ಬಳ್ಳಾರಿ

ವಿಮ್ಸ್‌ ಆವರಣದಲ್ಲಿ ಡಾ. ಬಾಬುರಾಜೇಂದ್ರ ಪ್ರಸಾದ್ ಪ್ರತಿಮೆ ಅನಾವರಣ

ವಿಮ್ಸ್‌ ಆವರಣದಲ್ಲಿ ಡಾ. ಬಾಬುರಾಜೇಂದ್ರ ಪ್ರಸಾದ್ ಪ್ರತಿಮೆ ಅನಾವರಣ

ಸ್ವಾತಂತ್ರ್ಯ ಸಮರ ಸೌಧದ ಮ್ಯೂಸಿಯಂ ಆಗಿ ಅಭಿವೃದ್ಧಿಪಡಿಸಲು ಕ್ರಮ: ಸಚಿವ ಶ್ರೀರಾಮುಲು 

ಬಳ್ಳಾರಿ 25: ಬಳ್ಳಾರಿಯ ವಿಮ್ಸ್‌ ಆವರಣದಲ್ಲಿರುವ ಸ್ವಾತಂತ್ರ್ಯ ಸಮರ ಸೌಧವನ್ನು ಮ್ಯೂಸಿಯಂ ಆಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು. 

ಅಲ್ಲಿಪುರ ಜೈಲಿಗೆ ಡಾ. ಬಾಬುರಾಜೇಂದ್ರ ಪ್ರಸಾದ್ ಅವರು ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಗಾರ ರಾಜಾಜಿ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದ ಕುರಿತು ಚರ್ಚಿಸಿದ ನೆನಪಿಗಾಗಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದ ನಿಮಿತ್ತ ನಗರದ ವಿಮ್ಸ್‌ ಆವರಣ(ಅಲ್ಲಿಪುರ ಜೈಲು)ದಲ್ಲಿರುವ ಸ್ವಾತಂತ್ರ್ಯ ಸಮರ ಸೌಧದದ ಮುಂಭಾಗ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಪ್ರತಿಮೆಯನ್ನು ಶನಿವಾರ ಅನಾವರಣಗೊಳಿಸಿ ಅವರು ಮಾತನಾಡಿದರು. 

ಸ್ವಾತಂತ್ರ್ಯ ಸಮರ ಸೌಧದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ರಾಷ್ಟ್ರಪಿತ ಮಹಾತ್ಮಗಾಂಧೀಜಿ, ನೆಹರು, ರಾಜಾಜಿ, ಬಾಬು ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಬಾಯಿ ಪಟೇಲ್, ಬಾಲಗಂಗಾಧರ ತಿಲಕ್, ಲಾಲ ಲಜಪತ್‌ರಾಯ, ಸುಭಾಷಚಂದ್ರಬೋಸ್,ಭಗತ್‌ಸಿಂಗ್, ಸಂಗೋಳ್ಳಿ ರಾಯಣ್ಣ,ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ದೇಶಕ್ಕಾಗಿ ತಮ್ಮ ಇಡೀ ಜೀವನವನ್ನೇ ಸವೆಸಿದ ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಸ ಪ್ರತಿಮೆ ಹಾಗೂ ಅಗತ್ಯ ಮಾಹಿತಿ ವ್ಯವಸ್ಥೆ, ಸ್ವಾತಂತ್ರ್ಯ ಹೋರಾಟ ಮತ್ತು ಬಳ್ಳಾರಿ ಹಾಗೂ ಅಲ್ಲಿಪುರ ಜೈಲು ಕುರಿತ ಸಮಗ್ರ ಮಾಹಿತಿಯನ್ನೊಳಗೊಂಡ ಮ್ಯೂಸಿಯಂ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದರು. 

ಮ್ಯೂಸಿಯಂ ಅಭಿವೃದ್ಧಿಪಡಿಸುವುದರ ಮೂಲಕ ಇಂದಿನ ಪೀಳಿಗೆಗೆ ಅಂದಿನ ಸ್ವಾತಂತ್ರ್ಯ ಹೋರಾಟ ಮತ್ತು ಬಳ್ಳಾರಿ ಸಂಬಂಧ ತಿಳಿಪಡಿಸುವ ಕೆಲಸ ಮಾಡಲಾಗುವುದು ಎಂದರು. 

ಮಹಾತ್ಮ ಗಾಂಧೀಜಿಯವರಿಗೆ ಬಳ್ಳಾರಿ ನಡುವಿನ ವಿಶೇಷ ಸಂಬಂಧದ ಹಾಗೆ ಬಾಬು ರಾಜೇಂದ್ರ ಪ್ರಸಾದ್ ಹಾಗೂ ಬಳ್ಳಾರಿಗೂ ವಿಶೇಷ ಸಂಬಂಧ ಇದೆ.. ಅದನ್ನು ಇನ್ನಷ್ಟು ಇಮ್ಮಡಿಗೊಳಿಸುವ ಕೆಲಸ ಈ ಈ ಕಾರ್ಯಕ್ರಮದ ಮೂಲಕ ಆಗುತ್ತಿದೆ ಎಂದರು. 

ಸ್ವಾತಂತ್ರ್ಯ ಹೋರಾಟದ ದಿನಗಳ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡಲು ಬಳ್ಳಾರಿಯಲ್ಲಿ 173 ಎಕರೆ ಜಾಗವನ್ನು ತೆರೆದ ಸೆರೆಮನೆಯಾಗಿ ಬ್ರಿಟಿಷರು ನಿರ್ಮಿಸಿದರು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಈ ಸೆರೆಮನೆಯಲ್ಲಿ ಹಲವಾರು ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡಲಾಗಿತ್ತು. ಅವರಲ್ಲಿ ಪ್ರಮುಖರು ರಾಜಾಜಿ ಎಂದೇ ಪ್ರಸಿದ್ಧರಾಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರು. ಸ್ವಾತಂತ್ರ್ಯ ಹೋರಾಟದಲ್ಲಿ ಅಂದಿಗೆ ಮುಂಚೂಣಿಯಲ್ಲಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರು ಭಾರತ ಯಾತ್ರೆಯ ಪ್ರಯುಕ್ತ ಜೂನ್ 1,1937 ರಂದು ಬಳ್ಳಾರಿಗೆ ಬಂದು ಅಲ್ಲಿಪುರ ಸೆರೆಮನೆಯಲ್ಲಿ ರಾಜಾಜಿ ಅವರನ್ನು ಭೇಟಿ ಮಾಡಿ , ಸ್ವಾತಂತ್ರ್ಯ ಹೋರಾಟದ ರೂಪುರೇಷೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು ಎಂದರು. 

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ 1958 ರಲ್ಲಿ ಈ ಸೆರೆಮನೆಯನ್ನು ಮುಚ್ಚಲಾಯಿತು. ಮುಂದೆ 1963 ರಲ್ಲಿ ಇದೆ ಜಾಗದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆರಂಭವಾಯಿತು ಎಂದು ವಿವರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಆದರೆ ರಾಜಾಜಿಯವರು ಹಾಗೂ ಬಾಬು ರಾಜೇಂದ್ರ ಪ್ರಸಾದ್ ರವರು ಕುಳಿತು ಚರ್ಚಿಸಿದ್ದ ಈ ಸೆರೆಮನೆಯನ್ನು ಇಂದಿಗೂ ಹಾಗೆ ಉಳಿಸಿಕೊಂಡು "ಸ್ವಾತಂತ್ರ್ಯ ಸಮರ ಸೌಧ" ವಾಗಿ ಕಾಪಾಡಿಕೊಂಡು ಬರಲಾಗಿದೆ ಎಂದರು. 

ಬಾಬು ರಾಜೇಂದ್ರ ಪ್ರಸಾದ್ ಹಾಗೂ ಬಳ್ಳಾರಿ ನಡುವಿನ ವಿಶೇಷ ಸಂಬಂಧವನ್ನು, ಹಾಗೂ ಅವರ ಆಚಾರ - ವಿಚಾರ , ತತ್ವ - ಸಿದ್ಧಾಂತಗಳನ್ನು ಸದಾ ಸ್ಮರಿಸುವ ಸಲುವಾಗಿ ಈ "ಅಮೃತ ಭಾರತಿಗೆ ಕನ್ನಡದ ಆರತಿ", ಅಭಿಯಾನದ ಪ್ರಯುಕ್ತ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ ಎಂದರು. 

ನಮ್ಮ ಸ್ವಾತಂತ್ರ್ಯ ಸಂಗ್ರಾಮಕ್ಕೆ, ನಂತರ ಭವ್ಯ ಭಾರತ ನಿರ್ಮಾಣಕ್ಕೆ ರೂಪುರೇಷೆ ಕೊಟ್ಟಿದ್ದು ಬಾಬು ರಾಜೇಂದ್ರ ಪ್ರಸಾದ್ ರವರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದವರಲ್ಲಿ ಇವರು ಪ್ರಮುಖರು. ಸ್ವಾತಂತ್ರ್ಯಕ್ಕೆ ಹೋರಾಡೋ ಸಮಯದಲ್ಲಿ "ಶಾಂತಿ, ಅಹಿಂಸೆಯ" ಜೊತೆ, "ಅಸಹಕಾರ ಚಳುವಳಿಯೇ" ಬ್ರಿಟಿಷರ ವಿರುದ್ಧ ಸೂಕ್ತ ಅಸ್ತ್ರ ಎಂದು ಗಾಂಧೀಜಿ ಚಿಂತನೆಗೆ ಶಕ್ತಿ ತುಂಬಿದ್ದು ರಾಜೇಂದ್ರ ಪ್ರಸಾದ್ ಅವರು ಎಂದರು.  

ಹೋರಾಟದ ಸಂದರ್ಭದಲ್ಲಿ 2 ಬಾರಿ ಜೈಲು ಸೇರಿ,  ನಮ್ಮ ಸಂವಿಧಾನ ರಚನೆಯ ಸಮಿತಿ ಅಧ್ಯಕ್ಷರಾಗಿ, ನಂತರ ರಾಷ್ಟ್ರಪತಿಗಳಾಗಿ 2 ಬಾರಿ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ ಶ್ರೇಷ್ಠರಾಗಿದ್ದಾರೆ.ಎಷ್ಟೇ ಎತ್ತರಕ್ಕೆ ಏರಿದರೂ ಅವರ ಹೃದಯ ಮಿಡಿಯುತ್ತಿದ್ದುದು ಜನಸಾಮಾನ್ಯರಿಗೆ, ಬಡವರಿಗೆ, ಕಷ್ಟದಲ್ಲಿರುವವರಿಗೆ ಎಂದರು. 

ಬಾಬು ರಾಜೇಂದ್ರ ಪ್ರಸಾದ್ ಅವರ ತತ್ವ-ಸಿದ್ಧಾಂತಗಳು ಇವತ್ತು ನಮ್ಮ ಬದುಕುಗಳಲ್ಲಿ ನಿತ್ಯ ಆಚರಣೆ ಆಗಬೇಕಿದೆ ಎಂದರು. 

ಮುಂದಿನ ದಿನಗಳಲ್ಲಿ ಗಾಂಧೀಜಿ, ಬಾಬುಜಿ ಸೇರಿದಂತೆ ದೇಶಕ್ಕೆ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಬದುಕುಗಳನ್ನು ನಮ್ಮ ಮಕ್ಕಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ತಿಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ ಎಂದರು. 

ಸಂಸದರಾದ ವೈ.ದೇವೇಂದ್ರ​‍್ಪ ಅವರು ಮಾತನಾಡಿದರು. 

ಈ ಸಂದರ್ಭದಲ್ಲಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್,ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯ್ಡು, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ,ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಜಿ.ಲಿಂಗಮೂರ್ತಿ, ವಿಮ್ಸ್‌ ನಿರ್ದೇಶಕ ಡಾ.ಗಂಗಾಧರಗೌಡ,ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು,ಮಾಜಿ ಸಂಸದರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್ ಅವರು ಸ್ವಾಗತಿಸಿದರು. 

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಎಲೆಕ್ಟ್ರಿಕ್ ವಾಹನಗಳಿಗೆ ಚಾಲನೆ ನೀಡಿದರು. 

*ಗಮನಸೆಳೆದ ಸ್ವಾತಂತ್ರ್ಯ ಸಮರ ಸೌಧ:  

ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡುವ ತೆರೆದ ಸೆರೆಮನೆಯಾಗಿದ್ದ ಈ ಅಲ್ಲಿಪುರ ಜೈಲಿನ ನೆನಪಿಗಾಗಿ ನಿರ್ಮಿಸಲಾಗಿರುವ ಸ್ವಾತಂತ್ರ್ಯ ಸಮರ ಸೌಧದಲ್ಲಿ ಶನಿವಾರ ರಾಷ್ಟ್ರಪಿತ ಮಹಾತ್ಮಗಾಂಧೀಜಿ,ಸುಭಾಷ್‌ಚಂದ್ರ ಭೋಸ್,ಭಗತ್‌ಸಿಂಗ್,ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ,ನೆಹರು,ರಾಜಾಜಿ ಸೇರಿದಂತೆ ಅನೇಕರ ದರ್ಶನವಾಯಿತು! ಇಡೀ ಸೌಧದ ತುಂಬೆಲ್ಲಾ ಭಾರತ ಮಾತಾಕೀ ಜೈ ಎನ್ನುವ ಘೋಷಣೆ ಮೊಳಗುತ್ತಿತ್ತು. ಅವರನ್ನು ನಿಯಂತ್ರಿಸಲು ಬ್ರಿಟಿಷ್ ಸೈನಿಕರು ಹರಸಾಹಸಪಡುತ್ತಿದ್ದರು. 

ಹೌದು. ಡಾ.ಬಾಬು ರಾಜೇಂದ್ರ ಪ್ರಸಾದ್ ಅವರು ಈ ಸೆರೆಮನೆಗೆ ಭೇಟಿ ನೀಡಿದ ನಿಮಿತ್ತ ಪ್ರತಿಷ್ಠಾಪಿಸಲಾಗಿರುವ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಸ್ವಾತಂತ್ರ್ಯ ಸಮರ ಸೌಧ ಸಂಪೂರ್ಣ ಸ್ವಾತಂತ್ರ್ಯ ಹೋರಾಟದ ಜೈಲಾಗಿಯೇ ಪರಿವರ್ತನೆಯಾಗಿತ್ತು. 

ದೇಶದ ಸ್ವಾತಂತ್ರ್ಯ ಹೋರಾಟಗಾರ ಜೈಲಿನಲ್ಲಿಟ್ಟರೂ ದೇಶದ ಸ್ವಾತಂತ್ರ್ಯಕ್ಕಾಗಿ ಅವರು ನಡೆಸುತ್ತಿದ್ದ ಸಭೆಗಳು,ಚರ್ಚೆಗಳು ಕಲಾವಿದರ ಪ್ರದರ್ಶನದಲ್ಲಿ ಕಂಡುಬಂದಿತು. ಇದೆಲ್ಲವನ್ನು ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಎಲ್ಲರೂ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಭಾರತ್ ಮಾತಾ ಕೀ ಜೈ ಘೋಷಣೆ ಮೊಳಗಿಸಿದರು. 


ಸುದ್ದಿ ಓದಿ