ಅನಧಿಕೃತ ಇಟ್ಟಿಗೆ ಭಟ್ಟಿಗಳ ಮಾಲೀಕರಿಗೆ ತಹಶೀಲ್ದಾರ ನೋಟೀಸ್ ಜಾರಿ
ಮುಂಡಗೋಡ 01: ತಾಲೂಕಿನ ಸನವಳ್ಳಿ ಗ್ರಾಮದ ಅನಧಿಕೃತ ಇಟ್ಟಿಗೆ ಭಟ್ಟಿಗಳ ಮಾಲೀಕರಿಗೆ ತಹಶೀಲ್ದಾರ ಶಂಕರಗೌಡಿ ನೋಟೀಸ್ ಜಾರಿ ಮಾಡಿದ್ದಾರೆ.
ಕೃಷಿ ಜಮೀನನ್ನು ಸಾಗುವಳಿ ಉದ್ದೇಶಕ್ಕೆ ಬಳಕೆ ಮಾಡದೆ ಅನಧಿಕೃತ ಇಟ್ಟಿಗೆ ಭಟ್ಟಿಗಳನ್ನು ನಡೆಸುತ್ತಿರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡು ಬಂದಿದೆ. ಕೃಷಿ ಜಮೀನಿನಲ್ಲಿ ಪೂರ್ವಾನುಮತಿ ಪಡೆಯದೆ ಕೃಷಿಯೇತರ ಉಪಯೋಗ ಕೈಗೊಳ್ಳುವುದು ಕರ್ನಾಟಕ ಭೂಕಂದಾಯ ಅಧಿನಿಯಮದಲ್ಲಿ ಸೃಷ್ಟ ಉಲ್ಲಂಘನೆಯಾಗಿರುತ್ತದೆ. ಅಲ್ಲದೆ ಇಟ್ಟಿಗೆ ತಯಾರಿಕೆಯಲ್ಲಿ ಅನಧಿಕೃತವಾಗಿ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ಸಂಪರ್ಕ ಪಡೆದಿದ್ದು ಬೋರ್ವೆಲ್, ಕೆರೆಯ ನೀರನ್ನು ಅನಧಿಕೃತವಾಗಿ ಬಳಕೆ ಮಾಡಿರುವುದು ಕಂಡು ಬಂದಿದೆ.
ನಿಯಮ ಬಾಹಿರವಾಗಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದಿಂದ ಜಮೀನನ್ನು ಕರ್ನಾಟಕ ಭೂಕಂದಾಯ ಕಾಯ್ದೆ ಪ್ರಕಾರ ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಹಾಗೂ ಕೃಷಿ ಜಮೀನನ್ನು ಅನುಮತಿ ಇಲ್ಲದೆ ಕೃಷಿಯೇತರ ಉದ್ದೇಶಕ್ಕೆ ಬಳಸುತ್ತಿದ್ದು ಈ ನೋಟಿಸ್ ತಲುಪಿದ 48 ಘಂಟೆಯೊಳಗಾಗಿ ಲಿಖಿತ ವಿವರಣೆ ಖುದ್ದಾಗಿ ಕಾರ್ಯಾಲಯಕ್ಕೆ ಹಾಜರಾಗಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ಹೇಳಿಕೆ ಏನೂ ಇಲ್ಲಾ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗಳ್ಳೊವುದರ ಜೊತೆಗೆ ಜಾಗೆಯಲ್ಲಿ ಪರವಾನಗಿ ಇಲ್ಲದೆ ಸಿದ್ಧಪಡಿಸಿದ ದಾಸ್ತುನು ಮಾಡಿದ ಎಲ್ಲಾ ಇಟ್ಟಿಗೆ ತಯಾರಿಕೆಗೆ ಬಳಸಿದ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಹಶೀಲ್ದಾರ ನೀಡಿದ ನೋಟೀಸ್ನಲ್ಲಿ ತಿಳಿಸಿದ್ದಾರೆ.
ಈ ಹಿಂದೆ 2020ರಲ್ಲಿ ಸನವಳ್ಳಿ ಮತ್ತು ಅಜ್ಜಳ್ಳಿ ಗ್ರಾಮಗಳಲ್ಲಿ ಅನಧಿಕೃತ ಇಟ್ಟಿಗೆ ಭಟ್ಟಿಗಳ ಬಗ್ಗೆ ಆಗಿನ ತಹಶೀಲ್ದಾರ ಶ್ರೀಧರ ಮುಂದಲಮನಿ ಮತ್ತು ಹೆಸ್ಕಾಂ ಎಇಇ ವಿನಾಯಕ ಪೇಟಕರ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮೂರು ಪಂಪ್ ಸೆಟ್, ವಿದ್ಯುತ್ ತಂತಿ ಮತ್ತು ಇಟ್ಟಿಗೆ ತಯಾರಿ ಮಾಡುವ ಸಲಕರಣೆಗಳನ್ನು ವಶಕ್ಕೆ ಪಡೆದು ಅನಧಿಕೃತ ಇಟ್ಟಿಗೆ ಭಟ್ಟಿಗಳ ಮಾಲೀಕರಿಗೆ ತಹಶೀಲ್ದಾರರು ನೋಟೀಸ್ ಜಾರಿ ಮಾಡಿದ್ದರು. ಆದರೆ ಜನಪ್ರಧಿನಿಧಿಗಳ ಒತ್ತಡವೊ ಏನು ಗೊತ್ತಿಲ್ಲ ಯಾವುದೇ ಕ್ರಮ ಆಗಲಿಲ್ಲ. ನೋಟೀಸ್ ನೆಪಕ್ಕೆ ಮಾತ್ರ ಸೀಮಿತವಾಗಿತ್ತು ಎಂಬ ಮಾತು ಕೇಳಿ ಬಂದಿತ್ತು. ಪ್ರತಿ ವರ್ಷವೂ ಸನವಳ್ಳಿ ಹಾಗೂ ತಾಲೂಕಿನಾದ್ಯತ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತ ಇಟ್ಟಿಗೆ ಭಟ್ಟಿಗಳು ರಾಜಾರೋಷವಾಗಿ ನಡೆಯುತ್ತಿವೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇನ್ನಾದರೂ ಇದನ್ನು ತಡೆ ಹಿಡಿಯುವರೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.