ಸವಿತಾ ಸಮಾಜದ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಕೃಷ್ಣ ಎಚ್. ಹಡಪದ
ಗದಗ, ಅ. 01: ರಾಜಕೀಯ ಲಾಭ ಹಾಗೂ ಸಾಮಾಜಿಕ ಅಧಿಕಾರಕ್ಕಾಗಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಬಡ ಸವಿತಾ ಸಮಾಜದ ಬಂಧುಗಳನ್ನು ದಾಳವಾಗಿ ಬಳಸಿಕೊಳ್ಳುವ ರಾಜಕೀಯ ನಾಯಕರ ನಾಟಕ ಇನ್ನು ಮುಂದೆ ನಡೆಯುವುದಿಲ್ಲ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣ ಎಚ್. ಹಡಪದ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ದೇವರಾಜ ಅರಸು ಆಡಿಟೋರಿಯಂನಲ್ಲಿ ಸೆ. 29ರಂದು ನಡೆದ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಸಮಗ್ರ ಅಭಿವೃದ್ಧಿಗಾಗಿ ಚಿಂತನಾ-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ಲಕ್ಷಾಂತರ ಸವಿತಾ ಸಮಾಜದ ಜನಸಂಖ್ಯೆ ಇದ್ದರೂ, ಶೇ. 90ಕ್ಕೂ ಹೆಚ್ಚು ಕುಟುಂಬಗಳಿಗೆ ಸ್ವಂತ ಜಮೀನು, ವಾಸಿಸಲು ಸ್ವಂತ ಮನೆ ಅಥವಾ ಉದ್ಯೋಗ-ವ್ಯವಹಾರ ನಡೆಸಲು ಸ್ವಂತ ಅಂಗಡಿ ಇಲ್ಲ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೊಳಗಾದ ಅನೇಕ ಸವಿತಾ ಬಂಧುಗಳು ಇಂದಿಗೂ ಇತರರ ಅಂಗಡಿಗಳಲ್ಲಿ ದಿನಗೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಇಂತಹ ಪರಿಸ್ಥಿತಿಯಲ್ಲಿ ಸವಿತಾ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯಗಳು ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿರುವುದು ಏಕೆ ಎಂಬ ಪ್ರಶ್ನೆ ಮೂಡುತ್ತಿದೆ. ನಿಗಮದಿಂದ ದೊರೆಯುವ ಅಲ್ಪಸ್ವಲ್ಪ ಸೌಲಭ್ಯಗಳೂ ಸವಿತಾ ಸಮಾಜದ ಮೂಲ ಬಂಧುಗಳ ಬದಲಾಗಿ ಇತರ ಸಮುದಾಯಗಳಿಗೆ ದೊರೆಯುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.