ದೇಶವನ್ನು ಕೇವಲ ಮಾತಿನಲ್ಲೆ ಅಭಿವೃದ್ಧಿ ಮಾಡುತ್ತಿರುವ ರಾಜ್ಯ, ಕೇಂದ್ರ ಸರಕಾರಗಳು: ಬಿ.ವಿ.ಶಿವಯೋಗಿ
ಹಗರಿಬೊಮ್ಮನಹಳ್ಳಿ 04: ಪೆಟ್ರೋಲ್ ಸೇರಿದಂತೆ ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಜನ ಸಾಮಾನ್ಯರ ಜೀವನ ಅಸ್ತವ್ಯೆಸ್ತವಾಗುತ್ತಿದ್ದರು ಬಿಜೆಪಿ ಪಕ್ಷದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೇವಲ ಬಾಯಿ ಮಾತಿನಲ್ಲಿ ದೇಶವನ್ನು ಅಭಿವೃದ್ಧಿ ಮಾಡುತ್ತಾ ಭ್ರ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ಕಿಡಿಕಾರಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಸೋಮವಾರ ಕಾಂಗ್ರೆಸ್ನ ವಿವಿಧ ವರ್ಗಗಳ ಅಧ್ಯಕ್ಷರುಗಳಿಗೆ ಆದೇಶ ಪತ್ರ ವಿತರಿಸಿ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರ ದೇಶದ ಹಣವನ್ನು ಲೂಟಿ ಮಾಡುವುದರಲ್ಲಿ ತೊಡಗಿದೆ. ಇವರ ಆಡಳಿತ ಕಾಣುತ್ತಿದ್ದರೆ ಸಾಮಾಜಿಕ ನ್ಯಾಯವನ್ನು ಬದಿಗಿಟ್ಟು ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆ. ದಿನಬಳಕೆಯ ವಸ್ತುಗಳು ಸೇರಿ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರಿರುವುದರಿಂದ ಸಾಮಾನ್ಯ ಜನರ ಜೀವನ ಕ್ಲಿಷ್ಟಕರವಾಗಿದೆ. ಇವರ ಕೆಲಸ ಕೇವಲ ಮಸೀದಿ ಒಡೆದು ಮಂದಿರಗಳನ್ನು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದು ಜಾತಿ ಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ, ಸಿದ್ದರಾಮಯ್ಯನವರ ಆಧಿಕಾರ ಅವಧಿಯಲ್ಲಿ ಪ್ರತಿಯೊಂದು ಜಾತಿಯವರು ಫಲಾನುಭವಿಗಳಾಗಿದ್ದಾರೆ.ಕಾಂಗ್ರೆಸ್ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದು, 2023ರ ಅವಧಿಗೆ ಅಧಿಕಾರ ಹಿಡಿಯುವುದು ನಿಶ್ಚಿತ. ಈಗಾಗಲೇ ಕಾಂಗ್ರೆಸ್ ಪಕ್ಷ ವಿವಿಧ ಸೆಲ್ಗಳ ಅಧ್ಯಕ್ಷರುಗಳನ್ನು ಆಯ್ಕೆ ಮಾಡಿದ್ದು, ಪ್ರತಿಯೊಬ್ಬರು ಪಕ್ಷ ಸಂಘಟನೆ ನಿಟ್ಟಿನಲ್ಲಿ ಜವಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಶಾಸಕ ಎಸ್.ಭೀಮನಾಯ್ಕ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ದೋರಣೆ ವಿರುದ್ದ ಜುಲೈ 7ರಂದು ಜಿಲ್ಲೆಯಲ್ಲಿ ಸೈಕಲ್ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವ ಯು.ಟಿ.ಖಾದರ್, ಕೃಷ್ಣಬೈರೇಗೌಡ ಆಗಮಿಸಲಿದ್ದಾರೆ. ದಿ.8ರಂದು ತಾಲೂಕಿನಲ್ಲಿ ಸೈಕಲ್ ಜಾಥ ಹಮ್ಮಿಕೊಂಡಿದ್ದು ಬೃಹತ್ ಮಟ್ಟದಲ್ಲಿ ಸರಕಾರದ ವಿರುದ್ದ ಪ್ರತಿಭಟನೆ ಮಾಡಲಿದ್ದೇವೆ. ವೀಕ್ಷಕರಾಗಿ ಸಂತೋಷಲಾಡ್, ವಿಜಯ್ಸಿಂಗ್, ಮಂಜುನಾಥ ನೇತೃತ್ವ ವಹಿಸಲಿದ್ದಾರೆ. ಜಿ.ಪಂ., ತಾ.ಪಂ., ಮೀಸಲಾತಿಯಲ್ಲಿ ಸರಕಾರ ಸಾಮಾಜಿಕ ನ್ಯಾಯ ಮರೆತಿದೆ. ಸರಕಾರ ಚುನಾವಣಾ ಆಯೋಗದ ಮದ್ಯೆ ಪ್ರವೇಶಿಸಿ ರಾಜಕೀಯ ಹಿಡಿತ ಸಾಧಿಸಿದೆ. ಕ್ಷೇತ್ರದಲ್ಲಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡದೆ ವಾಲ್ಮೀಕಿ ಸಮುದಾಯಕ್ಕೆ ಸರಕಾರ ಅನ್ಯಾಯವೆಸಗಿದೆ ಎಂದು ತಿಳಿಸಿದರು.
ಇದೇವೇಳೆ ತಾಲೂಕಿನ ಪರಿಶಿಷ್ಟ ಜಾತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹೆಚ್.ಪ್ರಭಾಕರ, ಕೊಟ್ಟೂರು ತಾಲೂಕಿನ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಡಿ.ಮೂಗಪ್ಪ, ಪರಿಶಿಷ್ಟ ಜಾತಿಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಹೆಚ್.ಪರುಶುರಾಮಪ್ಪ, ಕೊಟ್ಟೂರು ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷರಾಗಿ ರವಿ, ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಎಸ್ಟಿ ಬ್ಲಾಕ್ ಅಧ್ಯಕ್ಷರಾಗಿ ಜಿ.ಸತೀಶಕುಮಾರ, ಹಗರಿಬೊಮ್ಮನಹಳ್ಳಿ ತಾಲೂಕು ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಚನ್ನಬಸಪ್ಪ ಹ್ಯಾಳ್ಯಾದ ಅವರನ್ನು ಆಯ್ಕೆ ಮಾಡಿ ಆದೇಶಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಅಕ್ಕಿ ತೋಟೇಶ, ಹೆಗ್ಡಾಳ್ ರಾಮಣ್ಣ, ಪುರಸಭೆ ಉಪಾಧ್ಯಕ್ಷ ಹುಳ್ಳಿ ಮಂಜುನಾಥ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ, ಕನ್ನಿಹಳ್ಳಿ ಚಂದ್ರಶೇಖರ, ದೇವೆಂದ್ರಪ್ಪಾ, ಅಲ್ಲಾಭಕ್ಷಿ, ಕಾಯಿಗಡ್ಡಿ ಕೊಟ್ರೇಶ, ಬಾಲಕೃಷ್ಣಬಾಬು ಇತರರಿದ್ದರು. ಕಾರ್ಯಕ್ರಮವನ್ನು ಮುಖಂಡ ಡಿಶ್ ಮಂಜುನಾಥ ನಿರೂಪಿಸಿದರು.