ಬೇಸಿಗೆ ಶೇಂಗಾ ಬೆಳೆಯ ಕ್ಷೇತ್ರೋತ್ಸವ: ವಿಚಾರ ಸಂಕಿರಣ
ಮುಂಡಗೋಡ 9: ಕೃಷಿ ವಿಶ್ವ ವಿದ್ಯಾಲಯ ಮತ್ತು ಕೃಷಿ ಇಲಾಖೆಗಳು ಶಿಪಾರಸು ಮಾಡಿದ ನಿರೋಧಕ ಶಕ್ತಿಯುಳ್ಳ ಒಳ್ಳೆಯ ಗುಣಮಟ್ಟ ಬೀಜಗಳನ್ನು ಬಿತ್ತನೆ ಮಾಡಬೇಕು. ಶೇಂಗಾ ಕಟಾವಿನ ನಂತರ ಸಂಸ್ಕರಣೆ ಮಾಡಿ ಒಣಗಿಸಿದ ನಂತರ ಮಾರಾಟ ಮಾಡಿದರೆ ಅಧಿಕ ಲಾಭ ಗಳಿಸಬಹುದು. ಒಂದು ವೇಳೆ ಮಾರುಕಟ್ಟೆಯಲ್ಲಿ ದರ ಕಡಿಮೆ ಇದ್ದರೆ ರೈತರು ಸಂಘಟನೆ ಮಾಡಿಕೊಂಡು ಸ್ವ-ಸಹಾಯ ಸಂಘಗಳನ್ನು ರಚಿಸಿ ಎಣ್ಣೆ ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ಪೂರೈಸಿದರೆ ಅಥವಾ ನೇರವಾಗಿ ಗ್ರಾಹಕರಿಗೆ ಪೂರೈಸಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಧಾರವಾಡ ಕೃಷಿ ವಿದ್ಯಾಲಯದ ನಿವೃತ್ತ ಸಂಶೋಧನ ನಿರ್ದೇಶಕ ಡಾ. ಎಚ್.ಎಲ್ ನಾಧಾಫ್ ಹೇಳಿದರು.
ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಶಿಣಗೇರಿ ಗ್ರಾಮದಲ್ಲಿ 2020-21 ನೇ ಸಾಲಿನ ಆತ್ಮಾಯೋಜನೆಯಡಿಯಲ್ಲಿ ಕೃಷಿ ಇಲಾಖೆ ಮುಂಡಗೋಡ ಹಾಗೂ ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಬೇಸಿಗೆ ಶೇಂಗಾ ಬೆಳೆಯ ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಿ,ಎಚ್-256 ಶೇಂಗಾ ತಳಿಯ ಬೀಜದ ವಿಶೇಷತೆಯನ್ನು ಹಾಗೂ ಇತರೆ ಬೀಜದ ಗುಣಗಳ ಬಗ್ಗೆ ಇಳುವರಿ ಪ್ರಮಾಣ ಎಣ್ಣೆ ಅಂಶದ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ರೈತರಿಗೆ ನೀಡಿದರು.
ಶೇಂಗಾ ಬೆಳೆಗಾರ ಅಬ್ದುಲ ರೆಹಮಾನ್ ಯರಿಮನಿ ಕಾರ್ಯಕ್ರಮದ ಉದ್ಘಾಟಿಸಿದರು. ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್ ಕುಲಕರ್ಣಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಧಾರವಾಡ ವಿಶ್ವ ವಿದ್ಯಾಲಯದ ಡಾ. ಬಿ,ಎನ್ ಮೊಟಗಿ ಅಧಿಕ ಇಳುವರಿ ಕೊಡುವ ಶೇಂಗಾ ಬೆಳೆಯ ತಳಿಗಳ ಹಾಗೂ ಆಧುನಿಕ ಬೇಸಾಯ ಪದ್ದತಿ ಕುರಿತು ಸಮಗ್ರ ಮಾಹಿತಿ ನೀಡಿದರು. ಹಾಗೆಯೆ ರೈತರು ಕೈಗೊಳ್ಳಬೇಕಾದ ಬೀಜ ಗ್ರಾಮದ ಬಗ್ಗೆ ಮಾಹಿತಿಯನ್ನು ನೀಡಿದರು.
ಡಾ. ಬಸವರಾಜ ಏಣಗಿ, ಶೇಂಗಾ ಬೆಳೆಗಳಲ್ಲಿ ಕಳೆನಾಶಕಗಳ ಬಳಕೆ, ಬೀಜ ಹಾಗೂ ಗೊಬ್ಬರ ಏಕಕಾಲಕ್ಕೆ ಬಿತ್ತುವ ಸಂಯುಕ್ತಕೂರಿಗೆ ಅಳವಡಿಸಲು ರೈತರಿಗೆ ಸಲಹೆ ಹಾಗೂ ಶೇಂಗಾ ಬೆಳೆಗಳ ಕಟಾವಿನ ಯಂತ್ರೋಪಕರಣಗಳ ಕುರಿತು ಮಾಹಿತಿಯನ್ನು ನೀಡಿದರು.
ಡಾ.ರೋಹಿನಿ ಸುಗಂಧಿ, ಶೇಂಗಾ ಬೆಳೆಯಲ್ಲಿ ಬರುವ ಪ್ರಮುಖ ಕೀಟಗಳ ಹಾಗೂ ನಿಯಂತ್ರಣ ಕುರಿತು ಸಮಗ್ರ ಮಾಹಿತಿ ನೀಡಿದರು.
ಶಿರಸಿ ಉಪ ಕೃಷಿ ನಿರ್ದೇಶಕ ನಟರಾಜ ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆ ರೂಪದಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳ ಬಗ್ಗೆ ಹಾಗೂ ಇಲಾಖೆಯ ಯೋಜನೆಗಳು ಮತ್ತು ಸೌಲಭ್ಯಗಳ ¨ಗ್ಗೆ ಮಾಹಿತಿಯನ್ನು ನೀಡಿದರು.
ಆತ್ಮಾ ಯೋಜನೆ ತಾಲೂಕಾ ತಾಂತ್ರಿಕ ವ್ಯವಸ್ಥಾಪಕ ಕೆ.ಬಿ ಬಜಂತ್ರಿ ಸ್ವಾಗತಿಸಿ ನಿರೂಪಿಸಿದರು. ಕೃಷಿ ಅಧಿಕಾರಿ ನಿಂಗನಗೌಡ ಹಿರೇಗೌಡರ ಕೃಷಿ ಅಧಿಕಾರಿ ವಂದಿಸಿದರು. ಗ್ರಾ.ಪಂ ಸದಸ್ಯ ವಿಜಯ ಲಮಾಣಿ, ಈರಣಗೌಡ ಪಾಟೀಲ್ ಹಾಗೂ ಪ್ರಗತಿ ಪರರೈತರು ಉಪಸ್ಥಿತರಿದ್ದರು.