ಜೆ.ಎಚ್. ಪಟೇಲ್ ಅವರ ಜನಪರ ಚಿಂತನೆ ಇಂದಿಗೂ ಆದರ್ಶ: ವಿಶ್ವನಾಥ ಖಾನಾಪುರ
ಗದಗ 01: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಜಿಲ್ಲೆಯ ರಚನಾಕಾರರಾದ ಶ್ರೀ ಜೆ.ಎಚ್. ಪಟೇಲ್ ಅವರ 96ನೇ ಜನ್ಮದಿನದ ಅಂಗವಾಗಿ ಗದಗ ಜಿಲ್ಲಾ ಅಭಿವೃದ್ಧಿ ವೇದಿಕೆ ವತಿಯಿಂದ ‘ಸವಿ ನೆನಪು’ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪುರ, ಇಂದಿನ ರಾಜಕೀಯ ಸಂದರ್ಭದಲ್ಲಿ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳಿಗೆ ಆದ್ಯತೆ ನೀಡುವ ನಾಯಕತ್ವದ ಅಗತ್ಯವಿದೆ ಎಂದು ಹೇಳಿದರು.
ಜೆ.ಎಚ್. ಪಟೇಲ್ ಅವರು ಹಣದ ರಾಜಕಾರಣಕ್ಕೆ ಒತ್ತು ನೀಡದೆ, ಅಭಿವೃದ್ಧಿಪರ ಚಿಂತನೆಯೊಂದಿಗೆ ಜನರಿಗೆ ಹತ್ತಿರವಾಗಿದ್ದರು. ಮುಖ್ಯಮಂತ್ರಿಯಾಗಿ ಅವರು ಸಲ್ಲಿಸಿದ ಸೇವೆಯಿಂದಾಗಿ ಅವರ ಹೆಸರು ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಜ್ಞಾನ ಸಂಪಾದಿಸಿದರೆ ಉತ್ತಮ ಸಮಾಜ ನಿರ್ಮಾಣದ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಶ್ವನಾಥ ಖಾನಾಪುರ ಹೇಳಿದರು. ಕಾರ್ಯಕ್ರಮದಲ್ಲಿ ರಾಜಗುರು ವಸಂತ ವಡ್ಡರ, ಗಣೇಶ ನಾಕೋಡ, ವೆಂಕಟೇಶ ಕಬಾಡಿ, ಎಸ್.ಎಸ್. ಪುರಾಣಿಕಮಠ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.