ತಾಳಿಕೋಟಿ

ಅಂಗನವಾಡಿಗೆ ಮೀಸಲಿಟ್ಟ ಜಾಗೆ ಪರಭಾರೆ ಆರೋಪ

ಅಂಗನವಾಡಿಗೆ ಮೀಸಲಿಟ್ಟ ಜಾಗೆ ಪರಭಾರೆ ಆರೋಪ

ತಾಳಿಕೋಟೆ, ತಾಲೂಕಿನ ಮೈಲೇಶ್ವರ ಗ್ರಾಮದಲ್ಲಿ ಅಂಗನವಾಡಿಗೆ ಮೀಸಲಿಟ್ಟ ಜಾಗವನ್ನು ನಕಲಿ ಹಕ್ಕು ಪತ್ರ ಸೃಷ್ಠಿಸಿ ಪರಭಾರೆಯನ್ನು ಮಾಡಿಕೊಂಡಿರುವ ವ್ಯಕ್ತಿ ಹಾಗೂ ಪರಭಾರೆ ಮಾಡಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ದೇವಮ್ಮ ದೊಡಮನಿ ನೇತೃತ್ವದಲ್ಲಿ ತಹಶೀಲ್ದಾರ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. 

ಮೈಲೇಶ್ವರ ಗ್ರಾಮದಲ್ಲಿ ಸರ್ವೆ ನಂ 142/ಅ ರಲ್ಲಿ 1979 ರಲ್ಲಿ ಜನತಾ ಮನೆ ನಿರ್ಮಾಣಕ್ಕಾಗಿ ಜಮೀನನ್ನು ವಶಪಡಿಸಿಕೊಂಡಿದೆ. ಇದರಲ್ಲಿ ಮನೆ ಹಂಚಿಕೆ ಮಾಡಿ ಉಳಿದ 1 ಎಕರೆ 11 ಗುಂಟೆ ಜಾಗವನ್ನು ಅಂಗನವಾಡಿಗೆ ಕಾಯ್ದಿರಿಸಲಾಗಿದೆ. ಈ ಹಿಂದೆ ನಾನು ಅಧ್ಯಕ್ಷಳಾಗಿದ್ದ ಅವಧಿಯಲ್ಲಿಯೇ ರೇಣುಕಾ ಸಂಗನಗೌಡ ಬಿರಾದಾರ ಅವರು ಅಕ್ರಮವಾಗಿ ಕಟ್ಟಡವನ್ನು ಕಟ್ಟಲು ಪ್ರಯತ್ನಿಸಿದ್ದರು. ಅದನ್ನು ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ತಡೆ ನೀಡಲು ಸೂಚಿಸಿದ್ದೆ. ಆದರೆ ನನ್ನ ಅವಧಿ ಮುಗಿದ ಮೇಲೆ ಅವರು ನಕಲಿ ಹಕ್ಕು ಪತ್ರ ಸೃಷ್ಠಿಸಿ ಇಸ್ವತ್ತು ಉತಾರೆಯನ್ನು ಪಡೆದಿದ್ದಾರೆ. ಈ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹಿತ ಯಾವುದೇ ಕ್ರಮ ಕೈಕೊಂಡಿಲ್ಲ. ರೇಣುಕಾ ಸಂಗನಗೌಡ ಬಿರಾದಾರ ಅವರು 2015 ರಿಂದ ನನ್ನ ಅವದಿಯಲ್ಲಿಯೇ ಬೊಮ್ಮನಹಳ್ಳಿ ಗ್ರಾಮ ಪಂಚಾಯತ ಸದಸ್ಯಳಾಗಿ ಆಯ್ಕೆಯಾಗಿ, ಇದೇ ಅವಧಿಯಲ್ಲಿ ತಾಳಿಕೋಟೆ ಪಟ್ಟಣದ ರಾಜವಾಡೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾಳೆ. ಈ ಕುರಿತು ಸರಕಾರಕ್ಕೆ ತಪ್ಪು ಮಾಹಿತಿ ಪಡೆದಿದ್ದು ಅಲ್ಲದೇ ಎರಡು ಕಡೆಯಲ್ಲಿ ಸರಕಾರದಿಂದ ಗೌರವಧನವನ್ನು ಪಡೆದುಕೊಂಡಿದ್ದಾಳೆ. ಸದಸ್ಯತ್ವಕ್ಕೆ ಮೂರು ವರ್ಷದ ನಂತರ ರಾಜಿನಾಮೆ ನೀಡಿದ್ದರೂ ಸಹಿತ ಗೌರವಧನ ವಾಪಸ್ಸು ಮಾಡಿರುವದಿಲ್ಲ. ಇನ್ನು ರಾಜವಾಡೆಯ ಅಂಗನವಾಡಿ ಕಾರ್ಯಕರ್ತೆಯಾಗಿದ್ದರೂ ಸಹಿತ ಸಧ್ಯ ಬೊಮ್ಮನಹಳ್ಳಿ ಗ್ರಾಮ ಪಂಚಾಯತ ಅಡಿಯಲ್ಲಿ ಎನ್‌ಆರ್‌ಎಲ್‌ಎಮ್ ಯೋಜನೆಯಡಿ ಸ್ವಸಹಾಯ ಸಂಘಗಳ ಒಕ್ಕೂಟದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಹೀಗೆ ಎರಡು ಹೆಸರಿನಲ್ಲಿ ಅಕ್ರಮ ಎಸಗಿರುವ ಮಹಿಳೆಯ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಹಾಗೂ ಪರಭಾರೆ ಮಾಡಿಕೊಂಡಿರುವ ಜಾಗೆಯನ್ನು ಮರಳಿ ಅಂಗನವಾಡಿ ಕಟ್ಟಡಕ್ಕಾಗಿ ಸರಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು. 


ಸುದ್ದಿ ಓದಿ