ಜಮಖಂಡಿ

ವಿದ್ಯಾರ್ಥಿಗಳು ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು:

ವಿದ್ಯಾರ್ಥಿಗಳು  ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು:

ಲೋಕದರ್ಶನ ವರದಿ,

ಜಮಖಂಡಿ: 9: ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ಸಾಮಥ್ರ್ಯವನ್ನು ಪಡೆಯಬೇಕು. ಮನೆ ಗೆದ್ದು ಮಾರು ಗೆಲ್ಲುವ ಮೂಲಕ ದೇಶಕ್ಕೆ ಬೇಕಾಗುವ ವ್ಯಕ್ತಿಗಳಾಗಿ ರೂಪಗೊಳ್ಳಬೇಕು ಎಂದು ಶಾಸಕ, ಜಗದೀಶ ಗುಡಗುಂಟಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ 2023-24ನೇ ಶೈಕ್ಷಣಿಕ ವರ್ಷದ ಪಿಯುಸಿ ತರಗತಿಗಳ ಪ್ರಾರಂಭೋತ್ಸವಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸ್ಥಿತಪ್ರಜ್ಞೆ, ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ನಿರ್ಣಯ ಕೈಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಇಂದಿನ ಸ್ಪರ್ಧಾತ್ಮಕ ದಿನಮಾನಗಳಲ್ಲಿ ಬದುಕಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.

ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಓದಿದ ಜ್ಞಾನವನ್ನು ಮನನ ಮಾಡಿಕೊಳ್ಳಬೇಕು. ಮನನವಾದ ಜ್ಞಾನವನ್ನು ರಕ್ತಗತವಾದ ಮಾಡಿಕೊಂಡು ಜೀವನದಲ್ಲಿ ಬಳಸಿಕೊಂಡರೆ ಭವಿಷ್ಯದಲ್ಲಿ ಜೀವನ ಉಜ್ವಲವಾಗುತ್ತದೆ ಎಂದು ಆಶೀರ್ವಚನ ನೀಡಿದರು.

ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನ ಬದಲಿಸಿಕೊಳ್ಳಲು ಎಲ್ಲರಿಗೂ ಸಮಯ ಸಿಗುತ್ತದೆ. ಆದರೆ, ಸಮಯ ಬದಲಿಸಲು ಮತ್ತೊಂದು ಜೀವನ ಸಿಗದು ಎಂಬ ಜಾಗೃತೆ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದರು.

ಸಂಸ್ಥೆಯ ಕಾರ್ಯದರ್ಶಿ ಶಕುಂತಲಾ ಕಡ್ಡಿ ಇದ್ದರು. ಸುಧಾ ಮಠಪತಿ ಪ್ರಾರ್ಥನೆ ಗೀತೆ ಹಾಡಿದರು. ಸಂಸ್ಥೆಯ ಅಧ್ಯಕ್ಷ ಡಾ.ಗಿರೀಶ ಕಡ್ಡಿ ಸ್ವಾಗತಿಸಿದರು. ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಹಾದೇವ ಕುಂಬಾರ ಭಿನ್ನವತ್ತಳೆ ಓದಿದರು. ಮೌನೇಶ ಬಡಿಗೇರ ನಿರೂಪಿಸಿದರು. ಪಿ.ಎನ್. ವಜ್ರಮಟ್ಟಿ ವಂದಿಸಿದರು.



ಸುದ್ದಿ ಓದಿ