ಚಿಕ್ಕೋಡಿ

ತಹಶೀಲ್ದಾರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಯಶಸ್ವಿ

ತಹಶೀಲ್ದಾರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಯಶಸ್ವಿ
ಚಿಕ್ಕೋಡಿ: ತಾಲೂಕಿನ ವಾಳಕಿ ಗ್ರಾಮದಲ್ಲಿ ಶಾಸಕ ಗಣೇಶ ಹುಕ್ಕೇರಿ, ತಹಶೀಲ್ದಾರ ಪ್ರವೀಣ ಜೈನ್, ಉಪವಿಭಾಗಾಧಿಕಾರಿ ಯುಕೇಶಕು

ಚಿಕ್ಕೋಡಿ 20: ತಹಶೀಲ್ದಾರ ನಡೆ ಹಳ್ಳಿ ಕಡೆ ಹಿನ್ನಲೆಯಲ್ಲಿ ಶಾಸಕ ಗಣೇಶ ಹುಕ್ಕೇರಿ, ಚಿಕ್ಕೋಡಿ ತಹಶೀಲ್ದಾರ ಪ್ರವೀಣ ಜೈನ್, ಉಪವಿಭಾಗಾಧಿಕಾರಿ ಯುಕೇಶಕುಮಾರ ಅವರು ಚಿಕ್ಕೋಡಿ ತಾಲೂಕಿನ ವಾಳಕಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಂದ ಅಲ್ಲಿನ ಸಮಸ್ಯೆಗಳನ್ನು ಆಲಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರೆ ಇನ್ನು ಕೆಲವುಗಳಿಗೆ ಸಂಬಂಧಿಸಿದ ಇಲಾಖೆಗೆಗಳಿಗೆ ಸೂಚಿಸುವ ಮೂಲಕ ಗ್ರಾಮದ ಜನರ ಕಡೆಯಿಂದ ಪ್ರಶಂಸೆಗೆ ಪಾತ್ರರಾದರು.  

ಪ್ರತಿ ತಿಂಗಳಿನ ಮೂರನೆ  ಶನಿವಾರ ತಹಶೀಲ್ದಾರ ನಡೆ ಹಳ್ಳಿ ಕಡೆ ಎನ್ನುವ ಕಾರ್ಯಕ್ರಮಕ್ಕೆ ಶನಿವಾರ ವಾಳಕಿ ಗ್ರಾಮಕ್ಕೆ ಇಡೀ ತಾಲೂಕಾಡಳಿತದೊಂದಿಗೆ ಗ್ರಾಮಕ್ಕೆ ತೆರಳಿದಾಗ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿಕೊಂಡು ಗ್ರಾಮದಲ್ಲಿ ಇರುವ ಹಲವು ಸಮಸ್ಯೆಗಳಿಗೆ ಪರಿಹರಿಸಲು ಸಾಕ್ಷಿಯಾದರು. 

ಗ್ರಾಮದಲ್ಲಿ ಅವಶ್ಯಕವಾಗಿ ಬೇಕಾಗಿರುವ ಶುದ್ಧ ಕುಡಿಯುವ ನೀರಿನ ಯೋಜನೆ ಅರ್ಧಕ್ಕೆ ನಿಂತಿದ್ದು, ಅದನ್ನು ಶೀಘ್ರವಾಗಿ ಮುಗಿಸಿ ಜನರಿಗೆ ಕುಡಿಯುವ ನೀರು ಕೊಡುವುದು. ಜನರ ಆರೋಗ್ಯ ಹಿತದೃಷ್ಠಿಯಿಂದ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವುದು. ಗ್ರಾಮದ ನೂರಾರು ಮಕ್ಕಳು ನಿಪ್ಪಾಣಿ ಹಾಗೂ ಚಿಕ್ಕೋಡಿಗೆ ಶಾಲೆಗೆ ಹೋಗುತ್ತಿದ್ದಾರೆ. ಅವರಿಗೆ ಸಮರ್ಪಕ ಬಸ್ಸಿನ ಸೌಕರ್ಯ ಕಲ್ಪಿಸುವುದು. ಮತ್ತು ಸ್ಮಶನಾ ನಿರ್ಮಾಣ, ಅಂಗನವಾಡಿ ಕಟ್ಟಡಗಳಿಗೆ ಜಾಗ ನೀಡುವುದು ಸೇರಿದಂತೆ ಜನರ ವೈಯಕ್ತಿ ಸಮಸ್ಯೆಕ್ಕಿಂತ ಇಡೀ ಗ್ರಾಮದ ಜನರಿಗೆ ಅನುಕೂಲವಾಗುವ ಯೋಜನೆ ಅನುಷ್ಠಾನ ಮಾಡಲು ಜನರು ಅಧಿಕಾರಿಗಳ ಬಳಿ ಬೇಡಿಕೆ ಇಟ್ಟರು.

ಜನರ ಬೇಡಿಕೆಗೆ ಸ್ಪಂಧಿಸಿದ ಉಪವಿಭಾಗಾಧಿಕಾರಿ ಯುಕೇಶಕುಮಾರ ಹಾಗೂ ತಹಶೀಲ್ದಾರ ಪ್ರವೀಣ ಜೈನ್ ಅವರು ಜನರ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುತ್ತದೆ. ಯಾವ ಸಮಸ್ಯೆ ಯಾವ ಇಲಾಖೆಗೆ ಬರುತ್ತಿದೆಯೋ ಆ ಅಧಿಕಾರಿಗಳಿಗೆ ಶೀಘ್ರವಾಗಿ ಜರನ ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಮಧ್ಯಾಹ್ನ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಗಣೇಶ ಹುಕ್ಕೇರಿ ಅವರು ಪಾಲ್ಗೊಂಡು ಅಧಿಕಾರಿಗಳೇ ನೇರವಾಗಿ ಗ್ರಾಮದ ಜನರ ಬಳಿ ಹೋಗಿ ಜನರ ಸಮಸ್ಯೆ ಕೇಳುವುದು ಒಳ್ಳೆಯ ಕಾರ್ಯಕ್ರಮವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಕಿಕೊಟ್ಟ ಗ್ರಾಮ ವಾಸ್ತವ್ಯ ಇಂದು ಜನರಿಗೆ ಅನುಕೂಲವಾಗಿದೆ. ಗ್ರಾಮದಲ್ಲಿ ಇರುವ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಬೇಕು. ವಾಳಕಿ ಗ್ರಾಮಕ್ಕೆ 10.38 ಕೋಟಿ ರೂ ಕೆರೆ ತುಂಬಿಸಲು ಅನುದಾನ ಮಂಜೂರಾಗಿದೆ ಎಂದರು.

ತಾಪಂ ಉಪಾಧ್ಯಕ್ಷ ಮಹಾದೇವಿ ನಾಯಿಕ, ದುರೀಣ ವಿನೋಧ ಕಾಗೆ, ಗ್ರಾಪಂ ಸದಸ್ಯ ಮಧುಕರ ಮಧರಖಂಡಿ, ಸಿಡಿಪಿಒ ಸುಮಿತ್ರಾ, ಬಿಇಒ ಬಿ.ಎ.ಮೇಕನಮರಡಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.

ಸುದ್ದಿ ಓದಿ