ಬಿಸಿಲಿನ ಬೇಗೆ: ತಂಪು ಪಾನೀಯಕ್ಕೆ ಹೆಚ್ಚಿದ ಬೇಡಿಕೆ
ಮಾಂಜರಿ 26: ಗ್ರಾಮೀಣ ಭಾಗದ, ಮಾಂಜರಿ, ಅಂಕಲಿ, ಯಕ್ಸಂಬಾ ಯಡೂರ, ಸದಲಗಾ, ಬೇಡಕಿಹಾಳ, ಬೋರಗಾಂವ ಮುಂತಾದ ಗ್ರಾಮಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ಝಳದಿಂದ ಜನರು ಬಸವಳಿಯುವಂತಾಗಿದೆ. ಬೆಳಗಿನಿಂದಲೆ ಬಿಸಿಲಿನ ಕಾಟ ಶುರುವಾದರೆ, ಮದ್ಯಾಹ್ನದ ಹೊತ್ತಿಗೆ ನೆಲವು ಕೂಡಕಾಯ್ದ ಬಾಣಲೆಯಂತಾಗುತ್ತದೆ. ಮದ್ಯಾಹ್ನ ಮನೆಯಿಂದ ಹೊರಗೆ ಹೋಗುವುದೇ ಬೇಡ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಡು ಬಿಸಿಲಿನಿಂದ ಉಂಟಾದ ಬಾಯಾರಿಕೆಯನ್ನು ನಿವಾರಿಸಿಕೊಳ್ಳಲು ಜನರು ಹಣ್ಣಿನರಸ ಮತ್ತುತಂಪು ಪಾನೀಯ ಕುಡಿಯಲು ತವಕಿಸುತ್ತಿದ್ದಾರೆ. ಸಂತೆಗೆ ಖರೀದಿಗಾಗಿ ಬಂದ ಜನ ಕಬ್ಬಿನ ರಸ, ನಿಂಬು ಸೋಡಾ, ಮೋಸಂಬಿ, ಕಿತ್ತಳೆ, ಕೋಕಮ ಜ್ಯೂಸ್ ಕುಡಿದು ಚೇತರಿಸಿಕೊಳ್ಳುತ್ತಿದ್ದಾರೆ. ಗಿಡದ ನೆರಳಿಗೆ ನಿಂತು ಎಳನೀರು ಕುಡಿದು ಚೈತನ್ಯ ಪಡೆಯುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ತಾಪಮಾನವು ಎರುತ್ತಿದೆ. ಗಡಿ ಗ್ರಾಮಗಳಲ್ಲಿ ಮಾರ್ಚ ಕೊನೆಯವಾರ 33.1 ಡಿಗ್ರಿ ಸೆಲ್ಸಿಯಸ್ ದಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾತ್ರಿಯವರೆಗೂ ಬಿಸಿಲಿನ ಝಳ ಇರುವುದರಿಂದ ರಾತ್ರಿ ನಿದ್ದೆ ಮಾಡಲಾಗದೇ ಚಡಪಡಿಸುವಂತಾಗಿದೆ.
ಕಳೆದ ಒಂದು ವಾರದಿಂದ ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಗ್ರಾಮಗಳಲ್ಲಿ ತಂಪು ಪಾನೀಯಗಳ ಬೇಡಿಕೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಬಸ್ ನಿಲ್ದಾಣ ಪ್ರಮುಖ ಬೀದಿಗಳು ಸೇರಿದಂತೆ ಹಲವು ಕಡೆ ಅಂತರ್ರಾಜ್ಯ ರಸ್ತೆ ಸೇರಿದಂತೆ ಇನ್ನುಳಿದ ಜಾಗಗಳಲ್ಲಿ ರಸವಂತಿ ಗೃಹಗಳು ಕಾಣಿಸಿಕೊಳ್ಳತೊಡಗಿವೆ. ಒಂದು ಗ್ಲಾಸಿಗೆ 15 ರೂ. ಮತ್ತು ಹಾಫ್ ಗ್ಲಾಸಿಗೆ 10 ರೂ. ಮಾರಾಟವಾಗುತ್ತಿದೆ.