ಮಣ್ಣಿನ ಗಣೇಶ ತಯಾರಿಕೆ ವೀಕ್ಷಿಸಿದ ವಿದ್ಯಾರ್ಥಿಗಳು
ದೇವರಹಿಪ್ಪರಗಿ 29: ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ದೃಶ್ಯಬಿಂಬ ಕಲಾ ಪ್ರತಿಷ್ಠಾನ ಹಾಗೂ ಬಸವ ಹಸಿರು ಬಳಗದ ವತಿಯಿಂದ ಯಾಳವಾರದಲ್ಲಿ ಆಯೋಜಿಸಿರುವ ಅಮೃತ ಹಸ್ತದ ಮಣ್ಣಿನ ಗಣೇಶ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶಿಬಿರದ ಆರನೇ ದಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭೇಟಿ ನೀಡಿ ಕಲಾವಿದರು ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ಆಸಕ್ತಿಯಿಂದ ವೀಕ್ಷಿಸಿದರು. ಮಣ್ಣಿನ ಸಿದ್ಧತೆ, ಮೂರ್ತಿ ರಚನೆ, ಮುಖಭಾವ ಹಾಗೂ ಸೂಕ್ಷ್ಮ ಕೆತ್ತನೆಯ ಕುರಿತು ಕಲಾವಿದರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ತಯಾರಾಗುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ವಿಜಯಪುರ ಜಿಲ್ಲೆಯ 120 ಹಳ್ಳಿಗಳಿಗೆ ಉಚಿತವಾಗಿ ವಿತರಿಸುವ ಉದ್ದೇಶವಿದೆ ಎಂದು ಬಸವ ಹಸಿರು ಬಳಗದ ಅಧ್ಯಕ್ಷ ಭೀಮನಗೌಡ ಗುಣಕನಾಳ ತಿಳಿಸಿದರು.