ವಿವಿಧ ಜ್ವಲಂತ ಸಮಸ್ಯೆಗಳಿಗೆ ಪರಿಹಾರ
ಮುಂಡಗೋಡ 20: ತಾಲೂಕಿನ ನಂದಿಕಟ್ಟಾ ಗ್ರಾ.ಪಂ ವ್ಯಾಪ್ತಿಯ ಹುಲಿಹೊಂಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಎರಡನೇಯ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕೆರೆ ಅತಿಕ್ರಮಣ ತೆರವು, ಆರೋಗ್ಯ ತಪಾಸಣೆ, ಕೋವಿಡ್ ಲಸಿಕೆ, ಗಿಡ ನೆಡುವುದು, ಪರಿಶಿಷ್ಟ ಕಾಲನಿಗೆ ಬೇಟಿ ಹಾಗೂ ಸಾರ್ವಜನಿಕರಿಂದ ವಿವಿದ ಜ್ವಲಂತ ಸಮಸ್ಯೆ ಪರಿಹಾರ ಕುರಿತು ಅಹವಾಲು ಸ್ವೀಕರಿಸುವುದು ಸೇರಿದಂತೆ ಹಲವು ವರ್ಷಗಳಿಂದ ಪರಿಹಾರವಾಗದ ಕೆಲ ಸಮಸ್ಯೆಗೆ ಒಂದೇ ದಿನದಲ್ಲಿ ಪರಿಹಾರ ದೊರೆಯಿತು.
ಮುಂಡಗೋಡ ತಹಸೀಲ್ದಾರ ಶ್ರೀಧರ ಮುಂದಲಮನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ವಾಸ್ತವ್ಯದಲ್ಲಿ ಗ್ರಾಮದ ಸುತ್ತಮುತ್ತ ಪ್ರದೇಶದ ಬಿಪಿ, ಶುಗರ್ ರೋಗಿಗಳು ಹಾಗೂ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಸುತ್ತಮುತ್ತ ಪ್ರದೇಶದ ರೈತರ ಭೂಮಿಯಲ್ಲಿ ಸಸಿ ನೆಡಸಲಾಯಿತು. ಬಳಿಕ ಪರಿಶಿಷ್ಟ ಕಾಲನಿಗಳಿಗೆ ಬೇಟಿ ನೀಡಿ ಕುಂದು ಕೊರತೆಗಳನ್ನು ಆಲಿಸಲಾಯಿತು.
ಕೆರೆ ಅತಿಕ್ರಮಣ ತೆರವು, ಕಾಲುವೆ ನಿರ್ಮಾಣ: ಹುಲಿಹೊಂಡ ಗ್ರಾಮದ ಸುತ್ತಮುತ್ತಲಿನ ಕೆಲವು ಕರೆಗಳು ಒತ್ತುವರಿಯಾಗಿರುವ ಬಗ್ಗೆ ಸಾರ್ವಜನಿಕರ ಹಾಗೂ ರೈತರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾವಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಕೆರೆಯಲ್ಲಿ ಅತಿಕ್ರಮಣವಾಗಿದ್ದ ಭೂಮಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಿರಲ್ಲದೇ, ರೈತರ ಅನುಕೂಲಕ್ಕಾಗಿ ಕಾಲುವೆ ನಿರ್ಮಾಣ ಮಾಡಿಕೊಡಲಾಯಿತು. ಇದರಿಂದ ರೈತರು ಸಾರ್ವಜನಿಕರಿಗೆ ಸಿಹಿಯಾದರೆ ಹಲವು ವರ್ಷಗಳಿಂದ ಅತಿಕ್ರಮಣ ಮಡಿಕೊಂಡು ಉಳುಮೆ ಮಾಡುತ್ತ ಬಂದವರಿಗೆ ಕಹಿಯಾಗಿದೆ.
ಕಂದಾಯ ಗ್ರಾಮಕ್ಕೆ ಆಗ್ರಹ: ಕೆಂದಲಗೇರಿ ಮಜರೆಯನ್ನು ತಕ್ಷಣ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಬೇಕೆಂದು ಆಗ್ರಹಿಸಿ ಸಾರ್ವಜನಿಕರು ಮನವಿ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ ಮುಂದಲಮನಿ ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಪ್ರಸ್ಥಾವನೆ ಇದ್ದು, ಶೀಗ್ರದಲ್ಲಿ ಕಾರ್ಯಗತಗೊಳಿಸುವ ಕ್ರಮ ಕೈಗೊಳ್ಳಲಾಗುವುದೆಂದು ಬರವಸೆ ನೀಡಿದರು.
ಮತಗಟ್ಟೆ ತೆರೆಯಲು ಮನವಿ: ಬಸಾಪುರ ಗ್ರಾಮಸ್ಥರು ದೂರದ ನಂದಿಕಟ್ಟಾ ಗ್ರಾಮಕ್ಕೆ ತೆರಳಿ ಮತ ಚಲಾಯಿಸಬೇಕಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಹಾಗಾಗಿ ಬಸಾಪುರ ಗ್ರಾಮಕ್ಕೆ ಪ್ರತ್ಯೇಕ ಮತಗಟ್ಟೆ ತೆರೆಯಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಹುಲಿಹೊಂಡ ಗ್ರಾಮಕ್ಕೆ ಪಡಿತರ ನ್ಯಾಯ ಬೆಲೆ ಅಂಗಡಿ ತೆರೆದು ಸ್ಥಳಿಯವಾಗಿ ಪಡಿತರ ಸಿಗುವ ವ್ಯವಸ್ಥೆ ಮಾಡಿಕೊಡುವಂತೆ ಹುಲಹೊಂಡ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕೋವಿಡ್ ಲಸಿಕೆ: ಸುತ್ತಮುತ್ತಲಿನ ಗ್ರಾಮದಿಂದ ಸುಮಾರು 40 ಕ್ಕೂ ಅಧಿಕ ಜನರನ್ನು ಟಿಬೇಟಿಯನ್ ಕಾಲನಿ ವಾಹನಗಳ ಸಹಾಯದಿಂದ ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಕೋವಿಡ್ ಲಸಿಕೆ ಹಾಕಲಾಯಿತು.
ವೃದ್ದಾಪ್ಯ, ಸಂದ್ಯಾ ಸುರಕ್ಷಾ, ವಿದವಾ ವೇತನ ಸೇರಿದಂತೆ ವಿವಿದ ಯೋಜನೆಯಡಿಯಲ್ಲಿ ಮಾಶಾಸನ ಮಂಜೂರಿ ಮಾಡುವ ಕುರಿತು ಹಾಗೂ ರಸ್ತೆ ನಿರ್ಮಾಣ, ಆಶ್ರಯ ಮನೆ ಮಂಜೂರಿ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಮಂಜೂರಿ ಮಾಡಿಕೊಡುವಂತೆ ಸಂಜೆವರೆಗೆ ಸುಮಾರು 32 ಅರ್ಜಿಗಳು ಸ್ವೀಕೃತಿಯಾಗಿದ್ದು, ಅದರಲ್ಲಿ ಅರ್ಧದಷ್ಟು ಸ್ಥಳದಲ್ಲಿಯೇ ಪರಿಹಾರವಾದರೆ ಉಳಿದ ಸಮಸ್ಯೆಗಳನ್ನು ಕಾನೂನು ರೀತಿಯಲ್ಲಿ ಹಂತ ಹಂತವಾಗಿ ಪರಿಹರಿಸುವ ಬರವಸೆ ನೀಡಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.