ವಿಜಯನಗರ

ವಿದ್ಯಾರ್ಥಿನಿ ಸಾವು: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ವಿದ್ಯಾರ್ಥಿನಿ ಸಾವು: ನಿಷ್ಪಕ್ಷಪಾತ ತನಿಖೆಗೆ ಆಗ್ರಹ


 ವಿಜಯನಗರ  07:  ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಕುರುವತ್ತಿ ಗ್ರಾಮದ ನಿವಾಸಿ ಹಾಗೂ ದಾವಣಗೆರೆಯ ಟೈಮ್ ಅಕಾಡೆಮಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಮಾರಿ ರಂಜಿತಾ ಅವರು ಸೆ. 2ರಂದು ಕಾಲೇಜಿನ ಹಾಸ್ಟೆಲ್ ಕೊಠಡಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ವಿಜಯನಗರ ಜಿಲ್ಲಾ ಗಂಗಾಮತಸ್ಥರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.  

 ಈ ಕುರಿತು ಮಾತನಾಡಿದ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ್, ರಂಜಿತಾ ಅತ್ಯಂತ ಪ್ರತಿಭಾವಂತ ಹಾಗೂ ಉತ್ಸಾಹಿ ವಿದ್ಯಾರ್ಥಿನಿಯಾಗಿದ್ದು, ಜೀವನದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದರು. ಅವರಿಗೆ ಯಾವುದೇ ದೈಹಿಕ ಅಥವಾ ಮಾನಸಿಕ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಪೋಷಕರು ಹಾಗೂ ಸಹಪಾಠಿಗಳು ತಿಳಿಸಿದ್ದಾರೆ. ಹೀಗಿರುವಾಗ ಹಾಸ್ಟೆಲ್ ಕೊಠಡಿಯಲ್ಲಿ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.  

 ಆದ್ದರಿಂದ ಸರ್ಕಾರ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಿ, ಸಾವಿನ ಹಿಂದಿರುವ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೂ ಮನವಿ ಸಲ್ಲಿಸಲಾಗಿದೆ.  

 ನಂತರ ಮಾತನಾಡಿದ ವಿಜಯನಗರ ಜಿಲ್ಲಾ ಗಂಗಾಮತ ಸಮಾಜದ ಮಾಜಿ ಗೌರವಾಧ್ಯಕ್ಷ ವೈ.ಎ. ಯಮುನೇಶ್, ರಂಜಿತಾ ಅವರ ಸಂಶಯಾಸ್ಪದ ಸಾವಿನಿಂದ ಸಮಾಜಕ್ಕೆ ತೀವ್ರ ನೋವು ಹಾಗೂ ದುಃಖ ಉಂಟಾಗಿದೆ. ನಿಷ್ಪಕ್ಷಪಾತ ತನಿಖೆ ನಡೆದಾಗ ಮಾತ್ರ ಸಾವಿನ ನಿಜವಾದ ಕಾರಣ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.  

 ಗಂಗಾಮತಸ್ಥರು ಸೇರಿದಂತೆ ಹಿಂದುಳಿದ ಹಾಗೂ ದಮನಿತ ಸಮುದಾಯಗಳ ಮೇಲೆ ಯಾರೇ ದೌರ್ಜನ್ಯ ನಡೆಸಿದರೂ ಸರ್ಕಾರ ಕಠಿಣ ಕ್ರಮ ಕೈಗೊಂಡು ಕಾನೂನು ರಕ್ಷಣೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.  

 ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸರ್ದಾರ್ ಯಮನೂರ​‍್ಪ, ಶ್ರೀಧರ್, ವೈ. ರಾಜೇಶ್, ಜಂಬಯ್ಯ, ರಾಮಪ್ಪ ಕಬ್ಬೇರ್, ವೀರೇಶ್, ಉಮಾಪತಿ, ಎಂ. ದಾನಪ್ಪ, ಎನ್‌. ಅನಿಲ್, ಎಂ. ಮರಿಯಪ್ಪ, ಕೆ. ನಿಂಗಪ್ಪ, ಸೂರ್ಯನಾರಾಯಣ, ಶಿವಕುಮಾರ್, ಬೆಂಡಿಗೇರಿ ಲಿಂಗರಾಜ್, ಗಣೇಶ್ ತರಗೊಂದನಹಳ್ಳಿ, ತಿರುಕುಪ್ಪ ಶಿಡ್ಲಿ, ಪಿ. ಕೊಟ್ರ​‍್ಪ, ಮಡ್ಡೇರ್ ರಾಘವೇಂದ್ರ, ಸುರೇಶ್, ಮಹೇಶ್, ಮಂಜಪ್ಪ ಭೋವಿ, ಹಾಲಪ್ಪ ಭೋವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ