ಮಳಿಮಲ್ಲೇಶ್ವರ ಪಿಕೆಪಿಎಸ್ಗೆ 5.20 ಲಕ್ಷ ನಿವ್ವಳ ಲಾಭ
ಲೋಕದರ್ಶನ ವರದಿ
ಯರಗಟ್ಟಿ, ಸೆ.25: ಸಮೀಪದ ಸತ್ತಿಗೇರಿ ಗ್ರಾಮದ ಮಳಿಮಲ್ಲೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 5.20 ಲಕ್ಷ ನಿವ್ವಳ ಲಾಭ ಗಳಿಸಿದ್ದು, ರೈತಪರ ಚಟುವಟಿಕೆಗಳಿಗೆ ಸ್ಪಂದಿಸಿ ಉತ್ತಮ ಹಣಕಾಸಿನ ವಹಿವಾಟು ನಡೆಸುತ್ತಾ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಮಹಾಂತೇಶ ಗೋಡಿ ತಿಳಿಸಿದರು.
ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರಗಾಲ ಘೋಷಣೆ ಹಿನ್ನೆಲೆಯಲ್ಲಿ ಬ್ಯಾಂಕ್ ನಿರ್ದೇಶನದಂತೆ ರೈತರಿಗೆ ಶೇ.40ರಿಂದ 50ರವರೆಗೆ ಹೆಚ್ಚುವರಿ ಸಾಲ ಸೌಲಭ್ಯ ಹಾಗೂ ಹೈನುಗಾರಿಕೆ ಸಾಲ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮುಖ್ಯ ಕಾರ್ಯನಿರ್ವಾಹಕ ಸಂಗಮೇಶ ಸಂಗಪ್ಪನವರ ವಾರ್ಷಿಕ ವರದಿ ವಾಚಿಸಿದರು. ಸಂಘದ ದುಡಿಯುವ ಬಂಡವಾಳ 4.15 ಕೋಟಿ, ಷೇರು ಬಂಡವಾಳ 49.50 ಲಕ್ಷ ಇದ್ದು, ಒಟ್ಟು 415 ಸದಸ್ಯರಿಗೆ 3.37 ಕೋಟಿ ಸಾಲ ನೀಡಲಾಗಿದೆ. ಸಂಘದಲ್ಲಿ 691 ಷೇರುದಾರರಿದ್ದು, ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಬಂಗಾರ್ಪ ಈ. ಹರಳಿ, ಲಕ್ಷ್ಮಪ್ಪ ಹೆಗಡಿ, ಶ್ರೀಶೈಲ ಸವದತ್ತಿ, ಗುರುಪಾದ ಗೋಡಿ, ಇಬ್ರಾಹಿಂಸಾಬ ಮುಲ್ಲಾ, ಬಸಪ್ಪ ಮುನ್ಯಾಳ, ಈರಣ್ಣ ವಾಲಿ, ಗುರುಪಾದಪ್ಪ ಪಾಟೀಲ, ಷಣ್ಮುಖ ಬಿಳಿಗಾರ, ನಿಂಗಪ್ಪ ತುರಮಂದಿ, ದುರ್ಗಪ್ಪ ಬಂಡಿವಡ್ಡರ ಸೇರಿದಂತೆ ಸಂಘದ ಸಿಬ್ಬಂದಿ, ರೈತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.