ಕಾರ್ಮಿಕರ ಮರು ನೇಮಕಕ್ಕೆ ಒತ್ತಾಯಿಸಿ ಧರಣಿ ಸತ್ಯಾಗ್ರಹ
ಬಳ್ಳಾರಿ 11: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಶಾಖೆಗಳಲ್ಲಿ ದುಡಿಯುತ್ತಿರುವ 286 ಕಾರ್ಮಿಕರನ್ನು ತಾತ್ಕಾಲಿಕವಾಗಿ ವಜಾ ಮಾಡಿರುವ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳಲು ಒತ್ತಾಯಿಸಿ ಕಾರ್ಮಿಕರ ಕುಟುಂಬ ಸದಸ್ಯರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಇಂದಿಗೆ 2ನೇ ದಿನಕ್ಕೆ ಕಾಲಿಟ್ಟಿದೆ. ಇಂದಿನ ಧರಣಿ ಸತ್ಯಾಗ್ರಹದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು, ಜಾವೀದ್, ನಾಗರಾಜ ತೆಕ್ಕಲಕೋಟೆ, ಪಿ.ಬಸವರಾಜ, ಸುಧೀಂದ್ರ, ಕೆ.ಹುಲಿಗೆಪ್ಪ, ಇಂತಿಯಾಜ್, ಮೆಹಬೂಬ್ಭಾಷ ಸೇರಿದಂತೆ ಮುಂತಾದವರು ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಅಖಂಡ ಬಳ್ಳಾರಿ ಜಿಲ್ಲೆಯಾಗಿರುವ ಸಿರುಗುಪ್ಪ, ಕಂಪ್ಲಿ, ಸಂಡೂರು, ಕುರೇಕುಪ್ಪೆ, ತೆಕ್ಕಲಕೋಟೆ, ಕುಡತಿನಿ, ಕಮಲಾಪುರ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ ನಗರ ಸ್ಥಳೀಯ ಪುರಸಭೆ ಮತ್ತಿತರ ಸಂಸ್ಥೆಗಳು ಸೇರಿದಂತೆ ವಿವಿಧ ಶಾಖೆಗಳಲ್ಲಿ ಕಳೆದ 20 ವರ್ಷಗಳಿಂದ ದುಡಿಯುತ್ತಿದ್ದ ಕಾರ್ಮಿಕರನ್ನು (ಎಫ್ಬಿಎಎಸ್) ತಂತ್ರಾಂಶದಲ್ಲಿ ಅಳವಡಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣ ಹೇಳಿ ಸುಮಾರು 286 ಕಾರ್ಮಿಕರನ್ನು ಡಿ.30,2019 ರಂದು ತಾತ್ಕಾಲಿಕವಾಗಿ ಕೆಲಸದಿಂದ ವಜಾ ಮಾಡಿರುತ್ತಾರೆ. ಒಳಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಸರ್ಕಾರದ ಕ್ರಮಾನುಸಾರವಾಗಿ ನಿಯಮಗಳನ್ನು ಪಾಲಿಸದೇ ಇರುವುದನ್ನು ಕಂಡರೆ ಆ ಸಂದರ್ಭದಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನವೇ ಎದ್ದು ಕಾಣುತ್ತಿದೆ ಎಂದು.
ಈ ಕಾರಣಕ್ಕೆ ಕಳೆದ 20 ವರ್ಷಗಳಿಂದ ದುಡಿಯುತ್ತಿದ್ದ ಕಾರ್ಮಿಕರನ್ನು ತಾತ್ಕಾಲಿಕವಾಗಿ ವಜಾ ಮಾಡಿರುವುದರಿಂದ 286 ಕುಟುಂಬಗಳು ಬೀದಿಪಾಲಾಗಿರುತ್ತವೆ. ಕಳೆದ 2 ವರ್ಷಗಳಿಂದ ಕೋವಿಡ್-19 ಮಹಮ್ಮಾರಿಯ ಸಾಂಕ್ರಾಮಿಕ ರೋಗದಿಂದ ಯಾವುದೇ ಇಲಾಖೆಗಳು ಶೇಕಡಾ 100ರಷ್ಟು ಕಾರ್ಯನಿರ್ವಹಿಸದಿರುವುದರಿಂದ ಕಾರ್ಮಿಕರಿಗೆ ತಮ್ಮ ಮರು ನೇಮಕ ಮಾಡಿಕೊಳ್ಳಬೇಕೆಂದು ಸ್ಥಳೀಯ ಶಾಸಕರಿಗೂ, ಜಿಲ್ಲಾ ಉಸ್ತುವಾರಿ ಸಚಿವರಿಗೂ, ಸಂಬಂಧಪಟ್ಟ ಎಲ್ಲಾ ಇಲಾಖೆಯ ಸಚಿವರುಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ರೀತಿಯ ಪ್ರಯೋಜನವಾಗದೇ ಇರುವುದರಿಂದ ಕಾರ್ಮಿಕರು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಬೀದಿಪಾಲಾದ ಕಾರ್ಮಿಕರು ಇದೇ ಕೆಲಸವನ್ನು ನಂಬಿಕೊಂಡು ಸಂಸಾರ ನಡೆಸುತ್ತಿದ್ದು, ಇದರಿಂದ ನೌಕರರ ಸಂಸಾರ ಬೀದಿಪಾಲು, ಮಕ್ಕಳ ವಿದ್ಯಾಭ್ಯಾಶ, ಮನೆ ಬಾಡಿಗೆ ಕಟ್ಟಲು ತುಂಬಾ ಕಷ್ಟಕರವಾಗಿದ್ದು, ಉಲ್ಲೇಖದಲ್ಲಿ ನಮೂದಿಸಲಾಗಿದ್ದ ಸರ್ಕಾರದ ಆದೇಶದಲ್ಲಿ ಮರು ಹೊಂದಾಣಿಕೆ ಮಾಡಲು ಸೂಚಿಸಿದ್ದರೂ ಸಹಕ ಅಧಿಕಾರಿಗಳು "ಡಿ" ವೃಂದದ ನೌಕರರ ಮೇಲೆ ಚೆಲ್ಲಾಟವಾಡಿದ್ದಾರೆ ಎಂದು ದೂರಿದರು.
ಆದರೆ ಹೊರಗುತ್ತಿಗೆ ಆಧಾರದಲ್ಲಿ ಸಂಸ್ಥೆಗಳಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಟೆಂಡರನ್ನು ಕರೆ ಮಾಡುವುದಕ್ಕೆ ಮುಂದಾಗುತ್ತಿದ್ದು, ಇದರ ಭಾಗವಾಗಿ ಸ್ಥಳೀಯ ಸಂಸ್ಥೆಗಳಲ್ಲಿರುವ ರಾಜಕೀಯ ಪ್ರಭಾವದಿಂದ ಹೊಸ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗುವ ಅಪಾಯವಿದೆ. ಆದಕಾರಣ ತಾವು ಹೊರಗುತ್ತಿಗೆ ಮತ್ತು ದಿನಗೂಲಿ ಆಧಾರದ ಮೇಲೆ ಮತ್ತು ಅವರ ಕಾರ್ಮಿಕರ ಸೇವಾ ಹಿರಿತನವನ್ನು ಗಮನದಲ್ಲಿಟ್ಟುಕೊಂಡು ವಜಾಗೊಳಿಸಿರುವ ಕಾರ್ಮಿಕರನ್ನೇ ಮರು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಿ, ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಅ. 11, 2021ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಹೋರಾಟ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿ, ಕಾರ್ಮಿಕರೊಂದಿಗೆ ಜಂಟಿ ಸಭೆ ಕರೆಯಲು ಮನವಿ ಮಾಡಲಾಗಿತ್ತು.
ನಮ್ಮ ಮುಖ್ಯ ಬೇಡಿಕೆಗಳಾದ ವಜಾ ಮಾಡಿರುವ ಹೊರಗುತ್ತಿಗೆ ಮತ್ತು ದಿನಗೂಲಿ ಆಧಾರದಲ್ಲಿ ಕಳೆದ 20 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರನ್ನೇ ಮರು ನೇಮಕ ಮಾಡಿಕೊಳ್ಳಬೇಕು. ಸೇವಾ ಹಿರಿತನವನ್ನು ಯಥಾರೀತಿಯಾಗಿ ಮುಂದುವರೆಸಬೇಕು. ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೇರಿದಂತೆ ಕಾರ್ಮಿಕರೊಂದಿಗೆ ಜಂಟಿ ಸಭೆ ನಡೆಸಿ, ಸೂಕ್ತ ನಿರ್ಣಯ ಕೈಗೊಳ್ಳಬೇಕು. ನ. 31,2019 ಹಿಂದಿನ ಬಾಕಿ ವೇತನ ಪಾವತಿ ಮಾಡಬೇಕು. ಪ್ರತಿ ಕಾರ್ಮಿಕರಿಗೆ ಕನಿಷ್ಠ ಸುಮಾರು 2 ವರ್ಷಗಳ ವೇತನ ಬಾಕಿ ಪಾವತಿಸಬೇಕು. ಕಮಲಾಪುರ, ಸಿರುಗುಪ್ಪ, ತೆಕ್ಕಲಕೋಟೆ, ಹಗರಿಬೊಮ್ಮನಹಳ್ಳಿ ಹೂವಿನಹಡಗಲಿ, ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ವೇತನ ಪಾವತಿಸಿರುವುದಿಲ್ಲ. ಹಾಗೆಯೇ ಪಿಎಫ್., ಇಎಸ್ಐ ಕೂಡಾ ಪಾವತಿಸಿರುವುದಿಲ್ಲ. ಕಮಲಾಪುರ ಮತ್ತು ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಮಿಕರಿಗೆ 2015-16 ರಿಂದಲೇ ಪಿಎಫ್ ಮತ್ತು ಇಎಸ್ಐ. ಪಾವತಿ ಮಾಡಿರುವುದಿಲ್ಲ. ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ನೌಕರರಿಗೆ 2015-16ನೇ ಸಾಲಿನಿಂದ ವೇತನ ಬಾಕಿ ಇರುತ್ತಾರೆ. ಸಿರುಗುಪ್ಪ ನಗರಸಭೆ ವತಿಯಿಂದ 2 ವರ್ಷದಿಂದ ವೇತನ ಬಾಕಿ ಇರುತ್ತದೆ. ಗುತ್ತಿಗೆ ರದ್ದು ಮಾಡಿ ನೇರ ಪಾವತಿ ಮಾಡಬೇಕು ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಆದರೆ ಇಲ್ಲಿಯವರೆಗೆ ಸುಮಾರು 25 ದಿನ ಕಳೆದರೂ ಕೂಡಾ ಜಿಲ್ಲಾಧಿಕಾರಿಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದ ಕಾರಣ ಅನಿವಾರ್ಯವಾಗಿ ಬೀದಿಪಾಲಾದ ಕಾರ್ಮಿಕರ ಕುಟುಂಬ ಸದಸ್ಯರೊಂದಿಗೆ ಈ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಇನ್ನಾದರೂ ಈ ಕುರಿತು ತಕ್ಷಣವೇ ಸಂಬಂಧಪಟ್ಟವರು ಸ್ಪಂದಿಸಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.