ವಿದ್ಯಾರ್ಥಿಗಳ ಗ್ರಾಮ ವಾಸ್ತವ್ಯ- ಅಧ್ಯಯನ ಶಿಬಿರದ ಸಮಾರೋಪ
ಲೋಕದರ್ಶನ ವರದಿ
ಮುಂಡರಗಿ 09: ಗ್ರಾಮೀಣ ಭಾಗದಲ್ಲಿನ ಕೃಷಿ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಅಲ್ಲಿನ ಜನ ಜೀವನದ ಕುರಿತು ವಿಶ್ವವಿದ್ಯಾಲಯ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ದೇಶದ ಏಕೈಕ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ವಿಶ್ವ ವಿದ್ಯಾಲಯ ನಮ್ಮ ಗದಗ ಜಿಲ್ಲೆಯಲ್ಲಿರುವುದು ನಮಗೆಲ್ಲ ಹೆಮ್ಮೆಯಾಗಿದೆ ಎಂದು ಸಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.
ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ವಿಶ್ವ ವಿದ್ಯಾಲಯ ಗದಗ, ಗ್ರಾಮ ಪಂಚಾಯತ ಸಿಂಗಟಾಲೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಎಂ.ಬಿ.ಎ.ವಿದ್ಯಾರ್ಥಿಗಳಿಂದ ಜರುಗಿದ ಗ್ರಾಮ ವಾಸ್ತವ್ಯ ಹಾಗೂ ಅಧ್ಯಯನ ಶಿಬಿರದ ಸಮಾರಂಭ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕಳೆದ ಒಂದು ತಿಂಗಳಿನಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಿಂಗಟಾಲೂರು ಹಾಗೂ ಗಂಗಾಪೂರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗ್ರಾಮೀಣ ಭಾಗದ ಅನೇಕ ಜೀವನಾನುಭವ ಪಾಠಗಳನ್ನು ಕಲಿತುಕೊಂಡಿದ್ದಾರೆ. ಇವರಿಗೆ ಗ್ರಾಮಸ್ಥರು ಹಾಗೂ ದೇವಸ್ಥಾನ ಟ್ರಷ್ಟ ಕಮೀಟಿ ಹಾಗೂ ಗ್ರಾಮ ಪಂಚಾಯತಿ ಅನುಕೂಲ ಮಾಡಿಕೊಟ್ಟಿದ್ದು ಶಿಬಿರ ಯಶಸ್ವಿಯಾಗಿ ಜರುಗಲು ಕಾರಣವಾಗಿದೆ. ವಿದ್ಯಾರ್ಥಿಗಳು ಸಹ ಕ್ರಿಯಾಶೀಲವಾಗಿ ತೊಡಗಿಕೊಂಡು ಗ್ರಾಮೀಣ ಬದುಕಿನ ಅನೇಕ ವಿಷಯಗಳನ್ನು ತಿಳಿದುಕೊಂಡರು. ವಿಶ್ವ ವಿದ್ಯಾಲಯ ಈ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಈ ಭಾಗದಲ್ಲಿ ಯುವಕರಿಗೆ ಪರಿಚಯಿಸಿಕೊಳ್ಳಲು ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ವಿದ್ಯಾಲಯದ ಕುಲಪತಿ ಡಾ.ವಿಷ್ಣುಕಾಂತ ಚಟಪಳ್ಳಿ ಮಾತನಾಡಿ, ಗ್ರಾಮೀಣ ಜನರ, ಸಾಮಾನ್ಯರ ಬದುಕು ಕೃಷಿ ಆಧಾರಿತವಾದ ಜೀವನವನ್ನು ಮಾಡಲು ಹೆಚ್ಚು ಉಪಯೋಗವಾಗಬೇಕು ಎನ್ನುವ ಉದ್ದೇಶದಿಂದ ನಾವು ನಮ್ಮ ವಿದ್ಯಾರ್ಥಿಗಳನ್ನು ಈ ಗ್ರಾಮ ವಾಸ್ತವ್ಯಕ್ಕೆ ಕಳುಹಿಸುತ್ತೇವೆ. ಇಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಗ್ರಾಮೀಣ ಜನರ ಹೃದಯವಂತಿಕೆ ಹೇಗಿದೆ, ಅವರ ಹೃದಯ ಶ್ರೀಮಂತಿಕೆ ಎಷ್ಟು ಚನ್ನಾಗಿದೆ ಎನ್ನುವುದು ಗೊತ್ತಾಗಿದೆ. ಅದನ್ನು ತಿಳಿಸಿಕೊಡುವುದೂ ಸಹ ಈ ಗ್ರಾಮ ವಾಸ್ತವ್ಯದ ಉದ್ದೇಶವಾಗಿದೆ. ವಿದ್ಯಾರ್ಥಿಗಳಿಗೆ ಜೀವನಪೂರ್ತಿ ಇದರ ಲಾಭವಾಗುತ್ತದೆ.
ವಿದ್ಯಾರ್ಥಿಗಳಿಗೆ ಸಮಗ್ರವಾಗಿ ಜೀವನದ ಕಲ್ಪನೆಯನ್ನು, ಜೀವನದ ಪಾಠವನ್ನು ಕಲಿಸುವುದೇ ಗ್ರಾಮ ವಾಸ್ತವ್ಯದ ಉದ್ದೇಶವಾಗಿದೆ. ಎಂ.ಬಿ.ಎ.ವಿದ್ಯಾರ್ಥಿಗಳು ಮುಂದೆ ಇಂಟರ್ ಸೀಪ್ ಕೋರ್ಸಿಗೆ ಪ್ರಾಜೆಕ್ಟ್ ವರ್ಕ್ ಗೆ ಹೋಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಸಮಗ್ರವಾದ ಅನುಭವ ನಮ್ಮ ವಿದ್ಯಾರ್ಥಿಗಳಿಗೆ ಬರುವಂತಾಗಬೇಕು. ಅದಕ್ಕಾಗಿ ನಾವು ವಿದ್ಯಾರ್ಥಿಗಳನ್ನು ಇಲ್ಲಿಗೆ ಕಳಿಸಿರುತ್ತೇವೆ. ನಾವು ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರತ್ಯಕ್ಷವಾಗಿ ಮಣ್ಣಿನಿಂದ ಹಿಡಿದು, ಬೀಜ, ಜೈವಿಕ ಕೃಷಿಯನ್ನು ಹೇಗೆ ಮಾಡುವುದು, ದೇಸಿ ಹಸುಗಳಿಂದ ಹೇಗೆ ಕೃಷಿ ಮಾಡಬಹುದು, ಜೈವಿಕ ಉತ್ಪನ್ನಗಳನ್ನು ಹೇಗೆ ಬಳಸಬಹುದು, ಸಸ್ಯ ಶಿಶು ಪಾಲನಾ ಕೇಂದ್ರ ಅಂದರೇನು, ಹೀಗೆ ಎಲ್ಲ ವಿಷಯಗಳ ಪ್ರಾತ್ಯಕ್ಷಿಕೆಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತೇವೆ.
ಗ್ರಾಮೀಣಾಭಿವ?ದ್ದಿ ವಿಶ್ವವಿದ್ಯಾಲಯ ಅದು ಜನರ ವಿದ್ಯಾಲಯ, ಗ್ರಾಮೀಣ ಜನರು ಇದರ ಅನುಭವದ ಜ್ಞಾನವನ್ನು ನೀವು ತೆಗೆದುಕೊಳ್ಳಬೇಕು. ನಿಮ್ಮಲ್ಲಿರುವ ಕೃಷಿ ಅನುಭವ, ಪ್ರಾತ್ಯಕ್ಷಿಕೆಗಳನ್ನು ಮಾಡಲು ರೈತರು ವಿವಿಗೆ ಬರಬೇಕು. ನಮ್ಮ ವಿವಿಯಿಂದ ಗ್ರಾಮ ಪಂಚಾಯತಿ ಸದಸ್ಯರು, ರೈತರು, ಗ್ರಂಥಪಾಲಕರಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಎಲ್ಲ ರೀತಿಯ ತರಬೇತಿಯನ್ನು ಕೊಡುತ್ತೇವೆ. ವಿಶ್ವವಿದ್ಯಾಲಯ ಇರುವುದೇ ವಿದ್ಯಾರ್ಥಿಗಳು ಮತ್ತು ಜನರಿಗಾಗಿ. ನಾಲ್ಕು ಕೊಠಡಿಗಳ ಒಳಗೆ ನಾವು ಪಾಠ ಮಾಡುವ ಉದ್ದೇಶವಲ್ಲ, ನಾಲ್ಕು ಗೋಡೆಗಳ ಹೊರಗಡೆ ಹೇಗೆ ಉಪಯುಕ್ತವಾಗಬೇಕು ಎನ್ನುವ ಉದ್ದೇಶದಿಂದ ನಾವಿಲ್ಲಿ ಬಂದಿದ್ದೇವೆ. ವಿದ್ಯಾರ್ಥಿಗಳು ಹಾಗೂ ನಮ್ಮ ವಿವಿ ಜತೆಗೆ ಗ್ರಾಮಸ್ಥರು ಸದಾ ಸಂಬಂಧ ಇಟ್ಟುಕೊಳ್ಳಬೇಕು. ಇಲ್ಲಿ ನಿರಂತರವಾಗಿ ಒಂದು ತಿಂಗಳ ಕಾಲ ನಮ್ಮ 38 ಜನ ವಿದ್ಯಾರ್ಥಿಗಳು ಈ ಗ್ರಾಮ ವಾಸ್ತವ್ಯದ ಮೂಲಕ ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವುದನ್ನು ಅರಿತಿದ್ದಾರೆ, ಕಲಿತಿದ್ದಾರೆ ಕೂಡಾ ಎಂದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳ ಪರವಾಗಿ ಭಾರ್ಗವ ಮತ್ತು ವಿದ್ಯಾ ಮಾತನಾಡಿ, 30 ದಿನಗಳ ಕಾಲ ಗ್ರಾಮಸ್ಥರು ನೋಡಿಕೊಂಡಿದ್ದು, ಕಪ್ಪತ್ತಗುಡ್ಡ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ವಿಜಯ ನಗರ ಸಕ್ಕರೆ ಕಾರ್ಖಾನೆ ಮೊದಲಾದವುಗಳ ಮಧ್ಯದಲ್ಲಿ ನಮಗೆ ಒಂದು ತಿಂಗಳ ಕಾಲ ಶಿಬಿರ ಜರುಗಿದ್ದು ಗೊತ್ತೇ ಆಗಲಿಲ್ಲ, ಇಲ್ಲಿನ ರೈತರು ನಮಗೆ ಕ?ಷಿ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು. ನಮಗೆಲ್ಲ ಇದೊಂದು ಜೀವನಾನುಭವವಾಗಿದೆ ಎಂದರು. ಜ.ಅ.ವಿದ್ಯಾ ಸಮೀತಿ ಆಡಳಿತಾಧಿಕಾರಿ ಡಾ. ಬಿ.ಜಿ.ಜವಳಿ, ಗ್ರಾಪಂ ಉಪಾಧ್ಯಕ್ಷ ಕರವೀರ್ಪ ಭಜಂತ್ರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಅಕ್ಕಮಹಾದೇವಿ ಮಲ್ಲಾಪೂರ, ಕೊಟ್ರೇಶ ಬಳ್ಳೊಳ್ಳಿ, ಸದಸ್ಯರಾದ ಮಂಜುಳಾ ಅಂಗಡಿ, ವಿರುಪಾಕ್ಷಯ್ಯ ಹಿರೇಮಠ, ಪರಸಪ್ಪ ಮುಂಡವಾಡ, ರೇಖಾ ತಳವಾರ, ಸುಮಿತ್ರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ.ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಓಜಸ್ವಿನಿ ಸ್ವಾಗತಿಸಿ, ನಿರೂಪಿಸಿದರು. ಡಾ.ಕೆ.ನೀಲಮ್ಮ ವಂದಿಸಿದರು.