ತಮಿಳು ಹಾಸ್ಯನಟ ವಿವೇಕ್ ಆಸ್ಪತ್ರೆಗೆ ದಾಖಲು.. ಪರಿಸ್ಥಿತಿ ಗಂಭೀರ
ಚೆನ್ನೈ, ಏ 16: ತಮಿಳು ಚಿತ್ರರಂಗದ ಪ್ರಮುಖ ಹಾಸ್ಯನಟ ವಿವೇಕ್ ಅವರಿಗೆ ಹೃದಯಾಘಾತವಾಗಿದ್ದು, ಚೆನ್ನೈನ ಸಿಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಪ್ರಸ್ತುತ ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಕಲ್ಪಿಸಲಾಗಿದೆ. ವಿಶೇಷ ವೈದ್ಯರ ತಂಡ ವಿವೇಕ್ ಅವರ ಆರೋಗ್ಯ ಪರಿಸ್ಥಿತಿಯ ಮೇಲೆ ನಿಗಾ ವಹಿಸಿ ಚಿಕಿತ್ಸೆ ನೀಡುತ್ತದೆ.ತಮಿಳು ಚಲನ ಚಿತ್ರರಂಗದಲ್ಲಿ ಅತ್ಯಂತ ಪ್ರತಿಭಾವಂತ ನಟನೆಂದು ಹೆಸರಾಗಿರುವ ವಿವೇಕ್ ಸುಮಾರು 220 ಚಿತ್ರಗಳಲ್ಲಿ ನಟಿಸಿದ್ದಾರೆ. 2009 ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೂ ಭಾಜನಾರಾಗಿದ್ದರು. ವಿವೇಕ್ ತಮಿಳು ನಟರಾಗಿದ್ದರೂ, ಕನ್ನಡ, ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತರಾಗಿದ್ದು, ರಜನಿಕಾಂತ್, ಕಮಲ್ ಹಾಸನ್, ವಿಜಯ್ ಹಾಗೂ ವಿಶಾಲ್ ಅವರೊಂದಿಗೆ ನಟಿಸಿರುವ ವಿವೇಕ್, ತಮಿಳು ಚಿತ್ರರಂಗದಲ್ಲಿ ಅಗ್ರ ಹಾಸ್ಯನಟರಾಗಿದ್ದಾರೆ.
ಕೆಲವು ವರ್ಷಗಳ ಹಿಂದೆ ವಿವೇಕ್ ಅವರ ತಾಯಿ ಹಾಗೂ ಪುತ್ರ ಪ್ರಸನ್ನ ಕುಮಾರ್ ನಿಧನ ಹೊಂದಿದ ನಂತರ ವಿವೇಕ್ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಗುರುವಾರ ಕೋವಿಡ್ ಲಸಿಕೆ ತೆಗೆದುಕೊಂಡ ವಿವೇಕ್, ಜನರು ಕೊರೊನಾ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದ್ದರು. ಲಸಿಕೆ ಹಾಕಿದ ಕೆಲವೇ ಗಂಟೆಗಳಲ್ಲಿ ಹೃದಯಾಘಾತಕ್ಕೆ ಒಳಗಾಗಿ ಅವರು ಆಸ್ಪತ್ರೆಗೆ ಸೇರಿರುವುದು ಅಚ್ಚರಿ ಮೂಡಿಸಿದೆ. ವಿವೇಕ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಶೀಘ್ರ ಚೇತರಿಕೆಗಾಗಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.