ಕ್ರೀಡೆಯಿಂದ ಮಾನಸಿಕ ಸ್ಥೈರ್ಯ, ನಾಯಕತ್ವ ಬೆಳೆಸಬಹುದು
ಯರಗಟ್ಟಿ 23: ಕ್ರೀಡೆಯಿಂದ ಮಾನಸಿಕ ಸ್ಥೈರ್ಯ, ಸಮಯ ಪ್ರಜ್ಞೆ ಹಾಗೂ ತಂಡದೊಂದಿಗೆ ಕೆಲಸ ಮಾಡುವ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸಮೀಪದ ತಲ್ಲೂರು ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ತ ಗಣೇಶ ಗುಡಿ ಗಜಾನನ ಸಮಿತಿ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾತಿ, ಮತ, ಧರ್ಮದ ಭೇದ ಮರೆತು ಎಲ್ಲರನ್ನು ಒಗ್ಗೂಡಿಸುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು. ಶಾಲಾ ಆವರಣದಲ್ಲಿ ಶೀಘ್ರದಲ್ಲೇ ಹೈಮಾಸ್ಟ್ ದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು. ಯುವ ಮುಖಂಡ ಶ್ರೇಯಸ್ ಮಾಮನಿ ಮಾತನಾಡಿ, ಯುವಜನರಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ, ಅದರಿಂದಾಗುವ ದುಷ್ಪರಿಣಾಮಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ವಿಶ್ವಾಸ ವೈದ್ಯ ಹಾಗೂ ಶ್ರೇಯಸ್ ಮಾಮನಿ ಅವರನ್ನು ಗ್ರಾಮಸ್ಥರು ಮತ್ತು ಸಮಿತಿ ಸದಸ್ಯರು ಸನ್ಮಾನಿಸಿದರು. ಪಂದ್ಯಾವಳಿಗೆ ದೀಪಕಸ್ವಾಮಿ, ವೇದಮೂರ್ತಿ ಪ್ರಸನ್ನ ಶಾಸ್ತ್ರಿ ಹಾಗೂ ಭಾವಾಸಾಹೇಬ ತೇಕೆದ ಸಾನ್ನಿಧ್ಯ ವಹಿಸಿದ್ದರು. ಹಲವು ಗಣ್ಯರು, ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.