ಡೈನಾಮಿಕ್ ಪ್ರಿನ್ಸ್ ಚಿತ್ರದಲ್ಲಿ ನಟಿಸ್ತಾರಾ ಗೋವಿಂದ!
ಬೆಂಗಳೂರು/ಮುಂಬೈ, ಸೆ. 04 ಬಾಲಿವುಡ್ ಹಿರಿಯ ನಟ, ಆಲ್ ರೌಂಡರ್ ಗೋವಿಂದ ದಕ್ಷಿಣ ಚಿತ್ರರಂಗದ ಕಡೆ ಆಸಕ್ತಿ ತೋರಿದ್ದು, ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದದಿ ಕೇಳಿಬಂದಿದೆ.
ಹಿಂದಿ ಚಿತ್ರರಂಗದಲ್ಲಿ 1986ರಿಂದಲೂ ತೊಡಗಿಕೊಂಡಿರುವ ಗೋವಿಂದ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿರುವುದು ವಿಶೇಷವೆನಿಸಿಕೊಂಡಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಪ್ರಜ್ವಲ್ ದೇವರಾಜ್ ನೂತನ ಚಿತ್ರದ ನಿರ್ದೇಶಕ ಕಿರಣ್ ವಿಶ್ವನಾಥ್ ಹಾಗೂ ನಿರ್ಮಾಪಕ ನವೀನ್ ಗೋವಿಂದ ಅವರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ಸಹ ಮಾಡಿದ್ದಾರೆ. ಸ್ಕ್ರಿಪ್ಟ್ ಕೇಳಿ ಆಸಕ್ತಿ ತೋರಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ ಎಂದು ನಿರ್ದೇಶಕರು ಖಚಿತಪಡಿಸಿರುವುದಾಗಿ ವರದಿಯಾಗಿದೆ.
ಕಳೆದ ಹತ್ತು ವರ್ಷದಿಂದ ಗೋವಿಂದ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿದ್ದರೂ, ಕಿರುತೆರೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಡ್ಯಾನ್ಸ್ ಶೋ, ಸಿಂಗಿಂಗ್ ಶೋ, ಕಾಮಿಡಿ ಶೋ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ, ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಈ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.