ಸಂಚಾರ ಸಮೀಕ್ಷೆ ಆರಂಭ: ಇನಾಮದಾರ ಪರೀಶೀಲನೆ
ತಾಳಿಕೋಟೆ24: ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ವಾಹನಗಳ ಸಂಚಾರ ಸಮೀಕ್ಷೆಯನ್ನು ಕೈಕೊಂಡಿದ್ದು ತಾಲೂಕಿನ ಒಟ್ಟು 7 ಸ್ಥಳಗಳಲ್ಲಿ ಸಮೀಕ್ಷಾ ಕಾರ್ಯ ಆರಂಭಿಸಲಾಗಿದೆ.
ಮೇಲ್ದರ್ಜೆಗೆ ಏರಿಸಲು, ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರ ಸಮೀಕ್ಷಾ ಕಾರ್ಯವನ್ನು ರಾಜ್ಯಾಧ್ಯಂತ ಲೋಕೋಪಯೋಗಿ ಇಲಾಖೆ ಆದೇಶದ ಹಿನ್ನಲೆಯಲ್ಲಿ ಸಮೀಕ್ಷಾ ಕಾರ್ಯ ಆರಂಭಿಸಲಾಗಿದೆ. ಫೆ.23ರಂದು ಬೆಳಗ್ಗೆ 6 ಗಂಟೆಯಿಂದ ಫೆ.25ರ ಬೆಳಗ್ಗೆ 6 ಗಂಟೆಯವರೆಗೆ ಎರಡು ದಿನಗಳ ರಸ್ತೆ ಸಂಚಾರ ಸಮೀಕ್ಷೆಯನ್ನು ನಡೆಯುತ್ತದೆ. 48 ಗಂಟೆಗಳ ಕಾಲ ಹಗಲು, ರಾತ್ರಿ ಪಾಳಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರಕಾರಕ್ಕೆ ರಸ್ತೆಗಳ ಸಂಚಾರ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯುವುದಕ್ಕೆ, ರಸ್ತೆಗಳ ಅಗಲ, ಅಳತೆ ನಿರ್ಧರಿಸಲು, ಮೇಲ್ದರ್ಜೆಗೆ ಏರಿಸಲು, ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ ಎಂದು ಲೋಕಪಯೋಗಿ ಇಲಾಖೆ ಸಹಾಯಕ ಇಂಜೀನೀಯರ ಡಿ.ಬಿ.ಕಲಬುರ್ಗಿ ತಿಳಿಸಿದರು.
ಸಮಿಕ್ಷಾ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯ ವಿಜಯಪುರ ವಿಭಾಗದ ತಾಂತ್ರಿಕ ಸಹಾಯಕ ಆರ್.ಎ.ಇನಾಮದಾರ, ಅಂಕಿ ಅಂಶ ವಿಭಾಗದ ಸಂತೋಷ ಪಾನಕ್ಕನವರ, ಎ.ಎಸ್.ಕಾಕಂಡಕಿ ಸೇರಿದಂತೆ ಹಿರಿಯ ಅಧಿಕಾರಿಗಳು ಪರೀಶೀಲನೆ ನಡೆಸಿದರು.