ಬಳ್ಳಾರಿ

ರೈತ ವಿರೋಧಿ ಕಾಯ್ದೆಗಳು ರದ್ದಾಗುವವರೆಗೆ ಹೋರಾಟದ ಪಣ: ಆಲ್ದಳ್ಳಿ

ರೈತ ವಿರೋಧಿ ಕಾಯ್ದೆಗಳು ರದ್ದಾಗುವವರೆಗೆ ಹೋರಾಟದ ಪಣ: ಆಲ್ದಳ್ಳಿ

ಬಳ್ಳಾರಿ 19: ದೆಹಲಿಯಲ್ಲಿ ಹೋರಾಟ ನಿರತ ರೈತರು  ಮೂರೂ ಕೃಷಿ ಕಾಯ್ದೆ ಕರಾಳವಾಗಿವೆ,  ರೈತವಿರೋಧಿಯಾಗಿವೆ ಎಂಬುದನ್ನು ಅರಿತುಕೊಂಡು ಆ ಐತಿಹಾಸಿಕ ಬೃಹತ್ ಹೋರಾಟ ನಡೆಸುತ್ತಿದ್ದಾರೆ ಎಂದು ಎಐಡಿವೈಓನ ಅಖಿಲ ಭಾರತ ಅಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು. 

ಜ.18ರಂದು ರೈತ ವಿರೋಧಿ ಕಾನೂನುಗಳನ್ನು ರದ್ದುಪಡಿಸಲು ಆಗ್ರಹಿಸಿ 55ಕ್ಕೂ ಹೆಚ್ಚು ದಿನಗಳಿಂದ ದೆಹಲಿಯ ಸುತ್ತ ಸಿಂಘು, ಟೆಕ್ರಿ, ಗಾಜಿಪುರ್, ಷಹಜಹಾನ್‍ಪುರ, ಔಚಂದಿ ಗಡಿಗಳಲ್ಲಿ ಹೋರಾಟನಿರತರಾಗಿರುವ ರೈತರೊಂದಿಗೆ ರಾಮಾಂಜನಪ್ಪ ಆಲ್ದಳ್ಳಿ, ಎಐಡಿವೈಓನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಎಂ.ಉಮಾದೇವಿ, ಉಪಾಧ್ಯಕ್ಷ ಶರಣಪ್ಪ ಉದ್ಬಾಳ್ ಹಾಗೂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿನಯ್‍ಸಾರಥಿ ಕೆಲವು ದಿನ ಇದ್ದು, ಅಲ್ಲಿನ ಅನುಭವಗಳನ್ನು ಆನ್ಲೈನ್ ಕಾರ್ಯಕ್ರಮದಲ್ಲಿ ಅವರು ಹಂಚಿಕೊಂಡರು. 

ಹೋರಾಟವು ಎಷ್ಟೇ ದೀರ್ಘಕಾಲ ನಡೆದರೂ, ಜೀವ ಹೋಗುವ ಪರಿಸ್ಥಿತಿ ಬಂದರೂ ಹೋರಾಟ ಮುಂದುವರೆಸುವ ದೃಡ ಸಂಕಲ್ಪದೊಂದಿಗೆ ಕೊರೆಯುವ ಚಳಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ದೇಶದಾದ್ಯಂತ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದರು.

ಎಂ. ಉಮಾದೇವಿಯವರು ಮಾತನಾಡಿ ಈ ರೈತ ಹೋರಾಟದಲ್ಲಿ 70ಕ್ಕೂ ಹೆಚ್ಚು ಜನರು ಈಗಾಗಲೇ ಹುತಾತ್ಮರಾಗಿದ್ದಾರೆ. ಆದರೂ ಹೋರಾಟವನ್ನು ರೈತರು ಮುಂದುವರೆಸಿಕೊಂಡು ನಡೆಸಿದ್ದಾರೆ.  ಆ ಹೋರಾಟದಿಂದ ನಾವೂ ಪಾಠ ಕಲಿತು, ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ನಮ್ಮ ರಾಜ್ಯದಲ್ಲಿಯೂ ಪ್ರಬಲ ಹೋರಾಟವನ್ನು ಕಟ್ಟಬೇಕು ಎಂದು ಹೇಳಿದರು. 

ಎಐಡಿವೈಓನ ರಾಜ್ಯ ಕಾರ್ಯದರ್ಶಿ ಜಿ. ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ ನಿರೂಪಿಸಿದರು. ವಿವಿಧ ಜಿಲ್ಲೆಗಳಿಂದ ಯುವಕ-ಯುವತಿಯರು ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಓದಿ