ಬಳ್ಳಾರಿ

ಗಮನಸೆಳೆದ ಸುಗ್ಗಿ ಹುಗ್ಗಿ ಜಾನಪದ ಸಂಭ್ರಮ

ಗಮನಸೆಳೆದ ಸುಗ್ಗಿ ಹುಗ್ಗಿ ಜಾನಪದ ಸಂಭ್ರಮ

ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲಿಸುವ ಕೆಲಸವಾಗಲಿ

ಬಳ್ಳಾರಿ 31: ರೈತ ಇಲ್ಲದಿದ್ದರೆ ಜಗತ್ತೇ ಇಲ್ಲ. ರೈತನ ಕಷ್ಟ ದ ಪ್ರತಿಫಲದಿಂದಾಗಿ ಇಂದು ಸಮಾಜದ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ ರೈತರ ಇಂದು ಅತೀ ಕಷ್ಟದ ದಿನಗಳನ್ನು ಅನುಭವಿಸುತ್ತಿದ್ದಾರೆ.ಮಳೆಯ ಪ್ರಭಾವ ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ;ನೊಂದ ರೈತರ ಪರವಾಗಿ ಸರ್ಕಾರ ಕೈಜೋಡಿಸುವ ಮೂಲಕ ರೈತರ ನೆರವಿಗೆ ನಿಲ್ಲುವ ಕೆಲಸವಾಗಬೇಕು ಎಂದು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಅವರು ತಿಳಿಸಿದರು. .

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಪಂ ಆವರಣದಲ್ಲಿ ನಡೆದ  ಸುಗ್ಗಿ ಹುಗ್ಗಿ ಜಾನಪದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ರೈತರಿಂದಲೇ ನಾವು ಬದುಕುತ್ತಿದ್ದೇವೆ;ಆದರೆ ನಮಗೆ ಬದುಕು ನೀಡುತ್ತಿರುವ ರೈತರು ಸರಿಯಾದ ಜೀವನ ಸಾಗಿಸಲು ಆಗುತ್ತಿಲ್ಲ,ಹವಾಮಾನ ವೈಪರೀತ್ಯಗಳಿಂದ ಬೆಳೆ ಸರಿಯಾಗಿ ಬೆಳೆಯುತ್ತಿಲ್ಲ. ಅರೆ ಬರೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತ ನಲುಗಿ ಹೋಗಿದ್ದಾನೆ. ರೈತನಿಗೆ ನೆರವು ನೀಡುವ ಕೆಲಸ ಸರ್ಕಾರದಿಂದ ನಡೆಯಲಿ, ಕೃಷಿ ಇಲಾಖೆಯು ರೈತರ ಅಭಿವೃದ್ಧಿಗಾಗಿ ಹಲವಾರು ಕಾರ್ಯಗಳನ್ನು ಕೈಗೊಳ್ಳಲಿ ಎಂದರು

ಗ್ರಾಮೀಣ ಭಾಗದ ಅಭಿವೃದ್ದಿಗೆ ಜಿಪಂ ಅಧಿಕಾರಿಗಳು ಸಹಕರಿಸುವ ಮೂಲಕ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕು;ಈ ಮೂಲಕ ಅಲ್ಲಿನ ಜನರ ಏಳಿಗೆಗೆ ಸಹಕರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಅವರು ತಿಳಿಸಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕರು ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ ಅವರು ಮಾತನಾಡಿ, ವಿಜಯನಗರ ರಾಜರ ಕಾಲದಿಂದಲೂ ನಮ್ಮ ಜಿಲ್ಲೆ ಇಡೀ ದೇಶದಲ್ಲಿ ತನ್ನದೇ ಆದ ಪ್ರಾಶಸ್ತ್ಯವನ್ನು ಪಡೆದಿದೆ. ನಮ್ಮ ಜಿಲ್ಲೆ ಶ್ರೀಮಂತ ಕಲೆ ಇಂದಿಗೂ ಜೀವಂತವಾಗಿದೆ. 

ಬೆಳಗಲ್ಲು ವೀರಣ್ಣ, ಪದ್ಮಶ್ರೀ ಮಂಜಮ್ಮ ಜೋಗತಿ ಮುಂತಾದ ಕಲಾವಿದರು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ. ನಮ್ಮ  ಸಂಸ್ಕೃತಿಯ  ಮೂಲ ಜಾನಪದ ಸಾಹಿತ್ಯ,  ಇಡೀ ಪ್ರಪಂಚಕ್ಕೆ ಸಾಹಿತ್ಯದ ಮೆರುಗನ್ನು ನೀಡಿದ್ದು ಜಾನಪದ ಕಲೆಗಳು. ಪ್ರಸ್ತುತ ಆಧುನಿಕ ಯುಗದಲ್ಲಿ ಅನೇಕ ವಿದ್ಯಮಾನಗಳ ನಡುವೆ ಜಾನಪದ ಕಲೆಗಳು ಮತ್ತೆ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಿರುವುದು ತುಂಬಾ ವಿಶೇಷ ಎಂದರು.

ಜಾನಪದ ಕಲೆ ಸಂಸ್ಕ್ರತಿಯ ಜೀವಾಳ,ಜಾನಪದ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಜಾನಪದ ಕಲೆಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು. ಆದರೆ ಜಾನಪದ ಕಲಾವಿದರ ಜೀವನ ಇಂದು ಬದಲಾಗಿದೆ.ಕೊವಿಡ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ನಶಿಸಿ ಹೋಗುವ ಕಲೆಗಳನ್ನು ಉಳಿಸಿಕೊಂಡು ಹೋಗುವ ಕೆಲಸವನ್ನು ಕನ್ನಡ ಮತ್ತು ಸಂಸ್ಕತಿ ಇಲಾಖೆ  ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಸ್ತುವಾರಿ ಮತ್ತು ಮೌಲ್ಯ ಮಾಪನದ ಸಹಾಯಕ ನಿರ್ದೇಶಕ ಎಸ್.ಶಾಂತಲಾ, ಜಿಪಂ ಉಪ ಕಾರ್ಯದರ್ಶಿಗಳಾದ ಶರಣಬಸಪ್ಪ ಅವರು ಮಾತನಾಡಿದರು.

ಜಿಪಂ ಅಧಿಕಾರಿಗಳಾದ ಹಿರೇಮಠ,ಚಿತ್ರಕಲಾವಿದರಾದ ಮಂಜುನಾಥ್ ಗೋವಿಂದ ವಾಡ್,ನೃತ್ಯ ಪಟುಗಳು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಜಿಲಾನಿ ಬಾಷೆ ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ಕೆ.ರಂಗಣ್ಣನವರು ಹಾಗೂ ಇತರರು ಇದ್ದರು.

ನಂತರ ಜಾನಪದ ಸಂಭ್ರಮ ಬಿಂಬಿಸುವ ವಿವಿಧ ಪ್ರದರ್ಶನಗಳು ನಡೆದವು.

ಸುದ್ದಿ ಓದಿ