ಸಿಂದಗಿ 371(ಜೆ) ಧರಣಿಗೆ ಮಠಾಧೀಶರು, ವಿವಿಧ ಸಂಘಟನೆಗಳ ಬೆಂಬಲ
ಲೋಕದರ್ಶನ ವರದಿ
ಸಿಂದಗಿ 16 : ವಿಜಯಪುರ ಜಿಲ್ಲೆಗೂ ಸಂವಿಧಾನದ 371(ಜೆ) ವಿಶೇಷ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಿಂದಗಿ ನಗರದ ಬಸವೇಶ್ವರ ವೃತ್ತದ ಬಳಿ ಕಳೆದ 13 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಅಬು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆ ಬೆಂಬಲ ಸೂಚಿಸಿದರು.
ಧರಣಿ ಸ್ಥಳಕ್ಕೆ ಮಠಾಧೀಶರು, ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೇಟಿ ನೀಡಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು.
ಅಬು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಎಂ.ಎ. ಖತೀಬ ಮಾತನಾಡಿ, ವಿಜಯಪುರ ಜಿಲ್ಲೆಯನ್ನು 371(ಜೆ) ಸೌಲಭ್ಯದ ವ್ಯಾಪ್ತಿಗೆ ಸೇರಿಸಬೇಕೆಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಈ ವಿಷಯದಲ್ಲಿ ಆಸಕ್ತಿ ವಹಿಸಿ, ಅಗತ್ಯ ದಾಖಲೆಗಳೊಂದಿಗೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ಈ ಸೌಲಭ್ಯ ದೊರೆತರೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಹಿಂದುಳಿದ ಭಾಗದ ಅರ್ಹ ಯುವಜನರಿಗೆ ಅನುಕೂಲವಾಗುವ ನೀರೀಕ್ಷೆಯಿದೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಜನರ ಭವಿಷ್ಯದ ದೃಷ್ಟಿಯಿಂದ ಈ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಹೋರಾಟದ ರೂವಾರಿ ರಂಗನಾಥ ತೋರ್ಫೆ ಮಾತನಾಡಿ, 371(ಜೆ) ಸೌಲಭ್ಯಕ್ಕಾಗಿ ನಡೆಯುತ್ತಿರುವ ಹೋರಾಟವು ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಹಾಗೂ ಯುವಜನರ ಭವಿಷ್ಯಕ್ಕೆ ಸಂಬಂಧಿಸಿದೆ. ಆದ್ದರಿಂದ ಎಲ್ಲ ವರ್ಗದ ಜನರು ಒಗ್ಗಟ್ಟಿನಿಂದ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬೋರಗಿ ಪುರದಾಳ ವಿಶ್ವರಾಧ್ಯಮಠದ ಮಹಾಲಿಂಗೇಶ್ವರ ಸ್ವಾಮಿಗಳು ಹಾಗೂ ಹಿಕ್ಕನಗುತ್ತಿ ಮಹಾಮಠದ ಪ್ರಭುಲಿಂಗ ಶರಣರು ಅವರು ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾರ್ಗದರ್ಶನ ನೀಡಿದರು.
ಸಂಗಣ್ಣ ಬ್ಯಾಕೋಡ, ಪತ್ರಕರ್ತರಾದ ಪಂಡಿತ ಯಂಪೂರೆ, ಅಂಬರೀಶ ಚೌಗಲೆ, ಅಬುಬಕರ ಖತೀಬ, ಸಿದ್ದಲಿಂಗಯ್ಯ ಹಿರೇಮಠ, ವಿಶ್ವನಾಥ ಕಂಬಾರ, ಸಿದ್ದು ಕಡಗಂಚಿ, ಗುರುರಾಜ ಪಡಶೆಟ್ಟಿ, ಮಲ್ಲು ಅಲ್ಲಾಪುರ, ಶಂಕರ ಮಲ್ಲೇದ ಸರ್, ವಿಜಯಪುರದ ಸಾರವಾಡ ಶಿಕ್ಷಕರು ಸೇರಿದಂತೆ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.