ಬೆಳಗಾವಿ

ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹ

ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಅಂಗೀಕಾರಕ್ಕೆ ಆಗ್ರಹ

ಲೋಕದರ್ಶನ ವರದಿ

ಹೋರಾಟ ೧೦೦ನೇ ದಿನಕ್ಕೆ, ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ 

ಬೆಳಗಾವಿ ೨೬: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಹಾಗೂ "ಗಡಿವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಂತಿಮ" ಎಂಬ ಕರ್ನಾಟಕ ಪರ ಗೊತ್ತುವಳಿಯನ್ನು ಅಂಗೀಕರಿಸಬೇಕೆAದು ಆಗ್ರಹಿಸಿ ಕನ್ನಡ ಸಂಘಟನೆಗಳು ನಡೆಸುತ್ತಿರುವ ಹೋರಾಟ ಶುಕ್ರವಾರ ೧೦೦ನೇ ದಿನಕ್ಕೆ ಕಾಲಿಟ್ಟಿತು. 

ಈ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳ ಮುಖಂಡರು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ೧೦೧ ಈಡುಗಾಯಿಗಳನ್ನು ಒಡೆಯುವ ಮೂಲಕ ಮಹಾಪೌರರು ಮತ್ತು ಉಪ ಮಹಾಪೌರರಿಗೆ ಸದ್ಬುದ್ಧಿ ನೀಡುವಂತೆ ವಿಘ್ನೇಶ್ವರನಲ್ಲಿ ಪ್ರಾರ್ಥಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಗಡಿವಿವಾದಕ್ಕೆ ಮಹಾಜನ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಪಾಲಿಕೆಯಲ್ಲಿ ಅಂಗೀಕರಿಸುವವರೆಗೆ ಕನ್ನಡ ಸಂಘಟನೆಗಳ ಹೋರಾಟ ನಿಲ್ಲುವುದಿಲ್ಲ. ಬಿಜೆಪಿ ನಾಯಕರು ಗಡಿಭಾಗದ ಕನ್ನಡಿಗರ ಭಾವನೆಗಳನ್ನು ಗೌರವಿಸಿ ಕೂಡಲೇ ಗೊತ್ತುವಳಿ ಅಂಗೀಕರಿಸಬೇಕು" ಎಂದು ಆಗ್ರಹಿಸಿದರು. 

ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಮಾತನಾಡಿ, "ಗೊತ್ತುವಳಿ ಅಂಗೀಕರಿಸದಿದ್ದರೆ ಕನ್ನಡ ಸಂಘಟನೆಗಳ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ" ಎಂದು ಎಚ್ಚರಿಕೆ ನೀಡಿದರು. 

ಈ ಪೂಜಾ ಕಾರ್ಯಕ್ರಮದಲ್ಲಿ ಕನ್ನಡ ಸಂಘಟನೆಗಳ ಮುಖಂಡರಾದ ವಾಜಿದ್ ಹಿರೆಕೋಡಿ, ಬಲರಾಮ ಮಾಸೇನಟ್ಟಿ, ಶ್ರೀನಿವಾಸ ತಾಳುಕರ, ಮೈನು ಮಕಾನದಾರ, ಮಹೇಶ ಶೀಗಿಹಳ್ಳಿ, ಬಾಳಪ್ಪ ಗುಡಗೇನಟ್ಟಿ, ಮಲ್ಲಪ್ಪ ಗುಡಗೇನಟ್ಟಿ, ಸಿದ್ದಲಿಂಗಪ್ಪ ಸುಣಕುಪ್ಪಿ, ಶರೀಫ್ ಸನದಿ, ಸಂತೋಷ ತಳ್ಳಿಮನಿ, ಶಿವಾಜಿ ಗುರವ, ಸಂತೋಷ ಮಾಸೇನಟ್ಟಿ, ಆನಂದ ಬಿಲಾವರ, ರಾಜು ಕೋಲಾ, ಸರ್ವಮಂಗಳ ಅರಳಿಮಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸುದ್ದಿ ಓದಿ