ಕುಡಿಯುವ ನೀರಿನ ಸಮಸ್ಯೆ ಮುಂದಿಟ್ಟುಕೊಂಡು ಪ್ರತಿಭಟನೆ: ರಾಜಕೀಯ ಕೆಸರೆರಚಾಟಕ್ಕೆ ಆಕ್ಷೇಪ
ಲೋಕದರ್ಶನ ವರದಿ
ಗದಗ, ಅ. 30: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟದ ಬದಲಾವಣೆಯ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ, ಗದಗ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕ ಹಾಗೂ ಬಡವರ ಬಂಧು ಎಂದೇ ಗುರುತಿಸಿಕೊಂಡಿರುವ ಡಾ. ಎಚ್.ಕೆ. ಪಾಟೀಲ ಅವರ ವಿರುದ್ಧ ಕೆಲವರು ಆಧಾರರಹಿತ ಹೇಳಿಕೆ, ಟೀಕೆ ಹಾಗೂ ನಿಂದನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕ್ಷೇತ್ರದ ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ ಆರೋಪಿಸಿದ್ದಾರೆ.
ಎರಡನೇ ಸಚಿವ ಸಂಪುಟ ವಿಸ್ತರಣೆಯ ಪಟ್ಟಿ ಬಿಡುಗಡೆಯಾದ ಬಳಿಕ ಕೆಲವರು ಡಾ. ಎಚ್.ಕೆ. ಪಾಟೀಲ ಅವರ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ, ಹೈಟೆಕ್ ಸಿಟಿ ಯೋಜನೆ ಹಾಗೂ ಗದಗ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆಯೆಂದು ಘೋಷಿಸುವ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರವು 35 ವಾರ್ಡ್ಗಳನ್ನು ಹೊಂದಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ನಗರದಲ್ಲಿ ಪ್ರಸ್ತುತ ಹಲವು ಬಡಾವಣೆಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಪ್ರತಿ ಬಡಾವಣೆಗೆ ನೀರು ಪೂರೈಸಿದ ಬಳಿಕ ಮುಂದಿನ ಸರದಿಗೆ ಕೆಲವು ದಿನಗಳ ಅಂತರ ಇರುವುದಕ್ಕೆ ನೀರು ಸರಬರಾಜು ವ್ಯವಸ್ಥೆಯಲ್ಲಿನ ತಾಂತ್ರಿಕ ಕಾರಣಗಳೂ ಇವೆ ಎಂದು ಪಾಲನಕರ ತಿಳಿಸಿದ್ದಾರೆ.
ಇತ್ತೀಚೆಗೆ ಪ್ರತಿಪಕ್ಷದ ರಾಜಕೀಯ ಕಾರ್ಯಕರ್ತರು ನಗರದಲ್ಲಿ ಟಾಂಗಾಕೂಟ್ನಿಂದ ಗಾಂಧಿ ಸರ್ಕಲ್ವರೆಗೆ ಪ್ರತಿಭಟನೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ, ಪ್ರತಿಭಟನೆಯ ಸಂದರ್ಭದಲ್ಲಿ ರಾಜಕೀಯ ನಾಯಕರ ವಿರುದ್ಧ ವೈಯಕ್ತಿಕ ಹಾಗೂ ನಿಂದನಾತ್ಮಕ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.