ಪರವಾನಗಿ ಇಲ್ಲದೆ ಮಣ್ಣು ಸಾಗಣೆ: ಕ್ರಮ ವಹಿಸದ ಅಧಿಕಾರಿಗಳು
ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ಜೆಸಿಬಿ ಮೂಲಕಅಪಾರ ಪ್ರಮಾಣದಲ್ಲಿ ಮಣ್ಣು ಅಗೆದು ನೂರಾರು ಟ್ರ್ಯಕ್ಟರ್ ಗಳಲ್ಲಿ ಸಾಗಣೆ ನಡೆಸಿದರೂ ಸಂಬಂಧಿಸಿದ ಇಲಾಖೆಯವರು ಮಾತ್ರ ಕ್ರಮ ವಹಿಸದೆ ಜಾಣ ಕುರುಡರಂತೆ ವರ್ತಿಸುತ್ತಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿದೆ.
ಸ್ಥಳೀಯರು, ಅಕ್ಕ-ಪಕ್ಕದವರು ಪ್ರತಿನಿತ್ಯ ಮಣ್ಣು ಅಗೆದು ತೋಟ, ಇಟ್ಟಿಗೆ ತಯಾರಿಕೆಗೆ ಹಾಗೂ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಆದರೆ ಅರಣ್ಯ ಇಲಾಖೆಯವರು ಮಾತ್ರ ತಮಗೇನೂ ಗೊತ್ತಿಲ್ಲ ಎಂಬಂತೆ ಮೌನವಾಗಿದ್ದಾರೆ. ಗಸ್ತು ತಿರುಗಬೇಕಾದ ಅರಣ್ಯ ಸಿಬ್ಬಂದಿ ಮನೆಯಲ್ಲಿಯೇ ಕುಳಿತು ಸಂಬಳ ಪಡೆಯುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಮಾಲ್ಕಿ ಜಮೀನಿನಲ್ಲಿ ಮಣ್ಣು ಅಗೆಯುತ್ತಿದ್ದಾರೆ ಎನ್ನುವ ಇವರಿಗೆ ಅದಕ್ಕೂ ಕಂದಾಯ ಇಲಾಖೆ ಪರವಾನಗಿ ಅವಶ್ಯಕ ಎಂಬುದು ಗೊತ್ತಿರಬೇಕು. ಇಟ್ಟಿಗೆ ತಯಾರಿಕೆಗೆ ಅಕ್ರಮ ಮಣ್ಣು ಬಳಕೆ:ಸಾಕಷ್ಟು ಲಾಭದಾಯಕವಾಗಿರುವ ಇಟ್ಟಿಗೆ ತಯಾರಿಕೆ ತಾಲೂಕಿನಲ್ಲಿ ಹಾಗೂ ಸನವಳ್ಳಿಯಲ್ಲಿ ವ್ಯಾಪಕವಾಗಿ ನಡೆದಿದ್ದು ಶೇ.90ರಷ್ಟು ಮಾಲೀಕರು ಅನಧಿಕೃತವಾಗಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಇಟ್ಟಿಗೆ ತಯಾರಿಸುವಲ್ಲಿ ನಿರತರಾಗಿದ್ದಾರೆ.
ಸುಮಾರು 15 ವರ್ಷಗಳಿಂದ ತಾಲೂಕಿನ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಇಟ್ಟಿಗೆ ತಯಾರಿಕೆ ನಡೆಯುತ್ತಿದ್ದು ಅನಧಿಕೃತವಾಗಿ ಇಟ್ಟಿಗೆ ತಯಾರಿಸುವುದರಿಂದ ಪ್ರತಿ ವರ್ಷ ಸರ್ಕಾರಕ್ಕೆ ಲಕ್ಷಾಂತರ ರೂ. ತೆರಿಗೆ ವಂಚನೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕೃಷಿಗಾಗಿ ಬಳಸಬೇಕಿದ್ದ ಭೂಮಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಟ್ಟಿಗೆ ತಯಾರಿಸಲಾಗುತ್ತಿದೆ. ಕೃಷಿ ಭೂಮಿಯ ಮಣ್ಣು ಅಗೆದು ಅಲ್ಲಿಯೇ ಇಟ್ಟಿಗೆ ತಯಾರಿಸಿ ಮಾರಾಟ ಮಾಡಲಾಗುತ್ತದೆ. ತಾಲೂಕಿನಲ್ಲಿ ತಯಾರಾಗುವ ಇಟ್ಟಿಗೆಗಳನ್ನು ಅಕ್ರಮವಾಗಿ ಪಕ್ಕದ ಧಾರವಾಡ, ಹಾವೇರಿ ಹಾಗೂ ಇನ್ನೂ ಅನೇಕ ಕಡೆಗಳಿಗೆ ಕಳುಹಿಸಲಾಗುತ್ತದೆ. ಕೃಷಿ ಭೂಮಿ ಬೇಸಿಗೆ ಬೆಳೆ ಬೆಳೆಯುವ ಬದಲಾಗಿ ಅನಧಿಕೃತವಾಗಿ ಇಟ್ಟಿಗೆ ತಯಾರಿಕೆಗೆ ಬಳಕೆಯಾಗುತ್ತಿರುವುದು ಕಾನೂನು ಬಾಹಿರವಾಗಿದ್ದರೂ ಕ್ರಮ ಜರುಗಿಸುತ್ತಿಲ್ಲ. ಬಹುತೇಕ ಗ್ರಾಮಗಳಲ್ಲಿ ಅನಧಿಕೃತ ಇಟ್ಟಿಗೆ ಭಟ್ಟಿಗಳಲ್ಲಿ ಪ್ರತಿ ವರ್ಷ ತಪ್ಪದೆ ಇಟ್ಟಿಗೆ ತಯಾರಿಕೆ ನಡೆಯುತ್ತದೆ. ಅನಧಿಕೃತ ಇಟ್ಟಿಗೆ ತಯಾರಕರು ಸ್ವಂತ ಮನೆ ನಿರ್ಮಾಣಕ್ಕೆಂದು ಪ್ರತಿ ವರ್ಷ ಕಂದಾಯ ಇಲಾಖೆಗೆ ತಪ್ಪು ಮಾಹಿತಿ ನೀಡಿ ಅನಧಿಕೃತ ಇಟ್ಟಿಗೆ ತಯಾರಿಸುತ್ತಿರುವುದು ಕಂಡು ಬರುತ್ತಿದೆ. ನಾವು ಸರ್ಕಾರದ ಪರವಾನಗಿ ಪಡೆದು ಇಟ್ಟಿಗೆ ತಯಾರಿಸುತ್ತಿದ್ದೇವೆ. ಆದರೆ ಅನಧಿಕೃತವಾಗಿ ಇಟ್ಟಿಗೆ ತಯಾರಿಸುತ್ತಿರುವುದರಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಈ ಕುರಿತು ಪರೀಶೀಲಿಸಿ ಕಾನೂನು ಕ್ರಮ ಜರುಗಿಸುವುದು ಅವಶ್ಯವಿದೆ ಎಂಬ ಮಾತು ತಾಲೂಕಿನಲ್ಲಿರುವ ಕೆಲವು ಅಧಿಕೃತ ಇಟ್ಟಿಗೆ ತಯಾರಕರಿಂದ ಕೇಳಿ ಬರುತ್ತಿದೆ. ಸುರೇಶ ಕುಳ್ಳೊಳ್ಳಿ, ವಲಯ ಅರಣ್ಯಾಧಿಕಾರಿ:ಈ ಬಗ್ಗೆ ಮಾಹಿತಿ ಇಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಲಾಗುವುದು.