ತಹಶೀಲ್ದಾರ ಮೇಲೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ
ಲೋಕದರ್ಶನ ವರದಿ
ಮುಂಡಗೋಡ: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಜೆ.ಕೆ.ರಶ್ಮಿ ಅವರ ನೇತೃತ್ವದ ತಂಡ ಇಲ್ಲಿನ ತಹಶೀಲ್ದಾರರನ್ನು ವಿಚಾರಣೆಗೆ ಕರೆದೊಯ್ಯಲು ಶುಕ್ರವಾರ ನಸುಕಿನ ವೇಳೆ ಬಂದಿತ್ತು ಮಧ್ಯಾಹ್ನದವರೆಗೂ ಮನೆಯ ಬಾಗಿಲನ್ನು ತೆರೆಯದೆ ತಹಶೀಲ್ದಾರ ಮನೆಯ ಒಳಗೆ ಕುಳಿತಿದ್ದರಿಂದ ಅವರನ್ನು ಮನೆಯ ಆವರಣದಲ್ಲಿ ಕಾಯುತ್ತಿದ್ದ ಪೊಲೀಸ್ ಸಿಬ್ಬಂದಿ ನ್ಯಾಯಾಲಯದ ತಡೆಯಾಜ್ಞೆ ಬಂದ ನಂತರ ವಾಪಸ್ ತೆರಳಿದ್ದಾರೆ.
ತಹಶೀಲ್ದಾರ ಶ್ರೀಧರ ಮುಂದಲಮನಿ ಅವರು 2014ರಲ್ಲಿ ಗ್ರೇಡ್-2 ತಹಶೀಲ್ದಾರ ಹುದ್ದೆಯ ಆಯ್ಕೆಗೆ ನಕಲಿ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದರೆ ಅವರು ಸುಳ್ಳು ಪ್ರಮಾಣ ಪತ್ರ ನೀಡಿ ನೌಕರಿ ಪಡೆದಿದ್ದಾರೆ ಎಂದು ಯಲಬುರ್ಗ ಡಿಸಿಆರ್ಇ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ನಸುಕಿನ ವೇಳೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಜೆ.ಕೆ.ರಶ್ಮಿ ಅವರ ನೇತೃತ್ವದ ತಂಡ ತಹಶೀಲ್ದಾರ ಶ್ರೀಧರ ಮುಂದಲಮನಿ ಅವರ ವಿಚಾರಣೆಗೆ ಬಂದಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ತಹಶೀಲ್ದಾರ ತಮ್ಮ ಮನೆಯ ಬಾಗಿಲನ್ನು ತೆರೆಯದೆ ಮನೆಯ ಒಳಗೆ ಇದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಾಹ್ನ ನ್ಯಾಯಾಲಯದ ತಡೆಯಾಜ್ಞೆ ಬಂದ ನಂತರ ಪೊಲೀಸ್ ತಂಡದವರು ವಾಪಸ್ ತೆರಳಿದ್ದಾರೆ.