ಬಳ್ಳಾರಿ

ವರ್ತಮಾನದಲ್ಲಿ ಸ್ಲಂ ಜನರು ಮತ್ತು ಸಂವಿಧಾನದರಾಜ್ಯ ಮಟ್ಟದ ಪ್ರತಿನಿಧಿಗಳ ಸಮ್ಮೇಳನದ ಉದ್ಘಾಟನೆ

ವರ್ತಮಾನದಲ್ಲಿ ಸ್ಲಂ ಜನರು ಮತ್ತು ಸಂವಿಧಾನದರಾಜ್ಯ ಮಟ್ಟದ ಪ್ರತಿನಿಧಿಗಳ ಸಮ್ಮೇಳನದ ಉದ್ಘಾಟನೆ

ಬಳ್ಳಾರಿ 03: ಕರ್ನಾಟಕ ಸಾವಿತ್ರಿ ಬಾಪುಲೆ ಅವರ 192 ನೇ ಜಯಂತಿ ಅಂಗವಾಗಿ ವರ್ತಮಾನದಲ್ಲಿ ಸ್ಲಂ ಜನರು ಮತ್ತು ಸಂವಿಧಾನದ ಕುರಿತು ರಾಜ್ಯ ಮಟ್ಟದ ಪ್ರತಿನಿಧಿಗಳ ಸಮ್ಮೇಳನ ಎಂದು ಸ್ಲಂ ಜನ ಆಂದೋಲನ ಜಿಲ್ಲಾಧ್ಯಕ್ಷ ಶೇಖರ್ ಬಾಬು  ತಿಳಿಸಿದರು.  

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯು ಕಳೆದ ಒಂದು ದಶಕಗಳಿಗೂ ಮೇಲ್ಪಟ್ಟು ರಾಜ್ಯದಲ್ಲಿರುವ ಸ್ಲಂ ನಿವಾಸಿಗಳು ಮತ್ತು ನಗರ ವಂಚಿತ ಸಮುದಾಯಗಳ ಸಂವಿಧಾನ ಬದ್ಧವಾದ ಬದುಕುವ ಹಕ್ಕು, ಸಾಮಾಜಿಕ ನ್ಯಾಯ ಹಾಗೂ ಮಾನವ ಘನತೆಯ ಜಾಗೃತಿಗಾಗಿ ರಾಜ್ಯದ 18 ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳನ್ನು ಸಂಘಟಿಸುತ್ತ ರಾಜ್ಯ ಮಟ್ಟದ ಸ್ಲಂ ಜನರ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದ್ದು 40 ಸಾವಿರಕ್ಕು ಹೆಚ್ಚು ಸದಸ್ಯತ್ವವನ್ನು ಮತ್ತು 816 ಶಾಖಾ ಘಟಕಗಳನ್ನು ಹೊಂದಿದ್ದು ಕೊಳಗೇರಿಗಳಲ್ಲಿ ಬದುಕುತ್ತಿರುವ ಮೊದಲನೆಯ ತಲೆಮಾರಿನ ಯುವ ಜನಾಂಗ ಮುನ್ನಡೆಸುತ್ತಿರುವ ಏಕೈಕ ನಗರ ವಂಚಿತ ಸಮುದಾಯಗಳ ವೇದಿಕೆಯಾಗಿ ರೂಪಗೊಂಡಿದೆ. ಈ ಒಂದು ದಶಕದಲ್ಲಿ ರಾಜ್ಯದ ಸ್ಲಂ ಜನರಲ್ಲಿ ಸಂಘಟನೆಯ ಸಂಚಲವನ್ನು ಸೃಷ್ಟಿಸಿ ಆಂದೋಲನವಾಗಿ ಪಕ್ವತೆಗೊಂಡಿರುವುದು ಕರ್ನಾಟಕದ ಇತಿಹಾಸವಾಗಿದೆ. ಕರ್ನಾಟಕದಲ್ಲಿ ಕೊಳಗೇರಿ ಜನರ ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಸಮರ್ಥವಾಗಿ ಪ್ರಭುತ್ವದ ಮುಂದೆ ಮಂಡಿಸುವಂತಹ ವಾತವರಣವನ್ನು ಸ್ಲಂ ಜನಾಂದೋಲನಾ ಕರ್ನಾಟಕ ಮಾಡಿದ್ದು ಯಾವ ಕೊಳಗೇರಿ ಜನರನ್ನು ಪ್ರಭುತ್ವ ಓಟ್ ಬ್ಯಾಂಕ್ ಮಾಡಿಕೊಂಡಿತ್ತೊ, ಈ ಪರಿಸ್ಥಿತಿಯನ್ನು ಅಳಿಸಿ ಸ್ಲಂ ಜನರು ರಾಜಕೀಯ ಶಕ್ತಿ ಎನ್ನುವುದನ್ನು ಸಾಬೀತು ಪಡಿಸುವಲ್ಲಿ ಹಾಗೂ ಸ್ಲಂ ಜನರಿಗೆ ಗುರುತು ಕಟ್ಟಿಕೊಡವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ನಮ್ಮ ಜನರಲ್ಲಿ ರಾಜಕೀಯ ಪ್ರಜ್ಞೆ ಮೊಳಕೆ ಹೊಡೆಯಲು ಇನ್ನೂ ಸಮಯಬೇಕಿದೆ.

ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿರುವ ನಮಗೆ ರಾಜ್ಯದ ಹಲವಾರು ದಲಿತ, ಎಡಪಂಥೀಯ,ಮಾನವ ಹಕ್ಕು ಸಂಘಟನೆಗಳು ಸಾಹಿತಿಗಳು, ಪ್ರಾಧ್ಯಾಪಕರು, ಬುದ್ಧಿ ಜೀವಿಗಳು, ಪ್ರಗತಿಪರರು ಬೆಂಬಲವಾಗಿ ನಿಂತಿದ್ದಾರೆ.ಈ ಆಂದೋಲನಕ್ಕೆ ಹಲವಾರು ಜನರ ನಿರಂತರ ಪರಿಶ್ರಮವಿದ್ದು ದೀರ್ಘಕಾಲೀಕವಾದ ಈ ಪ್ರಕ್ರಿಯೆಯಿಂದ ರಾಜ್ಯದಲ್ಲಿ ಸ್ಲಂ ಜನರ ಜಾಗೃತಿ ಪ್ರಜ್ಞೆ ಹೆಚ್ಚುತ್ತಿದೆ. ಬೌದ್ಧಿಕವಾಗಿ ಸಂಘಟನೆ ಭಾರತದ ಸಂವಿಧಾನದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಗರ ವಂಚಿತ ಸಮುದಾಯಗಳನ್ನು ಎಚ್ಚರಿಸುತ್ತಿದ್ದು ಭವಿಷ್ಯದಲ್ಲಿ ಸ್ಲಂಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧಗೊಳಿಸಲಾಗಿದೆ. ಹಾಗಾಗಿ ಸ್ಲಂ ಜನಾಂದೋಲನ ಕರ್ನಾಟಕ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಸೈದ್ಧಾಂತಿಕ ನೆಲೆಯಲ್ಲಿ ಎಚ್ಚರಿಕೆ ಮತ್ತು ಜಾಗೃತಿಯ ಹೆಜ್ಜೆ ಇಟ್ಟಿರುವುದು ವಿಶೇಷವಾಗಿದೆ. ಕಳೆದ 20 ವರ್ಷಗಳಲ್ಲಿ ನಗರೀಕರಣದ ವೇಗ ಭಾರತದಲ್ಲಿ ದ್ವಿಗುಣವಾಗುತ್ತಿದ್ದು ಆಳುವ ಸರ್ಕಾರಗಳು ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಿ ಸಂವಿಧಾನವನ್ನು ಕುಬ್ಜಗೊಳಿಸುತ್ತಿರುವುದ್ದರಿದ ನಗರವಂಚಿತ ಸಮುದಾಯಗಳಿಗೆ ಸಂವಿಧಾನದ ಸಮಪಾಲು ಸಮಬಾಳು ಖಾತ್ರಿ ಮತ್ತು ಮಾನವ ಘನತೆಯ ಖಾತ್ರಿ ಸವಾಲಾಗಿದೆ. ಇಂತಹ ಸಂದಿಗ್ಧತೆಯಲ್ಲಿ ನಮ್ಮ ಅಸ್ಥಿತ್ವಕ್ಕಾಗಿ ನಾವು ಸಂಘಟಿತರಾಗಬೇಕಿದೆ.  

ಸ್ಲಂ ಜನಾಂದೋಲನ ಕರ್ನಾಟಕ ಸಾವಿತ್ರಿ ಬಾಯಿಪುಲೆ ಅವರ 192 ನೇ ಜಯಂತಿ ಅಂಗವಾಗಿ “ವರ್ತಮಾನದಲ್ಲಿ ಸ್ಲಂ ಜನರು ಮತ್ತು ಸಂವಿಧಾನ ”ಕುರಿತಾದ ರಾಜ್ಯ ಮಟ್ಟದ ಪ್ರತಿನಿಧಿಗಳ ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಹೆಚ್‌.ಎನ್ ನಾಗಮೋಹನ್ ದಾಸ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ರಂಗಭೂಮಿ ಕಲಾವಿದ ಡಾ.ದು.ಸರಸ್ವತಿ ವಹಿಸುವರು. ಸಾಮಾಜಿಕ ಕಾರ್ಯಕರ್ತ ಶಿವಸುಂದರ್ ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸಾಹಿತಿಗಳಾದ ಡಾ.ಬಂಜಗೆರೆ ಜಯಪ್ರಕಾಶ್ ಪಾಲ್ಗೊಳ್ಳಲಿದ್ದು, ಸಮ್ಮೇಳದನ ಪ್ರಸ್ತಾವನೆಯನ್ನು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾಡಲಿದ್ದಾರೆ. ಈ ಸಮ್ಮೇಳದಲ್ಲಿ ವಿವಿಧ ಜಿಲ್ಲೆಗಳ 50 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 


ಸುದ್ದಿ ಓದಿ