ಸ್ವಾತಂತ್ರ್ಯದ ನಿಜಾರ್ಥ ಮತ್ತು ಪ್ರಜಾಪ್ರಭುತ್ವದ ಸವಾಲುಗಳ ಕುರಿತು ಉಪನ್ಯಾಸ
ಲೋಕದರ್ಶನ ವರದಿ
ಗದಗ, ಅ.01: ಸ್ವಾತಂತ್ರ್ಯವನ್ನು ಸಾರ್ಥಕವಾಗಿ ಬಳಸಿಕೊಂಡು ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕೆಎಲ್‌ಇ ಸಂಸ್ಥೆಯ ಮೃತ್ಯುಂಜಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಶಶಾಂಕ್ ಹಾದಿಮನಿ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸ್ವಾತಂತ್ರ್ಯದ ನಿಜಾರ್ಥ ಮತ್ತು ಪ್ರಸ್ತುತತೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯವನ್ನು ನಿಜವಾದ ಅರ್ಥದಲ್ಲಿ ಸಾಕಾರಗೊಳಿಸಲು ನಾವು ಆಯ್ದುಕೊಂಡಿರುವ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವವಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ತರುವಲ್ಲಿ ಪ್ರಜಾಪ್ರಭುತ್ವ ಉತ್ತಮ ವ್ಯವಸ್ಥೆ ಎಂಬ ಅಭಿಪ್ರಾಯ ತಜ್ಞರಲ್ಲಿದೆ. ಆದರೆ ದೇಶದಲ್ಲಿ ಪ್ರಜಾಪ್ರಭುತ್ವದ ಅನುಭವ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ಮೂರು ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಮೇಲಿನ ಜನರ ವಿಶ್ವಾಸ ಕ್ರಮೇಣ ಕುಸಿಯುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗ ಬಡವರ ಪರವಾಗಿರಬೇಕಾದ ಸಂದರ್ಭದಲ್ಲಿ ಭ್ರಷ್ಟಾಚಾರ ಹಾಗೂ ಆಡಳಿತಾತ್ಮಕ ಲೋಪಗಳ ಆರೋಪಗಳು ಕೇಳಿಬರುತ್ತಿವೆ. ಚುನಾವಣೆ ವ್ಯವಸ್ಥೆಯಿಂದ ಹಿಡಿದು ಸಂಸತ್ ಹಾಗೂ ಪಂಚಾಯಿತಿ ಮಟ್ಟದವರೆಗೆ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳ ಕುರಿತು ಚರ್ಚಿಸುವ ಅಗತ್ಯವನ್ನು ಹೆಚ್ಚಿಸಿದೆ ಎಂದರು.