ಯನಗೌಡರನ್ನು ಪ್ರಶ್ನಿಸಿದಾಗ, ಖಾಸಗಿ ಏಜೆನ್ಸಿಯಿಂದ ನಿರ್ವಹಣೆ ಇದೆ. ಆದರೆ ಅವರು ಸಹ ಗಮನ ನೀಡುತ್ತಿಲ್ಲ. ಆಯಾ ಪಂಚಾಯತಿ ಮುಂದೆ ಬಂದಲ್ಲಿ ಯಂತ್ರಗಳನ್ನು ಮರು ಜೋಡಣೆ ಮಾಡಿ ಹಸ್ತಾಂತರಿಸಲಾಗವುದು ಸಮಜಾಯಿಷಿದರು.  

8 ಲಕ್ಷದಷ್ಟು ಪಠ್ಯದ ಬೇಡಿಕೆ ಇದ್ದರೂ, ಇನ್ನುವರೆಗೆ ಪಠ್ಯ ಪುಸ್ತಕಗಳ ಹಂಚಿಕೆ ವಿಳಂಬವೇಕೆ ? ಶೌಚಾಲಯ ಹಾಗೂ ಕೊಠಡಿ ನಿರ್ಮಾಣ ವಿಳಂಬವೇಕೆ ? ಬೇಸಿಗೆ ರಜೆಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತಲ್ಲವೇ ? ಎಂಬ ಪ್ರಶ್ನೆಗೆ ಬಿಇಓ ಮೋಹನ ದಂಡಿನ ಉತ್ತರಿಸಿ, ಸಧ್ಯ ಶೇ. 39 ರಷ್ಟು ಉಚಿತ ಪೂರೈಕೆ ಮತ್ತು ಶೇ.29 ರಷ್ಟು ಮಾರಟ ನಡೆದಿದೆ. ಪುಸ್ತಕ ಬ್ಯಾಂಕ್ ರಚಿಸಲಾಗಿದ್ದು ಹಳೆಯ ವಿದ್ಯಾರ್ಥಿಗಳಿಂದ ಪಠ್ಯ ಪಡೆದು ವಿದ್ಯಾರ್ಥಿಗಳಿಗೆ ಪುಸ್ತಕ ಪೂರೈಕೆ ನಡೆಸಲಾಗಿದೆ. ನಗರ ಪ್ರದೇಶದಲ್ಲಿ 18 ರಲ್ಲಿ 12 ಹಾಗೂ ಗ್ರಾಮೀಣ ಭಾಗದಲ್ಲಿ ಮೊದಲ ಹಂತದ ಕಟ್ಟಡ ಕಾಮಗಾರಿ ನಡೆದಿವೆ. ಈ ತಿಂಗಳಲ್ಲಿ ಪುಸ್ತಕ ಪೂರೈಕೆಯನ್ನು ಪೂರ್ಣಗೊಳಿಸಲಾಗುವದೆಂದರು. 

ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿಯೇ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲದಾಗಿದೆ. ಸರಕಾರಿ ಕಟ್ಟಡ ಅಥವಾ ಖಾಲಿ ಇರುವ ಶಾಲಾ ಕೊಠಡಿಯಲ್ಲಿ ಅಂಗನವಾಡಿ ನಡೆಸಲು ಬಿಇಓ ಜೊತೆ ಸಮಾಲೋಚಿಸಿರೆಂದು ಸೂಚಿಸಿದರು. 21 ಬಾಲ್ಯ ವಿವಾಹ ತಡೆಯಲಾಗಿದೆ ಎಂದು ಸಿಡಿಪಿಓ ಸುನೀತಾ ಪಾಟೀಲ ತಿಳಿಸಿದರು. 

ಸಧ್ಯ ಹೆಚ್ಚಿನ ಬೆಲೆಗೆ ಬೀಜ-ರಸಗೊಬ್ಬರದ ಮಾರಾಟದ ಕುರಿತು ಕೃಷಿ ಇಲಾಖೆ ಎಮ್‌.ಆಯ್‌. ಅತ್ತಾರ 8 ಅಂಗಡಿಗಳಿಗೆ ನೋಟಿಸ್ ನೀಡಿದೆ. ಇದೇ ಮುಂದುವರೆದಲ್ಲಿ ಅಂಗಡಿಗಳ ಪರವಾನಿಗೆ ರದ್ದಾಗಲಿವೆ ಎಂದರು. ಸ್ಮಶಾನಗಳಿಗೆ ಸೂಕ್ತ ರಸ್ತೆ, ವಿದ್ಯುತ್ ಸಂಪರ್ಕ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ ಎಂಬ  ಪ್ರಶ್ನೆಗೆ ಉತ್ತರಿಸಿದ ಇಓ ಯಶವಂತಕುಮಾರ, ನರೇಗಾದಡಿಯಲ್ಲಿ ಸ್ಮಶಾನ ಅಭಿವೃದ್ಧಿ ಪಡಿಸಲಾಗುವುದು. ದುಸ್ಥಿತಿಯಲ್ಲಿದ್ದ ನೀರಾವರಿ ಕಾಲುವೆಗಳ ಕುರಿತು ಕ್ರಮವಹಿಸಿರಿ ಎಂದರು. 

ತಹಶೀಲ್ದಾರ ಎಮ್‌.ಎನ್‌. ಹೆಗ್ಗನ್ನವರ, ಎಚ್‌.ಎಮ್‌. ಮಲ್ಲನಗೌಡ್ರ, ಮುಖ್ಯಾಧಿಕಾರಿ ಸಂಗನಬಸಯ್ಯ, ಮಾರುತಿ ಚೌಡಕ್ಕನವರ, ಆರ್‌.ಎಸ್‌. ರಕ್ಕಸಗಿ, ಆರ್‌.ಎ. ಪಾಟೀಲ, ಮೈತ್ರಾದೇವಿ ವಸ್ತ್ರದ ಸೇರಿ ವಿವಿಧ ಇಲಾಖಾಧಿಕಾರಿಗಳು ಇದ್ದರು. 


ಸುದ್ದಿ ಓದಿ