ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವ: ನಾಳೆಯಿಂದ ವಿವಿಧ ಕಾರ್ಯಕ್ರಮ
ಮುಂಡರಗಿ 09: ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.11ರಿಂದ 14ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರಾ ಮಹೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸುಮಾರು 25ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರದೀಪಗೌಡ ಗುಡದಪ್ಪನವರ ತಿಳಿಸಿದರು.
ಪಟ್ಟಣದ ಶ್ರೀವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹದ ಕರಪತ್ರ ಹಾಗೂ ಆಮಂತ್ರಣ ಪತ್ರಿಕೆಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಡಿ.14ರಂದು ಮುಂಜಾನೆ 11ಗಂಟೆಗೆ 41ಜೋಡಿ ಉಚಿತ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿದೆ. ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮಿಜಿ ಹಾಗೂ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ ಅವರು ಸಮಾರಂಭದ ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಸಂಗಪ್ಪ ಲಿಂಬಿಕಾಯಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ವೀರಭದ್ರೇಶ್ವರ ದೇಸ್ಥಾನದ ನೂತನ ಗೋಪುರ ಪೂರ್ಣಗೊಂಡಿದ್ದು, ಪಟ್ಟಣದ ಮೃತ್ಯುಂಜಯ ವೀರಭದ್ರ್ಪ ಬಣಗಾರ ಅವರು 40ಸಾವಿರ ರೂಪಾಯಿ ಮೌಲ್ಯದ ನೂತನ ಕಳಸವನ್ನು ದೇಣಿಗೆ ನೀಡಿದ್ದಾರೆ. ಡಿ.11ರಂದು ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಳಸದ ಮೆರವಣಿಗೆ ನಡೆಯಲಿದ್ದು, ಡಿ.13ರಂದು ಮುಂಜಾನೆ 9ಗಂಟೆಗೆ ಕಳಸಾರೋಹಣ ನೆರವೇರಲಿದೆ ಎಂದು ತಿಳಿಸಿದರು.
ಶ್ರೀವೀರಭದ್ರೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ಲಿಂಬಿಕಾಯಿ ಮಾತನಾಡಿ, ಪ್ರಸ್ತುತ ವರ್ಷದಿಂದ ಶ್ರೀವೀರಭದ್ರೇಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಲು ಉದ್ದೇಶಿಸಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಟ್ಟಣದ ಪಿ.ಗಂಗಾಧರಸ್ವಾಮಿ ಅವರಿಗೆ ಈ ವರ್ಷ ಪುರಸ್ಕಾರ ನೀಡಲಾಗುವುದು. ಗೋಪುರ ನಿರ್ಮಾಣ ಹಾಗೂ ಜಾತ್ರಾ ಮಹೋತ್ಸವಕ್ಕೆ ನೆರವು ಹಾಗೂ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ವೀರಭದ್ರೇಶ್ವರ ಸೇವಾ ಸಮಿತಿ ಹಾಗೂ ಗದುಗಿನ ಅಂಬಿಕಾ ರಕ್ತನಿಧಿ ಸಂಸ್ಥೆಗಳ ಸಹಯೋಗದಲ್ಲಿ ಡಿ.13 ಹಾಗೂ 14ರಂದು ಉಚಿತ ರಕ್ತದಾನ ಹಾಗೂ ಉಚಿತ ರಕ್ತತಪಾಸಣಾ ಶಿಬಿರನ್ನು ಹಮ್ಮಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಜನಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ವೀರಭದ್ರೇಶ್ವರ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರಭಾವತಿ ಕುಸದ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವು ಡಿ.14ರಂದು ಸಂಜೆ 7ಗಂಟೆಗೆ ದೀಪೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಸ್.ಪಿ.ಕೊಪ್ಪಳ, ಕಾಶೀನಾಥ ಸಿರಬಡಗಿ, ಮಂಜುನಾಥ ಕಾಸಿಗವಿ, ಈರಣ್ಣ ಕರ್ಜಗಿ, ದೀಪಾ ಗುಗ್ಗರಿ, ಲತಾ ಲಿಂಬಿಕಾಯಿ, ರೇಖಾ ಹುಲ್ಲೂರ, ಅಂದಪ್ಪ ಗೋಡಿ, ಮುತ್ತಣ್ಣ ಬಣಕಾರ, ಶರಣಪ್ಪ ಕುಬಸದ, ವೀರಣ್ಣ ಕಾಸಿಗವಿ, ಅಜ್ಜಪ್ಪ ಲಿಂಬಿಕಾಯಿ, ಅಮೃತಾ ಲಿಂಬಿಕಾಯಿ, ಲತಾ ಕಡ್ಡಿ, ಅಂದಪ್ಪ ಕುರಡಗಿ, ಕಲ್ಪನಾ ಕಡ್ಡಿ, ರವೀಂದ್ರಗೌಡ ಪಾಟೀಲ ಇದ್ದರು.