ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ: ಸಚಿವ ಡಾ.ಕೆ.ಸುಧಾಕರ
ತಾಳಿಕೋಟೆ25; ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿ ಪ್ರಸಕ್ತ ವರ್ಷದಿಂದಲೇ ಕಾರ್ಯಾರಂಭ ಮಾಡಲಾಗುವದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈಧ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಹೇಳಿದರು.
ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಜಯನಗರ ಸಂಸ್ಥಾನದ ಅರಸರ ಸ್ಮರಣಾರ್ಥ ದಿನದ ಅಂಗವಾಗಿ ಮಾತೃ ಚೈತನ್ಯ ಕಾರ್ಯಕ್ರಮ, ಅಸಾಂಕ್ರಾಮಿಕ ರೋಗಗಳ ಕುರಿತು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ಪಿಂಕ್ ಲಸಿಕಾ ಬೂತ್ ಕಾರ್ಯಕ್ರಮವನ್ನು ವರ್ಚುಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿಜಯ ನಗರ ಸಂಸ್ಥಾನ ನಮ್ಮ ಇತಿಹಾಸದಲ್ಲಿಯೇ ಅಚ್ಚಳಿಯದ ಸಾಮ್ರಾಜ್ಯವಾಗಿದೆ. ಇಂದಿನ ದಿನ ಅತ್ಯಂತ ಮಹತ್ವದ ದಿನವಾಗಿದೆ. ಬೃಹತ್ ವಿಜಯ ನಗರ ಸಂಸ್ಥಾನದ ಅಂತ್ಯವಾದ ದಿನವಾಗಿದೆ. ತಾಳಿಕೋಟೆ ಯುದ್ದ ಮೂಲಕ ಬಹುಮನಿ ಸುಲ್ತಾನರು ಅಳಿಯ ರಾಮರಾಯನನ್ನು ಸೋಲಿಸಿ ವಿಜಯಗಳಿಸಿ ರಾಜ ರಾಜಮನೆತನದ ಮಹಿಳೆಯರ ಮೇಲೆ ದಬ್ಬಾಳಿಕೆ, ಅತ್ಯಾಚಾರವನ್ನು ಮಾಡಿ ಮಹಿಳೆಯರನ್ನು ಹಿಂಸಿಸಿದ್ದು ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ. ಆ ಕಪ್ಪು ಚುಕ್ಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಂದು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಆರೋಗ್ಯ ಸೇವೆಯನ್ನು ನೀಡುವ ಸಲುವಾಗಿ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಐತಿಹಾಸಿಕ ತಾಳಿಕೋಟೆ ಯುದ್ದದ ಬಗ್ಗೆ ಪ್ರಮುಖ ಆಸಕ್ತಿಯನ್ನು ಹೊಂದಿದ್ದಾರೆ. ಮುಂದಿನ ಪಿಳಿಗೆಗೆ ಇತಿಹಾಸವನ್ನು ತಿಳಿಸುವ ಉದ್ದೇಶದಿಂದ ತಾಳಿಕೋಟೆ ಪಟ್ಟಣವನ್ನು ಐತಿಹಾಸಿಕ ಪ್ರವಾಸೋಧ್ಯಮ ಸ್ಥಳ ಎಂದು ಘೋಷಣೆ ಮಾಡಲು ತಿರ್ಮಾನಿಸಿದ್ದು ಎರಡು ಮೂರು ದಿನಗಳಲ್ಲಿ ಆದೇಶ ಹೊರಬಿಳಲಿದೆ. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಇದೇ ವರ್ಷ ಕಾರ್ಯಾರಂಭ ಮಾಡಲಾಗುವದು. ಇದರ ಜೊತೆ ತಂಗಡಗಿ ಪ್ರಾಥಮಿಕ ಆರೊಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಮಾದರಿ ಆರೋಗ್ಯ ಕೇಂದ್ರವನ್ನಾಗಿ ಮಾಡಲಾಗುವದು ಎಂದರು.
ಮುದ್ದೇಬಿಹಾಳ ಶಾಸಕ, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ವರ್ಚುಲ್ ಮೂಲಕ ಮಾತನಾಡಿ, ತಾಲೂಕು ಆಸ್ಪತ್ರೆ ಮಾಡುವದಾಗಿ ತಿಳಿಸಿದ್ದಕ್ಕೆ ಅಬಿನಂಧನೆಯನ್ನು ಸಲ್ಲಿಸಿದರು. ಮತಕ್ಷೇತ್ರಕ್ಕೆ ಹೆಚ್ಚಿನ ಆರೋಗ್ಯ ಸೇವೆ ನೀಡಲು ಸಹಕಾರವನ್ನು ಕೋರಿದರು.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನೀಲಕುಮಾರ, ಆರೋಗ್ಯ ಇಲಾಖೆಯ ಆಯುಕ್ತ ಡಿ.ರಣದೀಪ, ನಿರ್ದೇಶಕಿ ಇಂದುಮತಿ, ಜಿಲ್ಲಾಧಿಕಾರಿ ಪಿ.ಸುನೀಲಕಮಾರ, ಜಿಪಂ ಸಿಇಓ ಗೋವಿಂದರೆಡ್ಡಿ ಅವರು ವರ್ಚುಲ್ದಲ್ಲಿ ಭಾಗವಹಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉತ್ತರ ಕರ್ನಾಟಕದ ಅಪರ ನಿರ್ದೇಶಕ ಡಾ.ಪ್ರಭು ಬಿರಾದಾರ, ಉಪ ನಿರ್ದೇಶಕಿ ಡಾ.ಲಕ್ಷ್ಮೀಬಾಯಿ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು. ಡಿಎಚ್ಓ ಡಾ.ರಾಜಕುಮಾರ ಯರಗಲ್ಲ, ಟಿಎಚ್ಓ ಡಾ.ಸತೀಶ ತಿವಾರಿ, ಆಡಳಿತ ವೈಧ್ಯಾದಿಕಾರಿ ಡಾ.ಎಸ್.ಬಿ.ಪಾಟೀಲ, ಡಾ.ಮಲ್ಲನಗೌಡ ಬಿರಾದಾರ, ಡಾ.ಆಯ್.ಬಿ.ತಳ್ಳೋಳ್ಳಿ, ಡಾ.ಶ್ರೀಶೈಲ ಹುಕ್ಕೇರಿ, ಡಾ.ಮಧು ಅಗರವಾಲ, ಡಾ.ವಿಜಯಲಕ್ಷ್ಮೀ ಹಜೇರಿ ಸೇರಿದಂತೆ ಇತರರು ಇದ್ದರು.
ಬಾಕ್ಸ್ :- ಜಿಲ್ಲಾಡಳಿತಕ್ಕೆ ಸಚಿವರ ಶಹಬ್ಬಾಶಗಿರಿ :- ಕೋವಿಡ್ ಲಸಿಕಾ ಕಾರ್ಯದಲ್ಲಿ ವಿಜಪುರ ಜಿಲ್ಲಾಡಳಿತ ಸಾಧಿಸಿದ ಪ್ರಗತಿಯನ್ನು ಮುಕ್ತ ಕಂಠದಿಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಪ್ರಶಂಶೆಯನ್ನು ವ್ಯಕ್ತಪಡಿಸಿದರು.
ಕೊರೊನಾ ಲಸಿಕೆ ಹಾಕುವಲ್ಲಿ ಮೊದಲ ಡೋಸ್ ಶೇ.100ಅ ರಷ್ಟು ಪ್ರಗತಿ ಸಾಧಿಸಿದ್ದು, ಎರಡನೇ ಡೋಸ್ ಹಾಕುವಲ್ಲಿ ಶೇ.96ಅ ಪ್ರಗತಿಯನ್ನು ಸಾಧಿಸಿದ್ದು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಕಾರ್ಯವನ್ನು ಮಾಡುವಲ್ಲಿ ಶ್ರಮಿಸಿದ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು, ಕಾರ್ಯಕರ್ತರನ್ನ ಮುಕ್ತಕಂಠದಿಂದ ಹೊಗಳಿ, ಶಹಬ್ಬಾಶಗಿರಿಯನ್ನು ವ್ಯಕ್ತಪಡಿಸಿದರು.