ಬಳ್ಳಾರಿ

ಹಾಲುಮತ ಅಧ್ಯಯನವು ಸಮುದಾಯಕ್ಕೆ ಸೀಮಿತವಾಗಬಾರದು: ಡಾ. ಸುಬ್ಬಣ್ಣ

ಹಾಲುಮತ ಅಧ್ಯಯನವು ಸಮುದಾಯಕ್ಕೆ ಸೀಮಿತವಾಗಬಾರದು: ಡಾ. ಸುಬ್ಬಣ್ಣ

ಬಳ್ಳಾರಿ 20: ಯಾವುದೇ ಅಧ್ಯಯನವು ಒಂದು ಸಮುದಾಯಕ್ಕೆ ಸಮೀತವಾಗದೆ, ಮುಕ್ತವಾಗಿ ಎಲ್ಲ ಸಮುದಾಯಗಳಿಗೂ ತಲುಪುತ್ತಿರಬೇಕು. ಇಂಥ ವಿಚಾರ ಸಂಕಿರಣಗಳಿಂದ ಹಾಲುಮತದ ಸಂಸ್ಕೃತಿ, ಸಾಹಿತ್ಯ, ಜೀವನ, ಕಲೆಯ ಉಳುವಿಗೆ ಪೂರಕವಾಗಿ ಸಂಶೋಧನೆ ನಡೆಸಲು ಮುನ್ನುಡಿ ಬರೆದಂತಾಗಿದೆ. ಮೊದಲು ನಮ್ಮ ಸಂಸ್ಕೃತಿಯನ್ನು ಬೇರೆಯವರು ಅಧ್ಯಯನ ಮಾಡುತ್ತಿದ್ದರು. ಆದರೆ ಇಂದು ನಾವು ನಮ್ಮ ದೇಸಿಯ ಸಾಂಸ್ಕೃತಿಕ ಸಂಪತ್ತನ್ನು ಅಧ್ಯಯನ ಪೀಠಗಳ ಮುಖೇನ ಹೆಚ್ಚು ಹೆಚ್ಚು ಸಂಶೋಧನೆ ಕೈಗೊಂಡಾಗ ಜಗತ್ತಿಗೆ ಜಾನಪದ ಸಾಹಿತ್ಯ ಸಂಪತ್ತು ದೊರೆಯುವುದರಲ್ಲಿ ಎರಡು ಮಾತಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಾಲುಮತ ಅಧ್ಯಯನ ಪೀಠದ ಅಡಿಯಲ್ಲಿ ಹಾಲುಮತ ಸಂಸ್ಕೃತಿ ಸಮ್ಮೇಳನ-8ದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕನ್ನಡ ವಿಶ್ವವಿದ್ಯಾಲಯವು ಹಾಲುಮತ ಸಂಸ್ಕೃತಿ ಅಧ್ಯಯನ ಪೀಠದ ಮೂಲಕ ಹಾಲುಮತದ ಸಂಸ್ಕೃತಿ ಸಾಹಿತ್ಯವನ್ನು ಅವರ ಜನ ಜೀವನವನ್ನು ನಾಡಿಗೆ ಪರಿಚಯಿಸಲು ಈ ತರದ ಸಮ್ಮೇಳನಗಳನ್ನು, ವಿಚಾರ ಗೋಷ್ಠಿಗಳನ್ನು, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ತಿಳಿಸಿದರು. 

ಇನ್ನು ಹಾಲುಮತ ಸಂಸ್ಕೃತಿ ಸಮ್ಮೇಳನ-8ರ ಸಮಾರೋಪ ಭಾಷಣ ಮಾಡಿದ ವಿಶ್ರಾಂತ ಪ್ರಾಚಾರ್ಯರಾದ ಡಾ.ಬಿ.ಬಿ.ಪಾಟೀಲ ಅವರು ಮಾತನಾಡುತ್ತಾ ಕಹಳೆ, ನಗಾರಿಯಂತಹ ಅಷ್ಟ ವಾದ್ಯಗಳಲ್ಲಿ ಡೊಳ್ಳು ಒಂದು ಪ್ರಮುಖ ವಾದ್ಯವಾಗಿದ್ದು, ಇದನ್ನು ಸಾಂಪ್ರದಾಯಿಕವಾಗಿ ನೋಡದೇ ಒಂದು ದೇಸಿಯ ಕಲೆಯಾಗಿ ನೋಡಬೇಕು. ಬದಲಾದ ಕಾಲಮಾನದಲ್ಲಿ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತವು ಹೇಗೆ ಬದಲಾಗಿದೆ. ಆದರೆ ಡೊಳ್ಳು ಕುಣಿತದಂತಹ ದೇಸಿ ಕಲೆ ತನ್ನ ದೇಸಿಯತೆಯನ್ನು ಇನ್ನೂ ಉಳಿಸಿಕೊಂಡಿರುವುದು ಖುಷಿಯ ವಿಚಾರ. ಹಾಗೆಯೇ ಇಂಥಹ ದೇಸಿ ಕಲೆಗಳ ಅಧ್ಯಯನಕ್ಕೆ ನಾಡಿನ ಎಲ್ಲ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳು ಮುಕ್ತವಾಗಿ ಅಭ್ಯಸಿಸಲು ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಪ್ರಾರಂಭಿಸಿದರೆ ಹಾಲುಮತದ ಸಂಸ್ಕೃತಿಯ ಸಂಶೋಧನೆ ಹಾಗೂ ಉಳುವಿಗೆ ಶ್ರಮಿಸಿದಂತಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.    

ಸಮಾರೋಪ ಸಮಾರಂಭವನ್ನು ಡಾ.ಶಿವಪ್ಪ ಅವರು ನಿರೂಪಿಸಿದರು. ಕಾರ್ಯಕ್ರಮವನ್ನು ಸಂಶೋಧನಾ ವಿದ್ಯಾರ್ಥಿಯಾದ ನಾಗರಾಜ ಅವರು ವಂದಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಸಿದ್ಧಣ್ಣ ಎಫ್.ಜಕಬಾಳ, ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ.ಎಫ್.ಟಿ.ಹಳ್ಳಿಕೇರಿ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಧಿತರಿದ್ದರು.

ಸುದ್ದಿ ಓದಿ