ಲೇಖನಗಳು

ಸ್ವರ ಸಾಮ್ರಾಟ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ

ಸ್ವರ ಸಾಮ್ರಾಟ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ

ಸಂಗೀತ ಶ್ರೇಷ್ಠ ಕಲೆ. ಅದು ಒಲಿಯುವದು ಸಾಧಕರಿಗೆ ಮಾತ್ರ. ಅಂತಹ ಸಾಧಕರಲ್ಲಿ ದೇಸಿ ಸಂಸ್ಕೃತಿಯ ಸೊಗಡಿನಿಂದ ಹಿಂದುಸ್ತಾನಿ ಕ್ಷೇತ್ರದಲ್ಲಿ ತಮ್ಮದೇ ಆದೆ ಛಾಪು ಮೂಡಿಸಿದವರು ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರು. ಅವರು ಜೈಪುರ-ಅತ್ರೌಲಿ ಘರಾಣೆಯ ಅನುಪಮ ಗಾಯಕರು. ಪಂ. ಮತ್ತಿಗಟ್ಟಿ ಅವರು ನಾದದ ಲೋಕದಲ್ಲಿ ವಿಹರಿಸುತ್ತ ಸಂಗೀತಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟು, ಮಹಾನ್ ಗಾಯಕರು ಹಾಗೂ ಸಂಗೀತ ಕಲಾವಿದರಿಗೆ ಆದರ್ಶಪ್ರಿಯರಾಗಿದ್ದರು.

ಪಂ. ಪಂಚಾಕ್ಷರಿ ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳದಲ್ಲಿ 1926ರ ಅಕ್ಟೋಬರ 26ರಂದು ಜನಿಸಿದರು. ತಂದೆ ಚನ್ನಬಸವಯ್ಯ, ತಾಯಿ ಸಾತವ್ವ. ತಂದೆಯವರು ಕುಂದಗೋಳ ತಾಲೂಕಿನ ಮತ್ತಿಗಟ್ಟಿ ಗ್ರಾಮದಲ್ಲಿ ರೈತ ಕುಟುಂಬದವರು. ಚನ್ನಬಸವಯ್ಯನವರು ದೊಡ್ಡಾಟ, ಸಣ್ಣಾಟದ ಪದಗಳು, ಗೀಗೀ ಪದಗಳು ಮತ್ತು ತತ್ವ ಪದಗಳನ್ನು ಹಾಡುವದರೊಂದಿಗೆ ಅನೇಕ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದರು. ಸಾತವ್ವ ಜಾನಪದ ಹಾಡುಗಳನ್ನು ಹಾಡುವದರಲ್ಲಿ ಎತ್ತಿದ ಕೈ. ಹೀಗಾಗಿ ಬಾಲ್ಯದಿಂದಲೇ ಜಾನಪದ ಪರಿಸರದಲ್ಲೇ ಬೆಳೆದ ಪಂ.ಪಂಚಾಕ್ಷರಿಯವರು ಸಂಗೀತದಲ್ಲಿ ಒಲವು ಬೆಳೆಸಿಕೊಂಡರು. ಶಿಶುವಿನಾಳ ಶರೀಫ ಸಾಹೇಬರ ಮೊಮ್ಮಗ ಮೊಹಿನುದ್ದೀನ ಬಾಬಾ ಅವರು ಬಸವೇಶ್ವರ ದೇವಸ್ಥಾನದಲ್ಲಿ ಸಂಗೀತ ಕಲಿಸುತ್ತಿದ್ದರು. ಪಂಚಾಕ್ಷರಿ ಅವರು ಶಾಲೆಯಿಂದ ನೇರವಾಗಿ ಮೊಹಿನುದ್ದಿನ್ ಬಾಬಾರ ಬಳಿ ಹೋಗಿ ಸಂಗೀತ ಆಲಿಸುತ್ತಿದ್ದರು.

ಸಂಗೀತದಲ್ಲಿ ಆಸಕ್ತಿ ತೋರುತ್ತಿದ್ದ ಪಂ. ಪಂಚಾಕ್ಷರಿ ಅವರನ್ನು ಚಿಕ್ಕಪ್ಪ ಶೇಖರಯ್ಯನವರು  1932ರಲ್ಲಿ ಹೊಂಬಳದ ಕ್ಯಾಂಪಿನಲ್ಲಿದ್ದ ಪಂ. ಪಂಚಾಕ್ಷರಿ ಗವಾಯಿಗಳ ಹತ್ತಿರ ಕರೆದುಕೊಂಡು ಬಂದರು. ಬಾಲಕನಿಗೆ ಒಂದು ಪದ್ಯ ಹಾಡಿ ತೋರಿಸು ಅಂದಾಗ, 'ಓ ಗಿರಿಜಾ ರಮಣನೆ' ಎಂಬ ದೊಡ್ಡಾಟದ ಪದ್ಯವನ್ನು ಹಾಡಿದ ಏಳು ವರ್ಷದ ಬಾಲಕನ ಪ್ರತಿಭೆಗೆ ಮನಸೋತು ಗವಾಯಿಗಳವರು ಪಂ.ಪಂಚಾಕ್ಷರಿ ಮತ್ತಿಗಟ್ಟಿ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. ಅದೇ ಆಶ್ರಮದಲ್ಲಿ ಆಗ ಪುಟ್ಟರಾಜ ಗವಾಯಿಗಳು, ಪಂ.ಬಸವರಾಜ ರಾಜಗುರು, ಪಂ.ಚಂದ್ರಶೇಖರ ಪುರಾಣಿಕಮಠ ಮುಂತಾದವರು ಸಂಗೀತಾಭ್ಯಾಸ ಮಾಡುತ್ತಿದ್ದರು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಸಂಜೆ 4 ರಿಂದ ರಾತ್ರಿ  9 ಗಂಟೆವರೆಗೆ ರಾಗಗಳ ಸಂಗೀತ ಪಾಠದಲ್ಲಿ ತೊಡಗಿರುತ್ತಿದ್ದರು. ಹೀಗೆ ನಿರಂತರ 1932 ರಿಂದ 1944ರವರೆಗೆ ಗ್ವಾಲಿಯರ್ ಶೈಲಿಯಲ್ಲಿ ಗುರುಗಳಿಂದ ಸಂಗೀತವನ್ನು ಕಲಿತರು. ಗುರುಗಳ ಅಕಾಲಿಕ ನಿಧನದಿಂದ ವಿದ್ಯಾರ್ಥಿಗಳು ಆಶ್ರಮ ತೊರೆದರು. ಆದರೆ ಪಂ. ಪಂಚಾಕ್ಷರಿಯವರು ಆಶ್ರಮವನ್ನು ತೊರೆಯದೇ, ಅಲ್ಲಿದ್ದುಕೊಂಡು ಆಶ್ರಮದ ನಾಟ್ಯ ಸಂಘದ ವಿವಿಧ ನಾಟಕಗಳಲ್ಲಿ ಆಭಿನಯಿಸಿ ಸೈ ಎನಿಸಿಕೊಂಡರು. 

ಗದುಗಿನಲ್ಲಿ 'ಹೇಮರಡ್ಡಿ ಮಲ್ಲಮ್ಮ' ನಾಟಕದಲ್ಲಿ ಅಭಿನಯಿಸುವಾಗ, ನಾಟಕ ನೋಡಲು ಪಂ.ಮಲ್ಲಿಕಾರ್ಜುನ ಮನ್ಸೂರ ಅವರು ಆಗಮಿಸಿದ್ದರು. ಪಂಚಾಕ್ಷರಿಯವರು ಹಾಡಿದ ಪಟದೀಪ ರಾಗದ ಅಹಾಮಮತೆ, ಬಿಭಾಸ ರಾಗದ ಶಾಂತಿ ಭಕ್ತಿ ಸುಗುಣರಾಶಿ ಮತ್ತು ಸಾರಂಗ ರಾಗದ ಪಕ್ಷಿ ಬಂದಿತು ಅಂಗಳದೊಳಗೆ ಪದ್ಯಗಳು ಮನ್ಸೂರರ ಮನಸೊರೆಗೊಂಡವು. ನಂತರ ಪಂ. ಮನ್ಸೂರ ಅವರು ಪಂಚಾಕ್ಷರಿ ಕಂಠವನ್ನು ಗುರುತಿಸಿ, ನೀನು ಸಂಗೀತಾಭ್ಯಾಸ ಮಾಡಲು ಧಾರವಾಡಕ್ಕೆ ಬಾ ಎಂದು ಹೇಳಿದರು. ಪಂ.ಪಂಚಾಕ್ಷರಿಯವರು 1951ರಲ್ಲಿ ಗಂಡಾ ಬಂಧನ ಮಾಡಿಕೊಂಡು, 1962ರವರೆಗೂ ಸಂಗೀತದ ತರಬೇತಿ ಪಡೆದುಕೊಂಡರು. ಪಂ.ಪಂಚಾಕ್ಷರಿ ಮತ್ತಿಗಟ್ಟಿಯವರು ಗ್ವಾಲಿಯರ ಘರಾಣೆಯ ಸುಪ್ರಸಿದ್ಧ ಗಾಯಕ ಪಂ.ನೀಲಕಂಠಬುವಾ ಮಿರಜಕರ ಅವರಲ್ಲಿ ಆರುವರ್ಷಗಳ ಕಾಲ ಶಾಸ್ತ್ರಬದ್ಧ ಅಭ್ಯಾಸ ಮಾಡಿದರು. ಪಂಚಾಕ್ಷರಿ ಅವರದು ಸುರೇಲಿ ಧ್ವನಿ, ದೈವದತ್ತವಾಗಿ ಒಲಿದು ಬಂದ ಕಂಠಸಿರಿಗೆ ಸಾಧನೆಯಿಂದ ಅಳವಡಿಸಿದ ಸ್ಪಷ್ಟತೆ ಮತ್ತು ಗಾಂಭೀರ್ಯ ಅಲ್ಪ ವೇಳೆಯಲ್ಲಿಯೇ ಶೋತೃಗಳನ್ನು ತನ್ನಲ್ಲಿ  ಹಿಡಿದಿಟ್ಟುಕೊಳ್ಳುತ್ತದೆ. ಜೈಪುರ ಅತ್ರೌಲಿ ಘರಾಣೆಯ ಕೊಲ್ಲಾಪುರದ ಪಂ.ನಿವೃತ್ತಿ ಬುವಾ ಸರ್ನಾಯಕ್ ಅವರಲ್ಲಿ ಸತತ ಆರು ವರ್ಷಗಳ ಕಾಲ ಘರಾಣೆಯ ಕಠಿಣ ತರವಾದ ಹರಕತ್ಗಳನ್ನು ವೈಶಿಷ್ಟ್ಯಗಳನ್ನು ಅಭ್ಯಾಸ ಮಾಡಿ ರೂಢಿಸಿಕೊಂಡರು.

1976ರಲ್ಲಿ ಪಂ. ಪಂಚಾಕ್ಷರಿ ಮತ್ತಿಗಟ್ಟಿ ಅವರು ಆಕಾಶವಾಣಿಯಲ್ಲಿ ತಂಬೂರಿ ಕಲಾವಿದರೆಂದು ನೇಮಕಗೊಂಡರು. ಇದು ಪಂ.ಮಲ್ಲಿಕಾಜರ್ುನ ಮನ್ಸೂರ ಅವರಿಗೆ ಇಷ್ಟವಾಗಲಿಲ್ಲ. ನಂತರ ಪಂ.ಮತ್ತಿಗಟ್ಟಿಯವರು ಕರ್ನಾಟಕ ವಿಶ್ವವಿದ್ಯಾಲಯದ ಪಬ್ಲಿಕ್ ಶಾಲೆಯಲ್ಲಿ ಸಂಗೀತ ಶಿಕ್ಷಕರೆಂದು ನೇಮಕಗೊಂಡರು. ಅವರು ಕನರ್ಾಟಕ ಕಲಾ ಕಾಲೇಜಿನ ಸಂಗೀತ ವಿಭಾಗದಲ್ಲಿ ಸೇವೆ ಸಲ್ಲಿಸಿ ತದನಂತರ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಹಾಗೂ ಲಲಿತ ಕಲೆ ವಿಭಾಗದಲ್ಲಿ ಸೇವೆ ಸಲ್ಲಿಸಿ 1986ರಲ್ಲಿ ನಿವೃತ್ತಿ ಹೊಂದಿದರು. ಪಂ. ಪಂಚಾಕ್ಷರಿಯವರು 1988ರವರೆಗೂ ಸಂಗೀತವನ್ನು ಅನೇಕ ಶಿಷ್ಯರಿಗೆ ಧಾರೆಯರೆದಿದ್ದಾರೆ. ಷಡಕ್ಷರಿ ಬುವಾ ಯತ್ನಳ್ಳಿ, ಉಷಾ ಕುಲಕರ್ಣಿ, ಜಯದೇವಿ ಜಂಗಮಶೆಟ್ಟಿ, ಗೀತಾ ಜಾವಡೇಕರ, ನಿರ್ಮಲಾ ಜಯಾನಂದಯ್ಯ, ನಾಗರಾಜ ಹವಾಲ್ದಾರ, ಮೀರಾ ಗುಂಡಿ, ಫಕೀರಪ್ಪ ಹೂಗಾರ, ಹನುಮಣ್ಣ ನಾಯಕ ದೊರೆ, ಮುದ್ದು ಮೋಹನ, ಮುಕ್ತಾ ಮಜುಮದಾರ, ಮೃತ್ಯುಂಜಯ ಅಗಡಿ, ವಿಜಯಾ ಹಿರೇಮಠ, ಸರಯೂ ಸೊನ್ನಿ ಎ.ಯು.ಪಾಟೀಲ, ಮುಕ್ತಾ ನಾಡಿಗೇರ, ಸೋಮಶೇಖರ ಮರಡಿಮಠ ಸೇರಿದಂತೆ ಇನ್ನೂ ಅನೇಕ ಶಿಷ್ಯಂದಿರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಪಂ.ಪಂಚಾಕ್ಷರಿ ಮತ್ತಿಗಟ್ಟಿಯವರು ಜೈಪುರ ಅತ್ರೌಲಿ ಫರಾಣಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಮರ್ಥವಾಗಿ ಪ್ರತಿನಿಧಿಸಿದ್ದರು. ರಾಗಗಳಾದ ಸೋರಟ, ಲಚ್ಚಾಸಾಗ, ಬಸಂತಿ ಕಾನಡಾ, ರಾಯಿಸಾಕಾನಡಾ, ಬಿಹಂಗ, ಬಿಹಾರಿ, ಬಸಂತಿ ಕೇದಾರ, ರಾಮದಾಸಿ ಮಲ್ಹಾರ, ಮೀರಾಬಾಯಿ ಮಲ್ಹಾರ, ಸಾವನಿಕಲ್ಯಾಣ, ಖಟ್, ನಟ್ಬಿಹಾನ್, ಪಟಬಿಹಾನ್, ಗಾಂಧಾರಿ, ಪರಜ, ಜಯಿತ್ ಕಲ್ಯಾಣ, ಆಡಂಬರಿ ಕೇದಾರ, ಶುಕ್ಷ ಬಿಲಾವಲ. ಕುಕುಬ್ ಬಿಲಾವಲ, ಕಾಫಿಕಾನಡಾ, ಗೌಡಮಲ್ಹಾರ ಮುಂತಾದ ಕಠಿಣ ರಾಗಗಳನ್ನು ಲೀಲಾಜಾಲವಾಗಿ ಪ್ರಬುದ್ಧತೆಯಿಂದ ಹಾಡುತ್ತಿದ್ದರು. ಬಸವಾದಿ ಶರಣರ ವಚನಗಳು, ತತ್ವಪದ, ಚಪ್ಪಾ, ಠುಮ್ರಿ, ದಾದ್ರಾ, ಹೋರಿ ಇತ್ಯಾದಿ ಪ್ರಕಾರಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅವರು ಎಂಟು ದಶಕಗಳವರೆಗೆ ಮಧುರ ಕಂಠಸಿರಿಯನ್ನು ಕಾಯ್ದುಕೊಂಡು ಶೋತೃಗಳಿಗೆ, ವಿದ್ಯಾರ್ಥಿಗಳೀಗೆ ಉಣಬಡಿಸುತ್ತಾ ಬಂದಿರುವುದು ಅನುಪಮವಾದುದು.

ಅಂದಾಜು 600 ಅಪ್ರಚಲಿತ ರಾಗಗಳನ್ನು ಹಾಡುವ ಪಂ.ಪಂಚಾಕ್ಷರಿ ಮತ್ತಿಗಟ್ಟಿಯವರ 300 ರಾಗಗಳನ್ನು ಮದ್ರಾಸಿನ ಶೃತಿ ಫೌಂಡೇಶನ್  ಧ್ವನಿ ಮುದ್ರಿಸಿಕೊಂಡಿದೆ. ನಾಟ್ಯಗೀತೆ, ದಾಸರ ಪದಗಳು, ತತ್ವಪದಗಳು, ಭಜನೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುವ ಅವರು ವಚನಗಾಯನದಲ್ಲಿ ವಿಶೇಷ ಛಾಪನ್ನು ಮೂಡಿಸಿದ್ದರು. 'ಅಕ್ಕ ಕೇಳವ್ವ, ನಾನೊಂದು ಕನಸ ಕಂಡೆ' ಮನ್ಸೂರರನ್ನು ನೆನೆಪಿಗೆ ತರುವ ಅಕ್ಕಮಹಾದೇವಿಯ ಈ ವಚನದೊಂದಿಗೆ ಇನ್ನೂ ಅನೇಕ ವಚನಗಳನ್ನೊಳಗೊಂಡ ಅವರ 'ಅಕ್ಕ ಕೇಳವ್ವ' ಕ್ಯಾಸೆಟ್ ಬಹಳ ಪ್ರಸಿದ್ಧವಾಗಿದೆ. ಏ ಶ್ರೇಣಿಯ ಕಲಾವಿದರಾದ ಅವರು ಮುಂಬೈ, ದೆಹಲಿ, ಕೋಲ್ಕತ್ತಾ, ಹೈದ್ರಾಬಾದ್ ಚೆನ್ನೈ, ಬೆಂಗಳೂರ ಮುಂತಾದ ಕಡೆ ಕಾರ್ಯಕ್ರಮ ನೀಡಿದ್ದರು. ಭಾರತದ ಬಹುತೇಕ ನಗರಗಳಲ್ಲಿ, ಅಮೇರಿಕಾ ಮತ್ತು ಲಂಡನ್ಗಳಲ್ಲಿಯೂ ತಮ್ಮ ಕಾರ್ಯಕ್ರಮ ನೀಡಿ ಖ್ಯಾತಿ ಪಡೆದ ಅವರ ಗಾಯನವನ್ನು ಅನೇಕ ಸಂಘ-ಸಂಸ್ಥೆಗಳು ಧ್ವನಿ ಮುದ್ರಿಸಿಕೊಂಡಿವೆ.

ಸಹಜ-ಸರಳ ವ್ಯಕ್ತಿತ್ವವನ್ನು ಹೊಂದಿದ ಪಂ.ಪಂಚಾಕ್ಷರಿ ಮತ್ತಿಗಟ್ಟಿ ಅವರು ಸಿದ್ಧಿಗಾಗಿ  ಬದುಕಿದವರೇ ಹೊರತು ಪ್ರಸಿದ್ಧಿಗಾಗಿ ಅಲ್ಲ. ಸದ್ಗುಣಗಳನ್ನು ಸಾದಾತನವನ್ನು ಜೀವನದುದ್ದಕ್ಕೂ ಉಳಿಸಿಕೊಂಡು ಬಂದ ಅವರು ಜೀವನದ ಮೌಲ್ಯಗಳನ್ನು ಆಚರಣೆಯಲ್ಲಿ ತಂದವರು. ತೆಳುವಾದ ಶರೀರ, ಒಳ್ಳೆಯ ಎತ್ತರವನ್ನು ಹೊಂದಿದ ಅವರು ಬಿಳಿಯ ಬಣ್ಣದ ಜುಬ್ಬಾ, ಧೋತರವನ್ನು ಧರಿಸುತ್ತಿದ್ದರು. ಅಲ್ಲದೇ ಕರಿಯ ಕೋಟು ಮತ್ತು ಟೊಪ್ಪಿಗೆಯು ಅವರ ಬಾಹ್ಯದಿಂದ ಕಾಣಸಿಗುವ ವ್ಯಕ್ತಿತ್ವವಾಗಿತ್ತು. ಅವರು ಎಂದಿಗೂ ಆಡಂಬರ, ತೋರಿಕೆ ಮಾಡಿದವರಲ್ಲ. ಹೀಗೆ ಸಂಗೀತವಾಯಿತು ತಾವಾಯಿತು ಎಂಬಂತೆ ಬದುಕಿದ ಪಂ.ಪಂಚಾಕ್ಷರಿ ಮತ್ತಿಗಟ್ಟಿಯವರು ಇಪ್ಪತ್ತು ವರ್ಷದವರಿದ್ದಾಗ ಶಾಂತಮ್ಮನವರನ್ನು ಮದುವೆಯಾದರು. ಶಾಂತಮ್ಮ ನವರು ಸಂಸಾರದ ನೊಗಹೊತ್ತು ಪತಿಯ ಯಶಸ್ಸಿನ ಪ್ರತಿ ಹೆಜ್ಜೆಯಲ್ಲೂ ತಮ್ಮ ಸಹಕಾರ ನೀಡಿದರು. ಅವರಿಗೆ ಮೂವರು ಮಕ್ಕಳು. ಬಸವರಾಜ, ಗಿರಿಜಮ್ಮ, ಮಲ್ಲಮ್ಮ, ಅವರ ಮಗ ಬಸವರಾಜ, ಖನಿಜ ಸಂಸ್ಕರಣಾ ಶಾಸ್ತ್ರದಲ್ಲಿ ಸಂಶೋಧನೆ ಮಾಡಿ ವಿದೇಶದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 

ಪಂ.ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರ ಸಾಧನೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅವರನ್ನರಸಿಕೊಂಡು ಬಂದಿವೆ. 1988ರಲ್ಲಿ ದಾವಣಗೆರೆಯ ಸವಿತಾ ಸಮಾಜ ಹಾಗೂ ಸಂಗೀತ ಬಳಗದ ಸಂಗೀತ ಗಾನ ಪ್ರವೀಣ ಹಾಗೂ ಕನರ್ಾಟಕ ಸಂಗೀತ ನೃತ್ಯ ಅಕಾಢೆಮಿಯ ಕರ್ನಾಟಕ ತಿಲಕ, 1991ರಲ್ಲಿ ಗದಗ-ಬೆಟಗೇರಿ ರೋಟರಿ ಸಂಸ್ಥೆಯ ಗಾನ ರತ್ನಾಕರ ಹಾಗೂ ರಾಯಚೂರಿನ ಇಂಚರ ಸಂಗೀತ ಸಮ್ಮೇಳನದಲ್ಲಿ ಗೌರವ ಪುರಸ್ಕಾರ,  1992ರಲ್ಲಿ ಗಿರಿಯಾಪುರದಲ್ಲಿ ಸನ್ಮಾನ, 1993ರಲ್ಲಿ ಹೊಸರಿತ್ತಿಯ ಶ್ರೀ ಗುದ್ಧಲೀಶ್ವರ ಸ್ವಾಮಿ ಮಠದ ಗಾನ ಗಂಧರ್ವ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಸಭೆಯಿಂದ ಗಾನ ತಪಸ್ವಿ, 1994ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 1999ರಲ್ಲಿ ರಾಯಚೂರ ಇಂಚರ ಸಂಗೀತ ಸಮಿತಿಯ ಸಂಗೀತ ಕಲಾನಿಧಿ, 2002ರಲ್ಲಿ ಪಂ.ಪುಟ್ಟರಾಜ ಸಮ್ಮಾನ, 2003ರಲ್ಲಿ ಕರ್ನಾಟಕ ಸರಕಾರದಿಂದ ಕನಕ ಪುರಂದರ ಪ್ರಶಸ್ತಿ, 2012ರಲ್ಲಿ ಬೆಂಗಳೂರ ದೂರದರ್ಶನದಿಂದ ಚಂದನಶ್ರೀ ಪ್ರಶಸ್ತಿ, ವಚನ ಸಂಗೀತಕ್ಕೆ ಕೊಡಮಾಡುವ ರಮಣಶ್ರೀ, ಲಯಬ್ರಹ್ಮ, ನಾದ ಗಂಧರ್ವ, ಗಾನ ಸುಧಾಕರ ಹೀಗೆ ಇನ್ನೂ ಹಲವಾರು ಪ್ರಶಸ್ತಿ-ಪುರಸ್ಕಾರಗಳು, ಸನ್ಮಾನಗಳು ಅವರ ಸಾಧನೆಗೆ ಸಂದಿವೆ. 

ಪಂ.ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರು ತಮ್ಮ 80ನೇ ವಯಸ್ಸಿನಲ್ಲಿ ಜೈಪುರ ಅತ್ರೌಲಿ ಘರಾಣೆಯ ಮೂಲಪುರುಷ ಅಲ್ಲಾದಿಯಾಖಾನರ ಮೊಮ್ಮಗ ಅಜೀಜುದ್ದೀನಖಾನ ಅವರ ಹತ್ತಿರ ಗಂಡಾ ಕಟ್ಟಿಸಿಕೊಂಡು, ಸಂಗೀತ ಕಲಿಯುವುದರಲ್ಲಿ ನಿರತರಾದದ್ದು, ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಸ್ವರ ಸಾಮ್ರಾಟ ಪಂ.ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿಯವರು 2013ರಲ್ಲಿ ಅಕ್ಟೋಬರ್ 5ರಂದು ನಾದಲೋಕದಲ್ಲಿ ಲೀನರಾದರು.  ಸರಳವಾದ ಬದುಕು, ಶ್ರದ್ಧೆಯ ಚಿಂತನೆಗಳಿಂದ ಪಂ.ಪಂಚಾಕ್ಷರಿಸ್ವಾಮಿಯವರು ಬಾಳಿನ ಸಂಜೆಯಲ್ಲೂ ಕ್ರಿಯಾಶೀಲರು. ಸಂಗೀತ ಸೇವಕರಾದ ಅವರು ಬದುಕಿನ ಘನತೆಯನ್ನು ಹೆಚ್ಚಿಸಿದವರು.

-ಸುರೇಶ ಗುದಗನವರ

ಧಾರವಾಡ  

ಸುದ್ದಿ ಓದಿ