ಲೇಖನಗಳು

ಆರತಿ ಎಚ್‌.ಎನ್ ಅವರ ಸ್ಮೋಕಿಗ್ ಝೇನ್‌-ಮಹಿಳೆಯ ತಣ್ಣನೆಯ ಪ್ರತಿರೋಧ

ಆರತಿ ಎಚ್‌.ಎನ್ ಅವರ ಸ್ಮೋಕಿಗ್ ಝೇನ್‌-ಮಹಿಳೆಯ ತಣ್ಣನೆಯ ಪ್ರತಿರೋಧ

ಮಹಿಳಾ ಕಾವ್ಯ  ತಗೆದುಕೊಳ್ಳುತ್ತಿರುವ ಹೊಸ ಹೊಸ ವಸ್ತು ಅಚ್ಚರಿ ಮೂಡಿಸುವಂಥದು. ಮಹಿಳೆ ಸಮಾಜದ ಎಲ್ಲ ಮುಖಗಳಿಗೆ ತನ್ನನ್ನು ತಾನು ಫೋಕಸೈಜ್ ಮಾಡಿಕೊಂಡಂತೆ ಅವಳ ಕಾವ್ಯವೂ ವಿಸ್ತೃತಗೊಳ್ಳುತ್ತಿದೆ. ಅಕೆಯ ಬದುಕಿನ ಅನುಭವಗಳು ಕಾವ್ಯವಾಗಿ ಮೈಪಡೆದುಕೊಳ್ಳುತ್ತಿರುವ ರೀತಿ ಅಚ್ಚರಿ ಹುಟ್ಟಿಸುವಂಥದು.   

ಕನ್ನಡದ ಪ್ರಮುಖ ಕವಿಯಿತ್ರಿ ಆರತಿ .ಎಚ್‌. ಎನ್‌. ಅವರು ದೂರದರ್ಶನ ದಲ್ಲಿ ಎಲ್ಲರಿಗೂ ಪರಿಚಿತರು . ಎರಡುವರೆ ಸಾವಿರಕ್ಕೂ ‘ಹೆಚ್ಚು ಥಟ್ ಅಂತ ಹೇಳಿ’ ಕಾರ್ಯಕ್ರಮ ಸಂಚಿಕೆಗಳನ್ನು ರೂಪಿಸಿದವರು. ಒಂದಲ್ಲ ಹತ್ತಾರು ದೇಶಗಳನ್ನು ಸುತ್ತಿ ಕವಿತೆಗಳನ್ನು ಓದಿದ ಆಧುನಿಕ ತಲೆಮಾರಿನ ಬಹುಮುಖ್ಯ ಕವಿಯಿತ್ರಿ,..  

ಈ ಮೊದಲು ಎರಡು ಕವನ ಸಂಕಲನಗಳನ್ನು ತಂದು ಹತ್ತು ವರ್ಷಗಳ ಕಾಲ ಮೌನವಾಗಿದ್ದ ಅವರು ಈ ನಡುವೆ ಪ್ರಣಯ ಶತಕ ಎಂಬ ಅನುವಾದ ಕಾವ್ಯ ತಂದರು. ಬೆಟ್ಟದಡಿಯ ಹೂ ಎಂಬ ಪ್ರವಾಸಿ ಕಥನ ತಂದರು. 2018 ರಲ್ಲಿ ತಮ್ಮ ಮೂರನೆಯ ಸಂಕಲನ ‘ಸ್ಮೋಕಿಂಗ್ ಝೇನ್‌’ ಎಂಬ ಹೆಸರಿನ ಕವಿತೆಗಳನ್ನು ನಮಗೆ ನೀಡಿದ್ದಾರೆ. ಕಳೆದ ಮೂರುವರೆ ದಶಕಗಳಿಂದ ಕಾವ್ಯ ಬರೆಯುತ್ತಿದ್ದರೂ ಅವರ ಕವನ ಸಂಕಲನಗಳು ಬಂದದ್ದು ಮೂರೇ ಮೂರೇ ಎಂಬುದನ್ನು ನೆನೆದಾಗ ಅವರ ಸಂಯಮ ಅರ್ಥವಾಗುತ್ತದೆ.   

ಹಿರಿಯ ಸಂಶೋಧಕರಾದ ಡಾ ಹಂಪನಾ ಮತ್ತು ಡಾ.ಕಮಲಾ ಹಂಪನಾ ರವರ ಮಗಳಾದ ಆರತಿಯವರು ದೂರದರ್ಶನದ ಕಾರ್ಯಕ್ರಮ ಸಂಯೋಜಕರಾಗಿ ಹೆಸರಾದವರು.    ಸಾಹಿತ್ಯದ ಒಲವು ಇದ್ದ ಅವರ ಮೊದಲ ಕವನ ಸಂಕಲನ ಓಕುಳಿ, ನಂತರ ಬಾ ಹೇಳಿ ಕಳಿಸೋಣ ಮತ್ತು ಮೂರನೆಯ ಕವನ ಸಂಕಲನ ಸ್ಮೋಕಿಂಗ್ ಝೇನ್ ಪ್ರಕಟಿಸಿದ್ದಾರೆ.  ಅವರ ಕವಿತೆಗಳು ಇಂಗ್ಲೀಷ್ , ಸ್ಲೋವೆನಿಯನ್ ಭಾಷೆಗಳಿಗೆ ಅನುವಾದಗೊಂಡಿವೆ.   

     ಕಾಲ, ದೇಶ ಯಾವುದೇ ಇರಲಿ, ಮಹಿಳೆಯ ಬದುಕಿಗೆ ಭಾರವಾಗುವ ಅನೇಕ ಸಂಗತಿಗಳು ಬೇಕಾದಷ್ಟಿವೆ ಎನ್ನುವದು ಆರತಿಯವರ ಅಹವಾಲು.ತುಟಿ ಕಚ್ಚಿ ಹಿಡಿದು ಅದನ್ನು ಒಪ್ಪಿಕೊಳ್ಳುವದು ಆಧುನಿಕ ಮಹಿಳೆಯಿಂದ ಸಾಧ್ಯವಿಲ್ಲ. ಗಂಡ ಕುಟುಂಬ ಇವನ್ನೆಲ್ಲ ಅವಳೂ ಒಪ್ಪಿದವಳೇ. ಆದರೂ ಒಮ್ಮೊಮ್ಮೆ ಈ ಎಲ್ಲವುಗಳಿಂದ ಕೊಸರಿಕೊಂಡು ಎದ್ದು ಹೋಗಬೇಕೆನ್ನಿಸುವದು ಅವಳಿಗೆನ್ನಿಸುವ ಭಾವ. ಈ ಸಮಾಜ ಅವಳನ್ನು ಕಟ್ಟಿ ಹಾಕಿರುವ ರೀತಿಯ ಬಗ್ಗೆ ಅವಳಿಗೆ ಆಕ್ರೋಶವಿದೆ. ಮೊದಲ ಕವಿತೆ ‘ಹೊರಡಬೇಕಿದೆ ಎಲ್ಲ ಬಿಟ್ಟು’ ಎಂಬುದನ್ನೇ ನೋಡಿದರೂ ಅರತಿಯವರ ಕವಿತೆಯ ಜಾಡು ಅರ್ಥವಾಗುತ್ತದೆ. ತನ್ನ ಸ್ಥಿತಿಯನ್ನು ಕವಿತೆಯ ನಾಯಕಿ  

ಹೊತ್ತು ತಂದ ಪೆಟ್ಟಿಗೆಯಲ್ಲಿರುವುದೇನೂ  

ಕಡಿಮೆಯಲ್ಲ ಕಠೋರಭಾರ   

ಹಸಿರುಬಳೆ ತುಂಡಾಗದೇ  

ಚೂರುಚೂರಾಗಿ ಒಡೆದ ಸದ್ದು, ಗದರುವ ದನಿಗೆ ಸತ್ತ ಮಾತು  

ಒದ್ದೆ ನಗುವ ಸೆದೆ ಬಡಿದ ಸಂತಾಪ ಸಂಭ್ರಮ   

ಹಾಕದ ಬರೆಗೆ ತನ್ನಿಂತಾನೆ ಸುಟ್ಟಕನಸು  

ಅವರಿಚ್ಛೆಯ ತಾಳಕ್ಕೆ  ಕುಣಿದ   

ಥಕಥೈ ದಿದಿತ್ತಾಂ ..ಅಳುವ ಗೆಜ್ಜೆ   

ಈ ಒಲ್ಲದ ಬದುಕನ್ನು ಅವಳ ಮೇಲೆ ಹೇರಿದ್ದಾರೆ. ಆಸೆ ಕನಸುಗಳನ್ನೆಲ್ಲ ಯಾರ ಮರ್ಜಿಗೋ ಸುಟ್ಟುಕೊಂಡ ಆಕೆ ಅಲ್ಲಿಂದ ಎದ್ದು ಹೋಗಬೇಕೆಂದರೆ ಅದು ಸುಲಭವಲ್ಲ  ಮಹಾಭಾರತದ ದ್ರೌಪದಿಯೋ, ಮೀರಾಳೋ, ಅಕ್ಕನೋ ಇವರೆಲ್ಲರೂ ತಮ್ಮ ದೈವವನ್ನು ಸರಳವಾಗಿ ಗೆದ್ದವರು.ಅದು ಈ ಕಾಲದ ಮಹಿಳೆಗೆ ಸಾಧ್ಯವೇ?  

ಕಟ್ಟಿಕೊಂಡಷ್ಟು ಸುಲಭವಲ್ಲ   

ಬಿಟ್ಟು ಬಿಡುವದು   

ನಾರಿ ಕರೆದಾಕ್ಷಣ ಬಂದು ಒದಗುವುದಕ್ಕೆ  ನರಹರಿಯು   

ನಾಚಿಕೆಯ ಮೂರ್ತಿ  

ಕಣ್ಣ ಕಾಡಿಗೆ ದೃಷ್ಟಿ ಬೊಟ್ಟು  ಇಟ್ಟು  

ಬಗ್ಗಿದರಾಯ್ತು ಹರಸಿ ಹಾರೈಸುತ್ತಾರೆ.  

ಮುತ್ತೈದೆತನ ಸಾವಿರ ವರುಷಕೂ ಸಲೀಸು  

ಎಲ್ಕವನ್ನೂ ಸಹಿಸಿಪ್ರತಿರೋಧಿಸದೆ ಇದ್ದರೆ ಪಯಕತಿವೃತೆತನ ಏನೂಜಷ್ಟದ್ದಲ್ಲ. ಆದರೆ ಹೀಗಿರುವದು ಅವಳಿಗೆ ಇಷ್ಟವಿಲ್ಲ.  ಆದರಿಂದಲೇ ಅವಳ ತೀರ್ಮಾನಿಸುವದು ಹೀಗೆ  

ಹೊರಡಬೇಕಿದೆ ಎಲ್ಲ ಬಿಟ್ಟು   

ಕರೆಯುತ್ತಾರೆಂದು ಕೈಹಿಡಿಯಲಾಗದು   

ಆದರೆ ಹೊರಡುವುದಾದರೂ ಅಷ್ಟು ಸರಳವಿದೆಯೇ? ಎಂಬ ಸಂಶಯಂತೂ ಕವಿಯತ್ರಿಗೆ ಇರುವುದೇ ಆಗಿದೆ. ಅಂದರೆ ಇಷ್ಟೇ ಅವಳಿನ್ನೂ ಗೊಂದಲದಲ್ಲಿದ್ದಾಳೆ.   

ಕೆಲವು ಬಂಧಗಳು ಹೇಳದೇ ಹೊರಟು ಬಿಡುತ್ತವೆ ಅವು ಇರುವವರನ್ನು ಹಿಂಸಿಸುತ್ತವೆ. ಅಂಥದೊಂದು ಚಿತ್ರ ‘ಬಿರಿದ ಸಂಪಿಗೆಯೆಸಳು’ ಕವಿತೆಯಲ್ಲಿದೆ  ‘ಹೊರಟು ಬಿಟ್ಟೆ ಎಕೆ ಇಷ್ಟು ಬೇಗ? ಎಷ್ಟು ಮಾತು ಬಾಕಿಯಿತ್ತು ನನ್ನೊಳಗೆ’ ಎನ್ನುವ ಪ್ರಶ್ನೆಗ ಉತ್ತರ ಸರಳವೂ ಅಲ್ಲ.  

‘ನಾನು ಚೆನ್ನಾಗಿದ್ದೇನೆ’ ಕವಿತೆ ಎಲ್ಲರ ನೋವುಗಳನ್ನೂ ಪಟ್ಟಿ ಮಾಡುತ್ತದೆ. ಬಹಿರಂಗದ ಕಣ್ಣಿಗೆ ನಾನು ಚೆನ್ನಾಗಿದ್ದೇನೆ ಎನ್ನುವ ನಾವು ಅಂತರಂಗದಲ್ಲಿ ಅನುಭವಿಸುವ ನೋವು ಅವವರದೇ ಆಗಿದೆ. ಇಲ್ಲಿ ಕೇವಲ ಹೆಣ್ಣಿನಮಾತ್ರವಲ್ಲ ನಮ್ಮೆಲ್ಲರ ನೋವುಗಳನ್ನು ಕವಿತೆಪಟ್ಟಿ ಮಾಡುತ್ತದೆ.  

ಮದುವೆಯಾದ ಹೆಣ್ಣಿನ ನೋವಿನ ಚಿತ್ರವನ್ನು ನೀಡುವ ಈ ಸಂಕಲನದ ಬಹುಮುಖ್ಯ ಕವಿತೆ ‘’ಎಲ್ಲವೂ ಸರಿಯಾಗಿದೆ’ ಹೌದು ಹೊರಗಿನ ಕಣ್ಣಿಗೆ ಎಲ್ಲವೂ ಸರಿಯಾಗಿದೆ. ಆದರೆ ಅವಳ ವಯಕ್ತಿಕ ಸ್ವಾಂತತ್ರ್ಯಕ್ಕೆಲ್ಲಿ ಜಾಗವಿದೆ? ಎನ್ನುವ ಪ್ರಶ್ನೆ ಎತ್ತುವ ಕವಿತೆಗೆ ಉತ್ತರ ಹುಡುಕಿದರೂ ಸಿಗಲಾರದು.  

ಅವಳ ಬಹಿರಂಗದ ಬದುಕಿಗೇನೂಕೊರತೆಯಿಲ್ಲ.  

ಹೊಸ ಬಡಾವಣೆಯ   

ಚಂದದ ಮನೆ  

ಪುಟ್ಟ ಕೈ ತೋಟ  

ಅಚ್ಚುಕಟ್ಟು  ಅಂಗಳದಲ್ಲಿ  

ಆರಾಮ ಕುರ್ಚಿ ಪಕ್ಕ   

ಪ್ರತಿಮೆಯಾದ   

ನಗುವ ಬುದ್ಧ  

ಅವಳ ಗಂಡ ಸಮಯಕ್ಕೆ ಸರಿಯಾಗಿ ಆಫಿಸಿಗೆ ಹೊರಡುತ್ತಾನೆ. ಅವನ ಹಿಂದೆ ‘ನೆರಳಿನಂತೆ ಕರ್ಚಿಫು ಬ್ರೀಫ ಕೇಸು’ ಹಿಡಿದ ಅವಳು .ಹೊರಟ ಅವನು  

ಕೆನ್ನೆಗೆ  ಕೆನ್ನೆ  

ತಗುಲಿಸಿದ   

ಮುತ್ತಿಟ್ಟನೇ ? ಗೊತ್ತಿಲ್ಲ  

ಕೈ ಬಿಸುತ್ತಾಳೆ  

ಹೊರಟ ಗಂಡನಿಗೆ  

ಅದನ್ನು ಅವನು  

ಕಂಡನೇ?  

ಕೊನೆಗಣ್ಣಿಗೆ ಸಿಕ್ಕ  

ಬಿಂಬದಲ್ಲಿ ಅವನು   

ನಕ್ಕಂತೆ ಕಂಡದ್ದು   

ನಿಜವೇ? ಖಾತ್ರಿಯಿಲ್ಲ.  

ಕವಿತೆಯ ಮಹತ್ವದ ಚಿಂತನೆ ಇರುವುದೇ ಇಲ್ಲಿ . ಹೊರಟ ನಿಂತು ಗಂಡನ ಮುಖದಲ್ಲಿ ಯಾವ ಪ್ರತಿಸ್ಪಂದನೆಯೂ ಇಲ್ಲದುದು ಅವಳ ನೀರಸ ಬದುಕಿಗೆ ಸಾಕ್ಷಿಯಾಗಿವೆ. ಅಷ್ಟೇ ಅಲ್ಲ ಅವಳ ಗಂಡನ ಕ್ರೌರ್ಯವನ್ನು ಜಗತ್ತಿನ ಕಣ್ಣಿಗೆ ಮುಚ್ಚಿ ಹಾಕಿದ್ದಾಳೆ. ‘ತೋಳಿಗೆ ಬಿದ್ದ ಪೆಟ್ಟು, ರಕ್ತ  ಸುರಿದು  ನೀಲಿಗಟ್ಟಿದ್ದ ತೋಳು’ ಇದನ್ನು ನೆರೆಯವಳಿಗೆ ಚಿಲಕ ತಾಕಿತು ಎಂದು ಹೇಳುತ್ತಾಳೆ. ಕೊನೆಯಲ್ಲಿ ಕವಿತೆ   

ಮುಚ್ಚಿದೆ ಬಾಗಿಲ  

ಹೊರಗೆ, ಜಗತ್ತಿಗೆ  

ಎಲ್ಲವೂ ಸರಿಯಾಗಿದೆ  

ಎಂದು ತೋರಿಸುವುದು  

ಅದೆಷ್ಟು ಸುಲಭ!  

ಇಂತದೇ ಚಿತ್ರ ’ಒಂದೇ ಮಗ್ಗಲು’ ಕವಿತೆಯದ್ದು .ಸುಖೀ ಸಂಸಾರ ಸ್ಪರ್ಧೆಗೆ ಆಕೆ ಚಿತ್ರಗಳನ್ನು  ಬರಹವನ್ನು ಕಳಿಸಬೇಕಾಗಿದೆ. ಹಾಳೆಯ ಒಂದೇ ಮಗ್ಗುಲಿಗೆ ಬರದು ಅದೆಲ್ಲವನ್ನೂ ಕಳಿಸುತ್ತಾಳೆ ಕೂಡ. ಆಗ ಕಾಡತೊಡಗುತ್ತದೆ. ಖಾಲಿ ಇರುವ ಆ ಹಾಳೆಯ ಇನ್ನೊಂದು ಬದಿ.    

ಪುಟದ ಒಂದೇ ಮಗ್ಗುಲಲ್ಲಿ   

ಹೇಳದ ಇರುವ ಇನ್ನೊಂದು   

ಮಗ್ಗಲು ಮುಲುಗುಡುತ್ತಿದೆ.   

ಮತ್ತೆ ವಿವರಿಸಬೇಕಾಗಿಲ್ಲ. ಇಷ್ಟು ಸಾಕು. ಆ ಇನ್ನೊಂದು ಬದಿಯ ವಿವರಗಳು ಮೇಲಿನ ಕವಿತೆ ಯಲ್ಲಿಯೂ ಬಂದಿವೆ.  ಕವಿತೆ ಅವಳ ತೋರಿಕೆಯ ಬದುಕಿನ ಹಿಂದೆ ಮುಚ್ಚಿಟ್ಟ ದುಖವನ್ನು ಚಿತ್ರಿಸುತ್ತದೆ. ಉರಿವ ಸಿಗರೇಟಿನಂತೆ ಸುಡುವ ಅವಳ ಬದುಕಿನದು. ಸಿಗರೇಟು ಸುಟ್ಟಾಗಲಾದರೂ ಉರಿದು ಹೋಗಬಹುದು. ಅದರೆ ಸುಡುವ ಹೆಣ್ಣಿನ ಬದುಕು ಅದಕ್ಕೂ ಭಿಕರ ಅದನ್ನು ಸಿಗರೇಟು -2 ಕವಿತೆ   

ಪ್ರತಿ ಘಳಿಗೆಗೂ ಏಕಿಷ್ಟು ಶತಮಾನದಷ್ಟು ಉದ್ದ ನಿಟ್ಟುಸಿರು?  

ಸಿಗರೇಟು ಆರಿದ ಮೇಲೂ ಬೂದಿ ತಣ್ಣಗಾದ ಮೇಲೂ   

ಉರಿಯುತ್ತಲೇ ಇರುತ್ತದೆ ಬೆಂಕಿ ತಳಮಳಿಸುತ್ತಾ   

ಕೆಂಡದುಂಡೆಗಳಂತೆ  ಆ ನಿನ್ನ ಕಣ್ಣುಗಳಲ್ಲಿ !  

ಬೆಂಕಿ ಆರಿದರೂ ಉರಿಯುತ್ತಲೇ ಇರುವ ಬೆಂಕಿಗೆ ಅವಳ ಬದುಕನ್ನು ಕವಿತೆ ಹೋಲಿಸುತ್ತದೆ.   

 ಕೆಲವು ಕವಿತೆಗಳು ಮುಕ್ತ ಬದುಕಿಗೆ ಹಾರೈಸಿದ’ ಅವಳ’ ಕನಸುಗಳನ್ನು ಚಿತ್ರಿಸುತ್ತವೆ. ಅದು ಮುಕ್ತ ಸ್ವತಂತ್ರ ಬದುಕು.ಇದು ಹೊಸಕಾಲದ ಹೆಣ್ಣಿನ ಹುಡುಕಾಟ. ’ಹುಡುಗಿಯರು,’ ನಿನ್ನ ಮನೆಗೆ ಬಾಗಿಲೆಲ್ಲಿದೆ ’ಇಂತಹ ಕವಿತೆಗಳಲ್ಲಿ ಆ ಹುಡುಕಾಟವಿದೆ. ಅದು ಅಂತ್ಯವಿಲ್ಲದ ತಹತಹ ಕೂಡ. ಹುಡುಗಿಯರು ಕವಿತೆಯಲ್ಲಿನ ಮುಕ್ತತೆಯ ಬಯಕೆಯನ್ನು ಓದಿ ಸವಿಯುವದಷ್ಟೇ ವಿವರಿಸಿ ಹೋದರೆ ಅರ್ಥವಿರದು.   

ಅದೊಂದು ವಿಶೇಷ ರಾತ್ರಿ  

ನಿನಗೆ ಬೇಕಾದುದನ್ನೆಲ್ಲ ಪಡೆದುಕೋ ಎಂದು  

ಆದೇವರೇ ಮೊಗೆದು ಕೊಟ್ಟ ಅಪೂರ್ವತೆ   

ಹಕ್ಕಿಯೊಂದು ನಿರಂತರ   

ಚಿಲಿಪಿಲಿಗುಟ್ಟುತ್ತಿದೆ.   

ಹೊರಗೆ, ಒಳಗೆ   

ಮೈ ರೋಮಗಳು   

ಹಕ್ಕಿ ಕೊಕ್ಕುಗಳಂತೆ   

ಬಾಯ್ದೆರೆದು ಬೇಡುತ್ತವೆ ಚೀರುತ್ತವೆ  

ಈ ಕ್ಷಣಕ್ಕೆ ಕೊನೆ ಬೇಡವೆಂದು...  

ಇಂಥ ಕವಿತೆಗಳ ಲೋಕ ಸಂಪೂರ್ಣ ಮುಕ್ತವಾದದ್ದು. “ಮಲಗುವ ಮೊದಲು ಕಾಯ ಬೇಕು, ಕಾಮ ಬೇಕು ,ಮತ್ತು ಕನಸು ಬೇಕು. ಹನಿ ಸಾಲುಸಾಲಿಗೂ ಹಾಡು ಬೇಕು, ಅದು ಕಾಡ ಬೇಕು ಮತ್ತೆ ಕನಸು ಬೇಕು , ನನಸಲ್ಲಿ ನಿನ್ನ ತೋಳುದಿಂಬು ಬೇಕು”ಎನ್ನುವ ಸಾಲುಗಳನ್ನು ವಿವರಿಸುವ ಅಗತ್ಯವಾದರೂ ಎಲ್ಲಿದೆ.   

    ಆಧುನಿಕ ಜಗತ್ತಿನ ಹೆಣ್ಣು ಕಾಣುವ ಜಗತ್ತು ಈ ಕವಿತೆಗಳದು.ಆಕೆ ಹೆಂಡತಿ, ಮಕ್ಕಳ ತಾಯಿ, ನಿಜ .ಆದರೆ ಹೊರಗೆ ಕಾಣುವ ಸಂತೃಪ್ತ ಬದುಕಿನೊಳಿರುವ ಕೊರತೆಗಳನ್ನು ಆರತಿಯವರ ಕವಿತೆ ಹುಡುಕದೇ ಬಿಟ್ಟಿಲ್ಲ. ಅಂತೆಯೇ ವಿಮರ್ಶಕಿ , ಕವಿಯತ್ರಿ ಡಾ.ವಿನಯ ವಕ್ಕುಂದ ಅವರು ಹೇಳುವಂತೆ “ಇವು ಒಡಲ ನೂಲ ಕವಿತೆಗಳು”.  

ಇಷ್ಟಾಗಿಯೂ ಹೇಳುವದು ಮುಗಿದಿದೆಯೇ? ಸ್ವತ: ಕವಿಯತ್ರಿಯೇ  “ಹೇಳುವಷ್ಟು  ಹೇಳಿದ್ದೇನೆ . ಹೇಳಲಾಗದ್ದು ಬೇಕಾದಷ್ಟಿದೆ. ಹಾಗಾಗಿ ಹೇಳಲು ಇನ್ನೂ ಎಷ್ಟೋ ಉಳಿಸಿಕೊಂಡಿದ್ದೇನೆ” ಎನ್ನುವ ಅವರ ಸಾಲುಗಳನ್ನು ನೆನಯಬಹುದು,. ಈ ಹೇಳುವಿಕೆ ನಿಲ್ಲದು. ನಿರಂತರ.. ಕೂಡ.ಒಂದು ಅರ್ಥಪೂರ್ಣ ಕವಿತೆಗಳ ಓದನ್ನು ನಿಮ್ಮ ಮುಂದಿರಿಸುವ ಪ್ರಯತ್ನಮಾಡಿದ್ದೇನೆ.ಕುತೂಹಲ ಮೂಡಿದರೆ ’ ಸ್ಮೋಕಿಂಗ್ ಝೇನ್ ’ ತರಿಸಿ ಓದಿ.  

ಪುಸ್ತಕ - ಸ್ಮೋಕಿಂಗ್ ಝೇನ್  

ಪ್ರಕಾಶನ- ಬಯುರೂಪಿ  

ಪ್ರಕಟಿತ ವರ್ಷ-2018  

ಬೆಲೆ-80  

- ಡಾ.ವೈ.ಎಂ. ಯಾಕೊಳ್ಳಿ,

ಸವದತ್ತಿ   


-*)=()=(*- 



ಸುದ್ದಿ ಓದಿ