ಮುಂದಗೋಡ

ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಬೆಂಬಲ

ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಬೆಂಬಲ


ಲೋಕದರ್ಶನ ವರದಿ 

ಮುಂಡಗೋಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳು ನೀಡಿರುವ ಎರಡು ದಿನಗಳ ಮುಷ್ಕರಕ್ಕೆ ಬೆಂಬಲ ನೀಡಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ಸಂಘಟನೆಯ ತಾಲೂಕಾ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.  

ಉದ್ಯೋಗಖಾತ್ರಿ ಯೋಜನೆಯನ್ನು ಸಮರ​‍್ಕವಾಗಿ ಜಾರಿ ಮಾಡಬೇಕು. ಸರ್ಕಾರ ಉದ್ಯೋಗಖಾತ್ರಿ ಅನುದಾನವನ್ನು ಕಡಿಮೆ ಮಾಡಬಾರದು. ಉದ್ಯೋಗ ಬಯಸುವ ಎಲ್ಲರಿಗೂ ಕೆಲಸ ಕೊಡಬೇಕು. ಮೊದಲಿನಂತೆ ತಮ್ಮ ಕೆಲಸ ಮುಗಿದ ನಂತರ ಮನೆಗೆ ಹಿಂತಿರುಗಲು ಅವಕಾಶ ಇರಬೇಕು. ಜಾತಿ ಆಧಾರದಲ್ಲಿ ವೇತನ ನೀಡುವ ತಾರತಮ್ಯದ ಪದ್ಧತಿಯನ್ನು ಕೈ ಬಿಡಬೇಕು. ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ದಿನಕ್ಕೆ 600ರೂ.ನಂತೆ ಕೂಲಿ ವಿತರಣೆ ಮಾಡಬೇಕು. ವರ್ಷದಲ್ಲಿ ಕನಿಷ್ಠ 200 ದಿನಗಳ ಕೆಲಸ ನೀಡಬೇಕು. ಸಣ್ಣ ರೈತರ ಕೃಷಿ ಕೆಲಸಗಳಿಗೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು. ಕೆಲಸಗಾರರ ಬಾಕಿ ವೇತನವನ್ನು ಕೂಡಲೆ ಸಂದಾಯ ಮಾಡಬೇಕು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಬಿಸಿಯೂಟದ ನೌಕರರನ್ನು ಖಾಯಂಗೊಳಿಸಬೇಕು. ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಬೇಕು. ಬಡ ಕುಟುಂಬಕ್ಕೆ 7500ರೂ. ನೆರವು ನೀಡಬೇಕು. ಬಿಪಿಎಲ್ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬರಿಗೂ 10ಕೆ.ಜಿ. ಆಹಾರ ಧಾನ್ಯ ಉಚಿತವಾಗಿ ನೀಡಬೇಕು. ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ನೀಡುವ ಕಾನೂನು ಜಾರಿಗೆ ಬರಬೇಕು. ಲಾಕ್‌ಡೌನ್ ಸಮಯದಲ್ಲಿ 3000ರೂ. ಪರಿಹಾರ ಕಿಟ್ ದೊರೆಯದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಬೇಕು. ಕಾರ್ಮಿಕ ವಿರೋಧಿ ಸಂಹಿತೆ ಕೈ ಬಿಡಬೇಕು. ನಗರದ ಮಳಗನಕೊಪ್ಪದಲ್ಲಿ ಮಂಜೂರಿಯಾದ ಭೂಮಿಯಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಮನೆ ಕಟ್ಟಿಸಿ ಕೊಡಬೇಕು ಎಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. 

ಇದಕ್ಕೂ ಮುನ್ನ ಪಟ್ಟಣದ ಪರೀವೀಕ್ಷಣಾ ಮಂದಿರದಿಂದ ಮೆರವಣಿಗೆ ಹೊರಟು ಶಿವಾಜಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರ ತಡೆ ನಡೆಸಲಾಯಿತು. 

ಈ ವೇಳೆ ರಾಜಾಧ್ಯಕ್ಷ ನಿತ್ಯಾನಂದ ಸ್ವಾಮಿ, ತಾಲೂಕಾಧ್ಯಕ್ಷ ಭೀಮಣ್ಣ ಭೋವಿ, ಭೂತೇಶ ಚಿತ್ರಗಾರ, ಬಸವರಾಜ ಧಾರವಾಡ, ಹನುಮಂತಪ್ಪ ನ್ಯಾಸರ್ಗಿ, ವಾಣಿ ತೆವರ್, ಪುಂಡಲೀಕ ಹಾಗೂ ಇತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ