ಸ್ವರಯೋಗಿ ಪಂ. ಮಲ್ಲಿಕಾರ್ಜುನ ಮನ್ಸೂರ
ಪಂಡಿತ ಮಲ್ಲಿಕಾರ್ಜುನ ಮನ್ಸೂರರು ಭಾರತೀಯ ಹಿಂದೂಸ್ತಾನಿ ಸಂಗೀತದಲ್ಲಿ ಉನ್ನತ ಶಿಖರಕ್ಕೇರಿ ಪ್ರಾತಃ ಸ್ಮರಣೀಯರಾದವರು. ಭಾರತದ ಸಂಗೀತ ಪ್ರಪಂಚದಲ್ಲಿ ಅವರು ಆಚಾರ್ಯ ಪುರುಷರಾಗಿ ವಿರಾಜಮಾನರಾದವರು. ಪಂಡಿತ ಮನ್ಸೂರರು ರಾಷ್ಟ್ರಮಟ್ಟದ ಪ್ರಸಿದ್ಧಿ ಹಾಗೂ ಗೌರವಗಳನ್ನು ಪಡೆದರೂ ಸಹ ಜನಸಾಮಾನ್ಯರಂತ ಬದುಕಿ ತೋರಿಸಿದವರು. ಅವರನ್ನು ಅನಕೃ ಅವರು ‘ಕನ್ನಡದ ರಾಯಭಾರಿ’ ಎಂದು ಕರೆದಿದ್ದರು.
ಪಂ.ಮಲ್ಲಿಕಾರ್ಜುನ ಮನ್ಸೂರರು ಧಾರವಾಡ ನಗರಕ್ಕೆ ಸಮೀಪವಿರುವ ಮನ್ಸೂರ್ ಎಂಬ ಗ್ರಾಮದಲ್ಲಿ 1910, ಡಿಸೆಂಬರ್ 31ರಂದು ಜನಿಸಿದರು. ತಂದೆ ಭೀಮರಾಯಪ್ಪ, ತಾಯಿ ನೀಲಮ್ಮ. ಅವರ ತಂದೆ ಭೀಮರಾಯಪ್ಪ ಗ್ರಾಮದ ಮುಖಂಡರಾಗಿದ್ದು, ಜಮೀನ್ದಾರರಾಗಿದ್ದರು.. ಅವರಿಗೆ ಸಂಗೀತ ಮತ್ತು ನಾಟಕಗಳಲ್ಲಿ ಅಪಾರ ಆಸಕ್ತಿ ಇತ್ತು. ಅವರ ಹಿರಿಯ ಮಗ ಬಸವರಾಜ ನಾಟಕ ಕಂಪನಿಯನ್ನು ನಡೆಸುತ್ತಿದ್ದರು. ತಾಯಿ ನೀಲಮ್ಮ ಬೀಸುವ ಕಲ್ಲಿನ ಪದ, ಭಕ್ತಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಹೀಗಾಗಿ ಮಲ್ಲಿಕಾರ್ಜುನರ ಬಾಲ್ಯವು ಸಂಗೀತದೊಂದಿಗೆ ಬೆಳೆಯಿತು. ಶಾಲಾಭ್ಯಾಸಕ್ಕಾಗಿ ಅವರನ್ನು ಧಾರವಾಡದ ಅಜ್ಜಿಯ ಮನೆಗೆ ಕಳುಹಿಸಿದರು. ಆದರೆ ಅವರು ನಾಲ್ಕನೇ ತರಗತಿಯವರೆಗೆ ಮಾತ್ರ ಓದಿ, ಸಂಗೀತದ ಒಲವಿನಿಂದ ಧಾರವಾಡದಲ್ಲಿಯ ವಾಮನರಾವ ಮಾಸ್ತರರ ವಿಶ್ವಗುಣಾದರ್ಶ ನಾಟಕ ಕಂಪನಿಗೆ ಸೇರಿದರು. ಅವರ ತಂದೆಗೆ ಈ ಸುದ್ದಿ ಗೊತ್ತಾಗಿ, ಮತ್ತೇ ಮಲ್ಲಿಕಾರ್ಜುನರನ್ನು ಮರಳಿ ಶಾಲೆಗೆ ಸೇರಿಸಿದರು. ಆದರೆ ಮನ್ಸೂರರು ನಾಲ್ಕೈದು ತಿಂಗಳ ನಂತರ ಶಾಲೆಯನ್ನು ಬಿಟ್ಟು ಕಂಪನಿಗೆ ಸೇರಿದರು.
ಚಂದ್ರಹಾಸ, ಕೃಷ್ಣ, ಪ್ರಹ್ಲಾದ, ಧ್ರುವ ಮೊದಲಾದ ಬಾಲಪಾತ್ರಗಳಲ್ಲಿ ಮಲ್ಲಿಕಾರ್ಜುನರು ಮಿಂಚಿದರು. ನಟನೆಯ ಜೊತೆಗೆ ನಾಟಕದಲ್ಲಿಯ ಹಾಡುಗಳನ್ನು ಹಾಡುತ್ತಿದ್ದರು. ಬಾಗಲಕೋಟೆಯ ಕ್ಯಾಂಪಿನಲ್ಲಿನಲ್ಲಿದ್ದಾಗ ಮೀರಜ್ನಿಂದ ನೀಲಕಂಠಬುವಾ ಮಿರಜಕರ ನಾಟಕ ನೋಡಲು ಬಂದಿದ್ದರು. ಮಲ್ಲಿಕಾರ್ಜುನರ ಹಾಡುಗಾರಿಕೆ ನೀಲಕಂಠಬುವಾರವರ ಮನಸೆಳೆಯಿತು. ಅವರು ಮಲ್ಲಿಕಾರ್ಜುನರನ್ನು ಶಿಷ್ಯನನ್ನಾಗಿ ಮಾಡಿಕೊಂಡು ಮೀರಜ್ಗೆ ಕರೆದೊಯ್ದರು. ಅವರು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಮಲ್ಲಿಕಾರ್ಜುನರಿಗೆ ಸಂಗೀತ ಕಲಿಸಿದರು. ನೀಲಕಂಠಬುವಾ ಅವರದು ಮಧುರ ಧ್ವನಿ, ದೊಡ್ಡ ವಿದ್ವತ್ತು, ಶಿಷ್ಯ ಮಲ್ಲಿಕಾರ್ಜುನರಿಗೆ ಬೆಳಗಿನ ಜಾವ ಎರಡು ತಾಸುಗಳವರೆಗೆ ಸ್ವರಗಳು ಮತ್ತು ಅಲಂಕಾರಗಳ ಅಭ್ಯಾಸ ಮಾಡಿಸಿದರು. ನಂತರ ಛೋಟಾ ಖ್ಯಾಲ, ಬಡಾ ಖ್ಯಾಲ ಮತ್ತು ತಾಲ ಬೋಧನೆ ಹೀಗೆ 6 ವರ್ಷಗಳವರೆಗೆ ಮಲ್ಲಿಕಾರ್ಜುನರಿಗೆ ತಾಲೀಮು ನೀಡಲಾಯಿತು. ಅವರು ಭೂಪ, ತೋಡಿ, ಬಿಹಾಗ, ಮಾಲಕಂಸ, ದರಬಾರಿ, ಯಮನ್, ಕೇದಾರ, ಪೂರಿಯಾ, ಬಿಲಾವಲ, ಲಲಿತ ಮೊದಲಾದ ಐವತ್ತು ರಾಗಗಳನ್ನು ಕರಗತಮಾಡಿಕೊಂಡರು.
1929ರಲ್ಲಿ ಮಲ್ಲಿಕಾರ್ಜುನ ಮನ್ಸೂರರು ಸಂಗೀತ ಶಿಕ್ಷಣ ಪಡದು ಮೊದಲು ತಾವಿದ್ದ ವಾಮನರಾವ ಮಾಸ್ತರರ ನಾಟಕ ಕಂಪನಿಗೆ ಮರಳಿದರು. ಅವರು ಸಂಗೀತ ನಿರ್ದೇಶಕರಾಗಿ ಹಾಗೂ ಪ್ರಧಾನ ನಟರಾಗಿ ನಾಟಕಗಳಲ್ಲಿ ಪಾಲ್ಗೊಂಡರು. ಅಚ್ಚರಿಯೆಂದರೆ ‘ವೀರ ಅಭಿಮನ್ಯು’ ನಾಟಕ ಹುಬ್ಬಳ್ಳಿಯೊಂದರಲ್ಲೇ ಸತತ ಎಂಭತ್ತು ಪ್ರಯೋಗಗಳನ್ನು ಕಂಡಿತು. ಮಲ್ಲಿಕಾರ್ಜುನ ಮನ್ಸೂರರ ಸಂಗೀತದಿಂದ ನಾಟಕ ಪ್ರಸಿದ್ಧಿ ಪಡೆಯಿತು. ನಂತರ ಅವರು ವಾಣಿವಿಲಾಸ ನಾಟಕ ಕಂಪನಿಯಲ್ಲಿ ಗುರು ನೀಲಕಂಠಬುವಾರವರನ್ನು ಕರೆಸಿಕೊಂಡು ನಾಟಕಗಳಲ್ಲಿ ಅಭಿನಯಿಸಿದರು. ಆದರೆ ಕಂಪನಿಯ ಪರದೆಗೆ ಆಕಸ್ಮಿಕ ಬೆಂಕಿ ತಗಲಿದ್ದರಿಂದ, ತೀವ್ರ ನಷ್ಟ ಅನುಭವಿಸಿತು. ಹೀಗಾಗಿ ರಂಗಭೂಮಿಯೊಂದಿಗೆ ಮನ್ಸೂರು ಸಂಬಂಧವನ್ನು ಕೊನೆಗಳಿಸಿದರು. ನಂತರ ಅವರು ಸಂಗೀತದ ಮೇಲೆ ಕೇಂದ್ರಿಕರಿಸಿದರು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮನ್ಸೂರ ಎರಡು ಧ್ವನಿ ಮುದ್ರಿಕೆಗಳು ಬಿಡುಗಡೆಯಾಗಿ ಜನಪ್ರಿಯಗೊಂಡವು. ಇವುಗಳಿಂದ ಮನ್ಸೂರರು ಮಹಾರಾಷ್ಟ್ರದಲ್ಲಿ ಪ್ರಸಿದ್ಧಿ ಪಡೆದರು.
ಸಂಗೀತದ ಎಲ್ಲ ಸ್ವರಗಳಲ್ಲಿ ಪರಿಣತಿ ಹೊಂದಿದ ಮಲ್ಲಿಕಾರ್ಜುನರು ಧಾರವಾಡಕ್ಕೆ ಮರಳಿದರು. 1933ರಲ್ಲಿ ಎಚ್.ಎಂ.ವಿ ಕಂಪನಿ ಮನಸೂರರನ್ನು ಧ್ವನಿಮುದ್ರಣಕ್ಕೆ ಆವ್ಹಾನಿಸಿತು. ಅವರು ಎಲ್ಲಾ ರಾಗಗಳ ಜೊತೆಗೆ ಕನ್ನಡದ ಶರಣರ ವಚನಗಳನ್ನು ಹಾಗೂ ಮರಾಠಿಯ ಭಜನೆಗಳನ್ನು ಹಿಂದೂಸ್ತಾನಿ ಸಂಗೀತಕ್ಕೆ ಅಳವಡಿಸಿ ಜನಪ್ರಿಯಗೊಳಿಸಿದರು. ವಿಶೇಷವಾಗಿ ಬಸವಣ್ಣ ಮತ್ತು ಅಕ್ಕಮಹಾದೇವಿಯವರ ವಚನಗಳನ್ನು ಪ್ರೊ ಬಸವನಾಳರ ಸಹಾಯದಿಂದ ಲಘುಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿ ಜನಪ್ರಿಯಗೊಳಿಸಿದರು. ಅಕ್ಕಮಹಾದೇವಿಯ ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’, ಶಿಶುನಾಳ ಷರೀಪರ ‘ತೇರನೆಳಯತಾರೆ ತಂಗಿ’ ಎಂಬ ತತ್ವಪದ ಮತ್ತು ಬಸವಣ್ಣನವರ ‘ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ’ ಎಂಬ ವಚನ, ನಾಟ್ಯಗೀತೆ, ಭಾವಗೀತೆಗಳು ಮಲ್ಲಿಕಾರ್ಜುನ ಮನ್ಸೂರರ ಕಂಠದಿಂದ ಹೊರಹೊಮ್ಮಿದವು. ಈ ಧ್ವನಿಮುದ್ರಿಕೆಗಳು ಬಿಸಿದೋಸೆಯಂತೆ ಮಾರಾಟವಾದವು.
ಮುಂಬೈಯಲ್ಲಿ ಮನ್ಸೂರ ಅವರ ಧ್ವನಿಮುದ್ರಿಕೆಗಳನ್ನು ಆಲಿಸಿದ ಜೈಪುರ ಫರಾಣಿಯ ಸಂಸ್ಥಾಪಕ ಅಲ್ಲಾದಿಖಾನರ ಹಿರಿಯ ಪುತ್ರ ಮಂಜಿಖಾನ್ರವರು ಮಲ್ಲಿಕಾರ್ಜುನ ಮನ್ಸೂರರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. ಅಲ್ಲಿ ಎರಡು ವರ್ಷಗಳವರೆಗೆ ಶೃದ್ಧೆಯಿಂದ ಸಂಗೀತಾಭ್ಯಾಸ ಮಾಡಿದರು. ಅವರು ಅಸಾವರಿ, ಭೈರವ, ಶಿವಮತ್ ಭೈರವ, ದೇಸಕಾರ, ಗೌಡಸಾರಂಗ, ಭೀಮಪಲಾಸ, ನಟಬಿಹಾಗ ಮುಂತಾದ ರಾಗಗಳನ್ನು ಕರಗತ ಮಾಡಿಕೊಂಡರು. 1933ರಲ್ಲಿ ಮಂಜಿಖಾನರು ತೀರಿಕೊಂಡರು. ನಂತರ ಮನ್ಸೂರರು ಮಂಜಿಖಾನ್ ಸಹೋದರ ಬುರ್ಜಿಖಾನರ ಬಳಿ ಅಭ್ಯಾಸ ಮಾಡಿದರು. ಹತ್ತು ವರ್ಷಗಳ ಕಾಲದ ಕಠಿಣ ತಾಲೀಮಿನ ಬಳಿಕ ಮನ್ಸೂರರು ಜೈಪುರ ಫರಾಣಿಯ ಪ್ರಮುಖ ಗಾಯಕರಾಗಿ ಹೊರಹೊಮ್ಮಿದರು. ಜೈಪುರ ಫರಾಣಿಯಲ್ಲಿ ಅಲ್ಲಾದಿಯಾ ಖಾನ್ ಮತ್ತು ಅವರ ಸಹೋದರ ಹೈದರಖಾನ್ ಹಾಗೂ ಪುತ್ರರಾದ ಮಂಜಿಖಾನ್ ಮತ್ತು ಬುರ್ಜಿಖಾನ್ ಹೊರತುಪಡಿಸಿದರೆ, ಕುಟುಂಬದ ಹೊರಗಿನ ಸದಸ್ಯರಲ್ಲಿ ಮಲ್ಲಿಕಾರ್ಜುನ ಮನ್ಸೂರರು ಪ್ರಮುಖ ಗಾಯಕರಾಗಿದ್ದರು. “ಬೇಟಾ, ಇನ್ನು ಮುಂದೆ ನೀನು ನನ್ನೆದುರು ಹಾಡಬೇಡ, ನಿನ್ನ ಗಾಯನ ಕೇಳುವಾಗ ನನ್ನ ಪುತ್ರ ಮಂಜಿಖಾನ್ ನನ್ನೆದುರು ಬಂದಂತೆ ಭಾಸವಾಗುತ್ತದೆ” ಎಂದು ಮನ್ಸೂರರ ಗಾಯನ ಕೇಳಿದ ಅಲ್ಲಾದಿಯಾ ಖಾನ್ ಕಣ್ಣೀರು ಹಾಕುತ್ತಾ ನುಡಿದಿದ್ದರು. ಜೈಪುರ ಫರಾಣೀಯ ಸಂಸ್ಥಾಪಕರಿಂದ ಸಿಕ್ಕ ಈ ಪ್ರಶಂಸೆಯ ನುಡಿ ಮನ್ಸೂರರ ಸಂಗೀತ ಕುರಿತ ಬದ್ಧತೆಗೆ ದೊಡ್ಡ ಪ್ರತಿಫಲವಾಗಿತ್ತು. ಮಲ್ಲಿಕಾರ್ಜುನ ಮನ್ಸೂರರು ಜೈಪುರ ಫರಾಣಿಯ ವರಿಷ್ಠರಾಗಿ ಬೆಳೆದು ಸಂಗೀತಗಾರರ ಸಂಗೀತಗಾರ ಎಂದು ಪ್ರಶಂಸೆಗೆ ಒಳಪಟ್ಟರು.
ಮಲ್ಲಿಕಾರ್ಜುನ ಮನ್ಸೂರರು ಮುಂಬೈ ನಗರದಿಂದ ಧಾರವಾಡಕ್ಕೆ ಹಿಂತಿರುಗಿದರು. ಅವರು ಧಾರವಾಡ ಆಕಾಶವಾಣಿಯ ಕೇಂದ್ರದ ಸಲಹೆಗಾರರಾಗಿ, ಬೆಳಗಾವಿಯ ಹೆಚ್.ಎಂ.ವಿ ಗ್ರಾಮೋಪೋನ ಕಂಪನಿಯ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. 1943ರಲ್ಲಿ ನಿರ್ಮಾಣವಾದ ಚಂದ್ರಹಾಸ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದರು. ಸಂಪ್ರದಾಯ ಹಾಗೂ ಆಧ್ಯಾತ್ಮಿಕ ಹಿನ್ನಲೆಯಿಂದ ಬಂದ ಮನ್ಸೂರರು ಧಾರವಾಡದಲ್ಲಿ ಮೂರು ದಶಕಗಳ ಕಾಲ ಪತ್ನಿ ಗಂಗಮ್ಮ, ಮಕ್ಕಳೊಂದಿಗೆ ಜನಸಾಮಾನ್ಯರಂತೆ ಬದುಕಿದರು. ಮಲ್ಲಿಕಾರ್ಜುನ ಮನ್ಸೂರವರಿಗೆ ಏಳು ಜನ ಹೆಣ್ಣುಮಕ್ಕಳು, ಓರ್ವ ಪುತ್ರ. ಬಡತನ ಎಂದೂ ಅವರ ಬೆನ್ನು ಬಿಡಲಿಲ್ಲ. ಆದರೆ ಅವರು ಮಾತ್ರ ಸಂಗೀತ ಶ್ರೇಷ್ಠತೆಯ ಬೆನ್ನು ಬಿಡಲಿಲ್ಲ. ಅವರು ಓರ್ವ ಸಂತ ಫಕೀರನಂತೆ ಬದುಕಿದರು. ಅವರು ಪುತ್ರ ರಾಜಶೇಖರ ಮನ್ಸೂರ, ಪುತ್ರಿ ನೀಲಾಂಬಿಕಾ ಕೊಡ್ಲಿ, ಸಿದ್ಧರಾಮ ಜಂಬಲದಿನ್ನಿ, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಸೇರಿದಂತೆ ಹಲವು ಶಿಷ್ಯರನ್ನು ಜೈಪುರ ಫರಾಣಿ ಪರಂಪರೆಗೆ ನೀಡಿರುವರು. ಧಾರವಾಡದ ಮುರುಘಾಮಠದ ಮೃತ್ಯುಂಜಯ ಶ್ರೀಗಳು, ಮುರಗೋಡದ ಮಹಾಂತ ಶಿವಯೋಗಿಗಳು, ಹಾವೇರಿ ಶಿವಬಸವ ಸ್ವಾಮಿಗಳು ಮತ್ತು ಅಥಣಿ ಶಿವಯೋಗಿ ಶ್ರೀಗಳ ಮಠಗಳಿಗೆ ಹೋಗಿ ಸಂಗೀತ ಭಕ್ತಿ ಸಲ್ಲಿಸುವುದು ಮನ್ಸೂರರ ಶ್ರದ್ಧೆಯಾಗಿತ್ತು.
1981ರಲ್ಲಿ ಮನ್ಸೂರರು ಮುಂಬೈಯ ಮಾತುಂಗಾ ಸರ್ಕಲ್ನಲ್ಲಿ ಹಾಡಿದರು. ಆಗ ಮಳೆ ಬಿಟ್ಟು ಬಿಡದೇ ಧೋ ಎಂದು ಸುರಿಯುತ್ತಿತ್ತು. ಅದನ್ನು ಲೆಕ್ಕಿಸದೇ ಸಭಾಭವನ ತುಂಬಿತ್ತು. ಮನ್ಸೂರರು ತೋಡಿ ಪ್ರಸ್ತುತಪಡಿಸಿದರು. ಸಭಾಭವನದ ಮೂಲೆಯಲ್ಲಿ ಕುಳಿತ ವೃದ್ಧರೊಬ್ಬರ ಕಣ್ಣುಗಳಲ್ಲಿ ಆನಂದಭಾಷ್ಟಗಳು ಗಡ್ಡದಗುಂಟ ಇಳಿಯತ್ತಿದ್ದವು. ವೃದ್ಧರು ಭಾವಪರವಶರಾಗಿದ್ದರು. 1988ರಲ್ಲಿ ದೆಹಲಿಯ ಶಕ್ತಿ ಸ್ಥಳದಲ್ಲಿ ಇಂದಿರಾಗಾಂಧಿಯವರ ನಾಲ್ಕನೆಯ ಪುಣ್ಯತಿಥಿ ಸಂದರ್ಭದಲ್ಲಿ ಮನ್ಸೂರರು ತಮ್ಮ ಗಾಯನವನ್ನು ಅಕ್ಕಮಹಾದೇವಿಯ ‘ಅಕ್ಕ ಕೇಳವ್ವ’ ವಚನದೊಂದಿಗೆ ಮುಕ್ತಾಯಗೊಳಿಸಿದರು. ಅದು ರಾಷ್ಟ್ರೀಯ ದೂರದರ್ಶನ ಜಾಲದಲ್ಲಿ ಪ್ರಸಾರಗೊಂಡು, ಅವರ ಗಾಯನವನ್ನು ಕೇಳಿದ ಪ್ರತಿಯೊಬ್ಬರು ಪುಳಕಿತಗೊಂಡಿದ್ದರು. ಮನ್ಸೂರವರದು ಎತ್ತರದ ಶ್ರುತಿಯನ್ನು ಒಳಗೊಂಡ ಕಂಠ. ವಿಲಂಬಿತ ಅಥವಾ ಮಂದ್ರ ಹಾಗೂ ಮಧ್ಯಮ ವೇಗದಲ್ಲಿ ಖ್ಯಾಲ್ ಅಥವಾ ಖಯಾಲ್ ಗಾಯನದ ರಾಗಗಳು, ಮರಾಠಿ ರಂಗಗೀತೆಗಳು ಮತ್ತು ಅಭಂಗ್ ಅಥವಾ ಭಜನೆಗಳನ್ನು ಅತ್ಯಂತ ಶುದ್ಧವಾದ ಶಾಸ್ತ್ರೀಯ ಶೈಲಿಯಲ್ಲಿ ಹಾಡುತ್ತಿದ್ದ ರೀತಿಯಿಂದಾಗಿ ಅವರು ಇಡೀ ದೇಶದ ಗಮನಸೆಳೆದರು.
ಗದುಗಿನ ಸಂಗೀತಾಸಕ್ತರ ಬಳಗದ ಸಂಗೀತ ರತ್ನ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಹಿಂದೂಸ್ತಾನಿ ಗಾಯಕ, ಕರ್ನಾಟಕ ಸಾರ್ವಜನಿಕ ಸೇವಾ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಪದ್ಮಭೂಷಣ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಮಧ್ಯಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ, ಕೋಲ್ಕತ್ತಾದ ವಿಶ್ವಭಾರತಿ ವಿದ್ಯಾಲಯದ ಗೌರವ ಡಾಕ್ಟರೇಟ್, ಪದ್ಮ ವಿಭೂಷಣ ಪ್ರಶಸ್ತಿ-ಪುರಸ್ಕಾರಗಳು ಅವರನ್ನರಸಿಕೊಂಡು ತಮ್ಮ ಗೌರವ ಹೆಚ್ಚಿಸಿಕೊಂಡವು. ಅಲ್ಲದೇ ಕರ್ನಾಟಕ ಸರ್ಕಾರ ಅವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿ ಗೌರವ ಸೂಚಿಸಿತು. ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ‘ಸಂಗೀತ ರತ್ನ’ ಗೌರವ ಗ್ರಂಥ ಅರ್ಿಸಿದೆ. ‘ನನ್ನ ರಸಯಾತ್ರೆ’ ಅವರ ಆತ್ಮಕತೆ. 2014ರಲ್ಲಿ ಭಾರತೀಯ ಅಂಚೆ ಇಲಾಖೆಯು ಅವರ ನೆನಪಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದೆ.
ಪಂ.ಡಾ.ಮಲ್ಲಿಕಾರ್ಜುನ ಮನ್ಸೂರರು ಸೆಪ್ಟೆಂಬರ್ 12, 1992ರಂದು ಸ್ವರ ಸಾಗರದಲ್ಲಿ ಲೀನವಾದರು. 82 ವಯಸ್ಸಾಗಿದ್ದರೂ ಅವರು ಕೊನೆಯವರೆಗೂ ಹಾಡಿದರು. ಧಾರವಾಡದ ಅವರ ನಿವಾಸವನ್ನು ಈಗ ಸ್ಮಾರಕ ಮಾಡಲಾಗಿದ್ದು, ಕರ್ನಾಟಕ ಸರ್ಕಾರವು ಅವರ ಹೆಸರಿನಲ್ಲಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ರಚಿಸಿದೆ. ಪಂ.ಮಲ್ಲಿಕಾರ್ಜುನ ಮನ್ಸೂರ ಅವರ ಹೆಸರಿನಲ್ಲಿ ಪ್ರತಿವರ್ಷ ಡಿಸೆಂಬರ್ 31ರಂದು ದೇಶದ ಪ್ರಸಿದ್ಧಸಂಗೀತ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
- ಸುರೇಶ ಗುದಗನವರ
ಧಾರವಾಡ
9449294694
- * * * -