ಪ್ರತಿಭೆಯನ್ನು ಯಶಸ್ಸಿನ ಮೂಲಕ ಸಾಧಿಸಿ ತೋರಿಸಬೇಕು:ಎಸ್.ಪಿ.ಶೆಟ್ಟಿ
ಲೋಕದರ್ಶನ ವರದಿ
ಮುಂಡಗೋಡ:ವಿದ್ಯಾರ್ಥಿಗಳು ಪ್ರಯತ್ನಶೀಲರಾಗಬೇಕು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಯಶಸ್ಸಿನ ಮೂಲಕ ಸಾಧಿಸಿ ತೋರಿಸಬೇಕು ಎಂದು ಶಿರಸಿ ಶ್ರೀಮಾರಿಕಾಂಬಾ ಧರ್ಮದರ್ಶಿ ಮಂಡಳದ ಸದಸ್ಯ ಎಸ್.ಪಿ.ಶೆಟ್ಟಿ ಹೇಳಿದರು.
ತಾಲೂಕಿನ ಮಳಗಿ ಗ್ರಾಮದ ಸರಕಾರಿ ಪದವಿಪೂರ್ವ ಕಾಲೇಜ್ನಲ್ಲಿ ಶುಕ್ರವಾರ ಆಯೋಜಿಸಿದ್ದ 2022-23ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಮತ್ತು ನೂತನವಾಗಿ ಆಯ್ಕೆಗೊಂಡ ಕಾಲೇಜು ವಿದ್ಯಾರ್ಥಿ ಸಂಸತ್ತು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಎಸ್.ಡಿ.ಎಮ್.ಸಿ. ಉಪಾಧ್ಯಕ್ಷ ವಿನಾಯಕ ಶೆಟ್ಟಿ ನೂತನವಾಗಿ ಆಯ್ಕೆಗೊಂಡ ವಿದ್ಯಾರ್ಥಿ ಸಂಸತ್ತಿನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ನವೋದಯ ಶಾಲೆ ಪ್ರಾಚಾರ್ಯ ಸಿ.ಕೆ.ಹುಬ್ಬಳ್ಳಿ ಕಾಲೇಜಿನ ನಿಯಮಗಳಿಗೆ ಬದ್ಧರಾಗಿರುವಂತೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿ.ಎನ್.ಹೆಗಡೆ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಕೆಲಸ ಮಾಡಿ ಪ್ರಗತಿಯ ಪಥದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿದರು. ಉಪನ್ಯಾಸಕ ಮಹೇಂದ್ರಕುಮಾರ ಬನವಾಸಿ ಸಂಸತ್ತು ರಚನೆಗೊಂಡ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಗೊಂಡ ಸಂಸತ್ತು ಸದಸ್ಯರು ಹಾಗೂ ಕಾರ್ಯದರ್ಶಿಗಳು ಪ್ರಮಾಣವಚನ ಸ್ವೀಕರಿಸಿದರು.
ಉಪನ್ಯಾಸಕ ವಸಂತ ನಾಯ್ಕ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕಿ ವಿಜಯಾ ಜಿ. ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಮಂಜುನಾಥ ಹೆಗಡೆ ವಂದಿಸಿದರು. ಸಂಸ್ಥೆಯ ಎಸ್.ಡಿ.ಎಮ್.ಸಿ. ಸದಸ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.